Advertisement

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

11:37 PM Nov 04, 2024 | Team Udayavani |

ಮೆಲ್ಬನ್‌: ನಾಯಕ ಪ್ಯಾಟ್‌ ಕಮಿನ್ಸ್‌ ಅವರ ತಾಳ್ಮೆಯ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಪ್ರವಾಸಿ ಪಾಕಿಸ್ಥಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್‌ಗಳ ರೋಮಾಂಚಕ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಆಸ್ಟ್ರೇಲಿಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಅಡಿಲೇಡ್‌ನ‌ಲ್ಲಿ ನ. 8ರಂದು ನಡೆಯಲಿದೆ.

Advertisement

ಗೆಲ್ಲಲು 204 ರನ್‌ ಗಳಿಸುವ ಸುಲಭ ಸವಾಲು ಪಡೆದ ಆಸ್ಟ್ರೇಲಿಯ ತಂಡವು ಪಾಕಿಸ್ಥಾನದ ದಾಳಿಗೆ ಕುಸಿಯ ತೊಡಗಿತು. ಮಧ್ಯಮ ಕ್ರಮಾಂಕದಲ್ಲಿ ಹಲವು ವಿಕೆಟ್‌ ಉರುಳಿದ ಕಾರಣ ತಂಡ 155 ರನ್‌ ತಲಪುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆಬಳಿಕ ಕಮಿನ್ಸ್‌ ತಾಳ್ಮೆಯ ಆಟವಾಡಿದ್ದರಿಂದ ಆಸ್ಟ್ರೇಲಿಯ 33.3 ಓವರ್‌ಗಳಲ್ಲಿ 8 ವಿಕೆಟಿಗೆ 204 ರನ್‌ ಬಾರಿಸಿ ಜಯ ಸಾಧಿಸಿತು. 31 ಎಸೆತಗಳಿಂದ 32 ರನ್‌ ಗಳಿಸಿದ ಕಮಿನ್ಸ್‌ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.

ಈ ಮೊದಲು ಮಿಚೆಲ್‌ ಸ್ಟಾರ್ಕ್‌, ಕಮಿನ್ಸ್‌ ಮತ್ತು ಝಂಪ ಅವರ ದಾಳಿಗೆ ಕುಸಿದ ಪಾಕಿಸ್ಥಾನ ತಂಡವು 46.4 ಓವರ್‌ಗಳಲ್ಲಿ 203 ರನ್ನಿಗೆ ಆಲೌಟಾಯಿತು. 44 ರನ್‌ ಗಳಿಸಿದ ನಾಯಕ ಮೊಹಮ್ಮದ್‌ ರಿಜ್ವಾನ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಕೊನೆ ಹಂತದಲ್ಲಿ ಬಿರುಸಿನ ಆಟವಾಡಿದ ನಶೀಮ್‌ ಷಾ 39 ಎಸೆತಗಳಲ್ಲಿ 40 ರನ್‌ ಹೊಡೆದರು. ಟಿ20 ವಿಶ್ವಕಪ್‌ ಬಳಿಕ ಮೊದಲ ಪಂದ್ಯ ಆಡಿದ ಕಮಿನ್ಸ್‌ 39 ರನ್ನಿಗೆ 2 ವಿಕೆಟ್‌ ಕಿತ್ತು ಬೌಲಿಂಗ್‌ನಲ್ಲೂ ಗಮನ ಸೆಳೆದರು. 33 ರನ್ನಿಗೆ 3 ವಿಕೆಟ್‌ ಕಿತ್ತ ಸ್ಟಾರ್ಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಬ್ರೆಟ್‌ ಲೀ ದಾಖಲೆ ಮುರಿದ ಸ್ಟಾರ್ಕ್‌
ತವರಿನಲ್ಲಿ 54ನೇ ಏಕದಿನ ಪಂದ್ಯವ ನ್ನಾಡಿದ ಸ್ಟಾರ್ಕ್‌ 100 ವಿಕೆಟ್‌ ಪೂರ್ತಿ ಗೊಳಿಸುವ ಮೂಲಕ ಬ್ರೆಟ್‌ ಲೀ ಸ್ಥಾಪಿ ಸಿದ ದಾಖಲೆಯನ್ನು ಮುರಿದರು. ಬ್ರೆಟ್‌ ಲೀ ಅವರು 55 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯದ ಏಕದಿನ ಬೌಲರ್‌ಗಳ ಪೈಕಿ ಅವರೀಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಗ್ಲೆನ್‌ ಮೆಕ್‌ಗ್ರಾಥ್‌, ಬ್ರೆಟ್‌ ಲೀ ಮತ್ತು ಶೇನ್‌ ವಾರ್ನ್ ಮೊದಲ ಮೂವರು ಬೌಲರ್‌ಗಳು.

ಆಸ್ಟ್ರೇಲಿಯದ ಆರಂಭ ಉತ್ತಮ ವಾಗಿತ್ತು. ಜೋಶ್‌ ಇಂಗ್ಲಿಷ್‌ ಮತ್ತು ಸ್ಟೀವ್‌ ಸ್ಮಿತ್‌ ಅವರ ಉತ್ತಮ ಆಟದಿಂದಾಗಿ ತಂಡ 2 ವಿಕೆಟಗೆ 113 ರನ್‌ ಗಳಿಸಿ ಸುಲಭ ಗೆಲುವಿನತ್ತ ಹೊರಟಿತ್ತು. ಆಬಳಿಕ ವೇಗಿ ಹ್ಯಾರಿಸ್‌ ರವೂಫ್ ದಾಳಿಗೆ ತಂಡ ಹಠಾತ್‌ ಕುಸಿಯಿತು. 155 ರನ್‌ ತಲಪುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು.

Advertisement

ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 46.4 ಓವರ್‌ಗಳಲ್ಲಿ 203 (ಮೊಹಮ್ಮದ್‌ ರಿಜ್ವಾನ್‌ 44, ನಶೀಮ್‌ ಷಾ 40, ಬಾಬರ್‌ ಅಜಂ 37, ಸ್ಟಾರ್ಕ್‌ 33ಕ್ಕೆ 3, ಕಮಿನ್ಸ್‌ 39ಕ್ಕೆ 2, ಝಂಪ 64ಕ್ಕೆ 2); ಆಸ್ಟ್ರೇಲಿಯ 33.3 ಓವರ್‌ಗಳಲ್ಲಿ 8 ವಿಕೆಟಿಗೆ 204 (ಇಂಗ್ಲಿಷ್‌ 49, ಸ್ಟೀವ್‌ ಸ್ಮಿತ್‌ 44, ಕಮಿನ್ಸ್‌ 32 ಔಟಾಗದೆ, ಹ್ಯಾರಿಸ್‌ ರವೂಫ್ 67ಕ್ಕೆ 3, ಶಾಹೀನ್‌ ಶಾ ಅಫ್ರಿದಿ 43ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next