Advertisement

ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

09:37 PM Sep 15, 2019 | Lakshmi GovindaRaju |

ಚಾಮರಾಜನಗರ: ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಮಾಜಿ ಸಚಿವ, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾ ಉಪ್ಪಾರ ಸಂಘ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ಗಡಿಕಟ್ಟೆಮನೆ ಯ ಜಮಾನರು ಹಾಗೂ ಸಮಾಜದ ಸಹಯೋಗದೊಂದಿಗೆ ಏರ್ಪಡಿಸಿದ್ದ 2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆ ಸಾಧಕನ ಸ್ವತ್ತು: ಪ್ರತಿಭೆ ಸಾಧಕನ ಸ್ವತ್ತಾಗಿದ್ದು, ಯಾರು ಕಷ್ಟಪಟ್ಟು ಆಸಕ್ತಿಯಿಂದ ಶ್ರಮಿಸುತ್ತಾರೋ ಅವರು ಸಾಧನೆ ಮಾಡಲು ಸಾಧ್ಯ.ಅದಕ್ಕೆ ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅದಕ್ಕೆ ನಿದರ್ಶನವಾಗಿದೆ ಎಂದರು.

ಸಮಾಜಕ್ಕೆ ಕೊಡುಗೆ ನೀಡಿ: ಸಮಾಜವು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಬೇಕಾದರೆ ನಾವು ಮಾಡುವ ಸಮಾಜಮುಖೀ ಕೆಲಸಗಳಿಂದ ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜದ ಸೇವೆಗಾಗಿ ಮುಡಿಪಾಗಿಡಬೇಕೆಂದು ಸಲಹೆ ನೀಡಿದರು.

ಸಮಾಜಕ್ಕೆ ಆಸ್ತಿಯಾಗಿ ಸೇವೆ ಸಲ್ಲಿಸಿ: ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್‌ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು ಅದನ್ನು ಒಂದು ವ್ರತದಂತೆ ಕಟ್ಟುನಿಟ್ಟಾಗಿ ನಿರ್ವಹಿಸಬೇಕು.ಅದಕ್ಕಾಗಿ ತಾಳ್ಮೆ, ಆಸಕ್ತಿಗಳಂಥ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜಕ್ಕೆ ಆಸ್ತಿಗಳಾಗಿ ಸೇವೆ ಮಾಡಬೇಕೆಂದು ತಿಳಿಸಿದರು.

Advertisement

ಶ್ರಮ ಪಟ್ಟು ಅಧ್ಯಯನ ಮಾಡಿ: ವಕ್ತಾರ ಮಂಗಲ ಶಿವಕುಮಾರ್‌ ಮಾತನಾಡಿ, ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಇಂದೇ ಗುರಿ ನಿರ್ಧರಿಸಬೇಕು.ಗುರಿ ಇಲ್ಲದ ಜೀವನ ಅತಂತ್ರವಾಗುತ್ತದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಜೀವನದ ಭವಿಷ್ಯ ನಿರ್ಧರಿಸುವ ಉತ್ತಮ ಹಂತವಾಗಿದ್ದು, ಶ್ರಮಪಟ್ಟು ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.

ಜ್ಞಾನಕ್ಕಿಂತ ಮಿಗಿಲಾದದ್ದಿಲ್ಲ: ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ನೂರೊಂದುಶೆಟ್ಟಿ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯವು ಜೀವನದ ಎರಡು ಮುಖ್ಯವಾದ ಸಂಗತಿಗಳಾಗಿದ್ದು ವಿದ್ಯಾರ್ಥಿಗಳು ಇವೆರೆಡನ್ನು ಸಮತೋಲನದಲ್ಲಿ ಶ್ರಮಪಟ್ಟು ನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜ್ಞಾನಕ್ಕಿಂತ ಮಿಗಿಲಾದದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ.ಹೀಗಾಗಿ ವಿದ್ಯೆ ಇಲ್ಲದವನ ಜೀವನ ಪಶುವಿಗೆ ಸಮಾನ ಎಂಬಂತೆ ಶಿಕ್ಷಣವು ಸಮಾಜದ ಪರಿವರ್ತನೆಗೆ ಇರುವಂತಹ ಕೇಲಿ ಕೈ ಎಂದರು.

ಗುರುಗಳ ಮಾರ್ಗದರ್ಶನ ಮುಖ್ಯ: ಭಾರತದ ಅಧ್ಯಾತ್ಮಿಕ ಚಿಂತಕ ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಇಂದಿನ ಯುವ ಜನಾಂಗ ಪಾಲಿಸಿದ್ದೇ ಆದರೆ ಯುವ ರಾಷ್ಟ್ರವಾದ ಭಾರತವು ಅಭಿವೃದ್ಧಿ ಹೊಂದುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಮುಂದೆ ಗುರಿ, ಹಿಂದೆ ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.

ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಇನ್‌ಪೆಕ್ಟರ್‌ ಹುದ್ದೆಗೆ ಬಡ್ತಿ ಹೊಂದಿದ ಶಿವಲಿಂಗಶೆಟ್ಟಿ, ಚಿಕ್ಕರಾಜಶೆಟ್ಟಿ, ಹಾಗೂ ಅಂಬೇಡ್ಕರ್‌ ಫೆಲೋಶಿಫ್ ಪ್ರಶಸ್ತಿಗೆ ಭಾಜನರಾದ ರವಿ, ಉತ್ತಮ ಶಿಕ್ಷಣ ಪ್ರಶಸ್ತಿ ಪಡೆದಂತಹ ಗೋಪಾಲ್‌, ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಅಂಧ ವಿದ್ಯಾರ್ಥಿನಿ ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ಜಿಪಂ ಸದಸ್ಯ ಯೋಗೇಶ್‌, ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಿಂಗರಾಜು, ಕೃಷ್ಣಸ್ವಾಮಿ, ಮಲೆ ಮಹದೇಶ್ವರ ಪ್ರಾಧಿಕಾರದ ಸದಸ್ಯೆ ಕಾವೇರಿ ಶಿವಕುಮಾರ್‌, ಗಡಿ ಯಜಮಾನರಾದ ಕೃಷ್ಣಶೆಟ್ಟಿ, ಜಯಸ್ವಾಮಿ, ತಾಪಂ ಸದಸ್ಯರಾದ ಪುಟ್ಟಸ್ವಾಮಿ, ವೈ.ಕೆ.ನಾಗರಾಜು, ಸಿದ್ದಪ್ಪಾಜಿ, ಕ್ಯಾತಶೆಟ್ಟಿ, ಸೋಮಣ್ಣ, ಬಾಗಳಿರೇವಣ್ಣ, ಗೋವಿಂದರಾಜು, ಕುಮಾರ್‌, ಬಸವಣ್ಣ, ಸೋಮಣ್ಣ ಉಪ್ಪಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next