ಸೂರಜ್‌ಕುಂಡ್: ಭಯೋತ್ಪಾದನಾ ವಿರೋಧಿ ಜಾಲ ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ರಾಜ್ಯಗಳ ಗೃಹ ಸಚಿವರಿಗಾಗಿ ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ಚಿಂತನಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, “ಗಡಿಯಾಚೆಗಿನ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ರಾಜ್ಯಗಳು ಮತ್ತು ಕೇಂದ್ರದ ಸಾಮೂಹಿಕ ಜವಾಬ್ದಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಎಲ್ಲ ವಲಯಗಳಲ್ಲೂ ಯಶಸ್ಸು ಕಂಡಿದೆ,’ ಎಂದರು.
“ದೇಶ ವಿರೋಧಿ ಚಟುವಟಿಕೆಗಳು, ಮತಾಂತರ, ಅಭಿವೃದ್ಧಿ ಯೋಜನೆಗಳಿಗೆ ರಾಜಕೀಯ ವಿರೋಧ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಅಡೆತಡೆ ಸೃಷ್ಟಿಸಲು ಕೆಲವು ಎನ್‌ಜಿಒಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ವಿದೇಶಿ ದೇಣಿಗೆಗಳ(ನಿಯಂತ್ರಣ) ಕಾಯಿದೆ(ಎಫ್ಸಿಆರ್‌ಎ)ಗೂ ಸರ್ಕಾರ ತಿದ್ದುಪಡಿ ತಂದಿದೆ,’ ಎಂದು ಹೇಳಿದರು.
“2014ರಿಂದ ಇಲ್ಲಿಯವರೆಗೆ ಉಗ್ರ ದಾಳಿಗಳು ಶೇ.74ರಷ್ಟು ತಗ್ಗಿದೆ. ಭಯೋತ್ಪಾದನೆ ಸಂಬಂಧಿ ಹತ್ಯೆಗಳು ಶೇ.90ರಷ್ಟು ತಗ್ಗಿದೆ. ಈಶಾನ್ಯ ಭಾರತದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಬಂಡಾಯ ಸಂಘಟನೆಗಳಾದ ಎನ್‌ಎಲ್‌ಫ್ಟಿ, ಬೊಡೊ, ಕರ್ಬಿ ಅಂಗ್ಲಾಂಗ್ ಅವರೊಂದಿಗೆ ದೀರ್ಘಕಾಲಿಕ ಒಪ್ಪಂದ ಮಾಡಿಕೊಂಡಿದ್ದೇವೆ. ಇದರ ಫಲವಾಗಿ 9,000 ಬಂಡುಕೋರರು ಶರಣಾಗಿದ್ದಾರೆ. ನಕ್ಸಲ್ ಹಿಂಸಾಚಾರವು ಶೇ.77ರಷ್ಟು ತಗ್ಗಿದೆ. ಅಲ್ಲದೇ ನಕ್ಸಲರಿಂದ ಸಾವು ಪ್ರಕರಣಗಳು ಶೇ.87ರಷ್ಟು ತಗ್ಗಿದೆ,’ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿಯೇತರ ಹಲವು ಸಿಎಂಗಳು ಗೈರು:
ತಮ್ಮ ಬಳಿ ಗೃಹ ಖಾತೆ ಹೊಂದಿರುವ ಬಿಜೆಪಿಯೇತರ ಹಲವು ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದರು. ಸಿಎಂಗಳಾದ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ನವೀನ್ ಪಟ್ನಾಯಕ್, ಎಂ.ಕೆ.ಸ್ಟಾಲಿನ್ ಮತ್ತು ಅಶೋಕ್ ಗೆಹೊÉàಟ್ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ತಮ್ಮ ಬಳಿ ಗೃಹ ಖಾತೆ ಹೊಂದಿರುವ ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಸಭೆಯಲ್ಲಿ ಹಾಜರಿದ್ದರು.