Advertisement

BJP; ಜಾರ್ಖಂಡ್ ನಲ್ಲಿ ಭುಗಿಲೆದ್ದ ಭಿನ್ನಮತ:ಬಂಡಾಯ, ಪರಿವಾರವಾದ ಆರೋಪ

05:28 PM Oct 21, 2024 | Team Udayavani |

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಲವು ಮುಖಂಡರು ಬಂಡಾಯ ಸಾರುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.

Advertisement

ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಬಿಜೆಪಿ ಸಹ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮ “ಜಾರ್ಖಂಡ್‌ನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ನಂತರ ಸ್ವಲ್ಪ ಅಸಮಾಧಾನವಿದೆ ಮತ್ತು ಕೆಲವರು ರಾಜೀನಾಮೆಯನ್ನೂ ನೀಡಿದ್ದಾರೆ . ನಾವು ಮತ್ತು ಜನರು ಎನ್ ಡಿಎ ಗೆಲ್ಲಿಸಲು ಉತ್ಸುಕರಾಗಿದ್ದೇವೆ. ನಮ್ಮ ಪಕ್ಷವು ದೊಡ್ಡದು ಮತ್ತು ಯಾರಾದರೂ ಅತೃಪ್ತರಾಗಿದ್ದರೆ, ನಾವು ಅವರೊಂದಿಗೆ ಮಾತನಾಡುತ್ತೇವೆ, ಪಟ್ಟಿಯನ್ನು ಪ್ರಕಟಿಸಿದ ನಂತರ 2-3 ದಿನಗಳವರೆಗೆ ಅತೃಪ್ತಿ ಇರುತ್ತದೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಪರಿವಾರವಾದವಿಲ್ಲ.ಮಾಜಿ ಸಿಎಂ ಅರ್ಜುನ್ ಮುಂಡಾ ಸ್ಪರ್ಧಿಸುತ್ತಿಲ್ಲ ಬದಲಾಗಿ ಅವರ ಪತ್ನಿ ಸ್ಪರ್ಧಿಸುತ್ತಿದ್ದಾರೆ. ಮಾಜಿ ಸಿಎಂ ರಘುಬರ್ ದಾಸ್ ಸ್ಪರ್ಧಿಸುತ್ತಿಲ್ಲ,ಅವರ ಸೊಸೆ ಪೂರ್ಣಿಮಾ ಲಲಿತ್ ದಾಸ್ ಸ್ಪರ್ಧಿಸುತ್ತಿದ್ದಾರೆ” ಎಂದು ಶರ್ಮ ಹೇಳಿದರು.

81 ಸ್ಥಾನಗಳ ಪೈಕಿ ಎನ್ ಡಿಎ ಮೈತ್ರಿಕೂಟದಡಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಆ ಪೈಕಿ 66 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಏಕಕಾಲದಲ್ಲಿ ಪ್ರಕಟಿಸಿದೆ. ಮಿತ್ರ ಪಕ್ಷಗಳಾದ ಎಜೆಎಸ್‌ಯು 10 ಸ್ಥಾನಗಳಲ್ಲಿ, ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಎಲ್‌ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ.

ಜಾರ್ಖಂಡ್ ಬಿಜೆಪಿ ಅಧ್ಯಕ್ಷ, ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಧನ್ವಾರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಜೆಎಂಎಂ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಿಎಂ ಚಂಪೈ ಸೊರೆನ್ ಸಾರಿಕೆಲ್ಲಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.

Advertisement

ಸೀತಾ ಸೊರೇನ್ ಗೆ ಟಿಕೆಟ್

ಪ್ರಮುಖ ಅಭ್ಯರ್ಥಿಗಳ ಪೈಕಿ ಸೀತಾ ಸೊರೆನ್ ಜಮ್ತಾರಾದಿಂದ ಕಣಕ್ಕಿಳಿಯಲಿದ್ದಾರೆ. ಜಾರ್ಖಂಡ್ ಸಿಎಂ, ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರ ಅತ್ತಿಗೆ ಸೀತಾ ಸೊರೇನ್ ಅವರಿಗೂ ಬಿಜೆಪಿ ಟಿಕೆಟ್ ನೀಡಿದೆ. ಈ ವರ್ಷದ ಮೇ ತಿಂಗಳಲ್ಲಿ “ಪಕ್ಷ ವಿರೋಧಿ ಚಟುವಟಿಕೆ” ಗಾಗಿ ಜೆಎಂಎಂನಿಂದ ಉಚ್ಚಾಟಿಸಲಾಗಿತ್ತು. ಮೂರು ಬಾರಿ ಶಾಸಕಿಯಾಗಿರುವ ಸೀತಾ ಸೊರೇನ್ ಅವರ ಪತಿ ದುರ್ಗಾ ಸೊರೇನ್ 2009 ರಲ್ಲಿ ನಿಧನ ಹೊಂದಿದ್ದರು. ಜೆಎಂಎಂ ನಲ್ಲಿ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯವನ್ನು ಉಲ್ಲೇಖಿಸಿದ ಬಳಿಕ ಪಕ್ಷದಿಂದ ಹೊರ ಹಾಕಲಾಗಿತ್ತು.

ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next