Advertisement
ಲೋಕಸಭೆ ಚುನಾವಣೆಗೆ ದಿಕ್ಸೂಚಿಯೆಂದೇ ಪರಿಗಣಿಸಿರುವುದರಿಂದ ರಾಜ್ಯ ವಿಧಾನಸಭೆ ಚುನಾವಣೆ ಭಾರಿ ಮಹತ್ವ ಪಡೆದಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಪ್ರಮುಖ ಮೂರು ಪಕ್ಷಗಳು ಕಾದಾಟ ನಡೆಸಿವೆ. ಗಣ್ಯಾತಿಗಣ್ಯರಸ್ಪರ್ಧೆ, ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಜಿಲ್ಲೆ ಚರ್ಚೆಯಲ್ಲಿದೆ. ಫಲಿತಾಂಶ ಹೊರಬೀಳಲು ಒಂದು ದಿನ ಮಾತ್ರ ಬಾಕಿ ಇದ್ದು, ಪ್ರಮುಖ ಪಕ್ಷದ ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ. ಜಿಲ್ಲೆಯಲ್ಲಿ ಒಟ್ಟು 64 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರ ಪ್ರಭುಗಳು ತಮ್ಮ ಹಕ್ಕಿನ ಮೂಲಕ ಯಾರ ಭವಿಷ್ಯವನ್ನು ನಿರ್ಧರಿಸಿದ್ದಾರೆ ಎಂಬುದು ಮಂಗಳವಾರ ಗೊತ್ತಾಗಲಿದೆ.
ಕದನ ಕಲಿಗಳಲ್ಲಿ ಎದೆಬಡಿತ: “ಖತಲ್ ರಾತ್ರಿ’ ಎಂದೆ ಕರೆಯಿಸಿಕೊಳ್ಳುವ ಚುನಾವಣೆಯ ಮುನ್ನಾ ದಿನ ಮತದಾರರನ್ನು ಮನವೊಲಿಸುವ ಕೊನೆಯ ಪ್ರಯತ್ನ ಭರ್ಜರಿಯಾಗಿ ನಡೆದಿತ್ತು. ಪೊಲೀಸ್ ಕಣ್ಗಾವಲು ನಡುವೆಯೂ
ಹಲವೆಡೆ ಹಣ- ಹೆಂಡದ ಹೊಳೆ ಹರಿದಿದೆ. ಇದೆಲ್ಲದರ ನಡುವೆ ಕೊನೆಗೂ ಚುನಾವಣೆಯ ಫಲಿತಾಂಶ ಎದುರಾಗಲಿದ್ದು, ಇದರಿಂದ ಅಭ್ಯರ್ಥಿಗಳ ಎದೆಬಡಿತ ಹೆಚ್ಚಿದೆ. ಮತದಾರರು ಯಾರಿಗೆ ಒಲಿಯಲಿದ್ದಾರೆ ಎಂಬ ಆತಂಕ ಅವರಲ್ಲಿ ಕಾಡುತ್ತಿದೆ.
ಮತ ಪೆಟ್ಟಿಗೆಗಳು ನಗರದ ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದ ಸ್ಟ್ರಾಂಗ್ ರೂಂನಲ್ಲಿ ಮೀಸಲು ಪಡೆಯ ಯೋಧರ ಕಾವಲಿನಲ್ಲಿ ಭದ್ರವಾಗಿವೆ. ಇದೇ ಮಹಾವಿದ್ಯಾಲಯದಲ್ಲಿ ಫೆ.15ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ ಜಿಲ್ಲೆಯಲ್ಲಿ ಮತದಾನದ ಬಳಿಕ ಸೋಲು- ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಗೆಲುವು ನಿಶ್ಚಿತ ಎಂದು ಹೇಳಿಕೆ ನೀಡುತ್ತಿದ್ದಾರೆ. ಗಡಿ ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಇದೇ ಮೊದಲು. ಬೀದರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ, ಬೀದರ ದಕ್ಷಿಣದಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ನೇರಾ ನೇರ ಸ್ಪರ್ಧೆ ಇದೆ. ಔರಾದನಲ್ಲಿ ಬಿಜೆಪಿ ಅಭ್ಯರ್ಥಿ ಪರ ಒಲವು ಕಂಡು ಬಂದಿದ್ದು, ಬಸವಕಲ್ಯಾಣದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ನೆಟ್ ಟು ನೆಟ್ ಫೈಟ್ ಇದೆ. ಇನ್ನೂ ಭಾಲ್ಕಿ ಮತ್ತು ಹುಮನಾಬಾದ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಹೆಚ್ಚಿದೆ.
Related Articles
Advertisement