ರತ್ನಜ ನಿರ್ದೇಶನದ “ಪ್ರೇಮಿಸಂ’ ಚಿತ್ರವೇ ಕೊನೆ. ಆ ನಂತರ “ಎಕ್ಸ್‌ಕ್ಯೂಸ್ ಮೀ’ ಖ್ಯಾತಿಯ ಸುನೀಲ್ ರಾವ್ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಸುಮಾರು ಏಳು ವರ್ಷದ ಗ್ಯಾಪ್‌ನ ನಂತರ ಅವರು “ಲೂಸ್ ಕನೆಕ್ಷನ್’ ಮೂಲಕ ವಾಪಸ್ಸು ಬರುತ್ತಿದ್ದಾರೆ. “ಲೂಸ್ ಕನೆಕ್ಷನ್’ ಎನ್ನುವುದು ಚಿತ್ರದ ಹೆಸರಲ್ಲ, ಅದೊಂದು ವೆಬ್‌ಸರಣಿ ಎಂಬುದು ಗೊತ್ತಿರಲಿ. ರೇಡಿಯೋ ಜಾಕಿ ಪ್ರದೀಪ ನಿರ್ಮಿಸುತ್ತಿರುವ ಈ ವೆಬ್ ಸರಣಿಯು ಇಂದು ಸಂಜೆ ಆರು ಗಂಟೆಗೆ ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಲಿದೆ.
11 ಕಂತುಗಳ ಈ ಸರಣಿಯಲ್ಲಿ ಸುನೀಲ್ ಜೊತೆಗೆ ಸಿಂಧು ಲೋಕನಾಥ್, ಅನುಪಮ ಗೌಡ, ಗೌರಿ ನೀಲಾವರ್, ವಿನಾಯಕ್ ಜೋಷಿ, ಆರ್.ಜೆ ವಿಕ್ಕಿ, ಲಕ್ಷ್ಮೀ ಚಂದ್ರಶೇಖರ್, ಸುಂದರ್, ಬಾಬು ಹಿರಣ್ಣಯ್ಯ, ವೀಣಾ ಸುಂದರ್ ಮುಂತಾದವರು ನಟಿಸುತ್ತಿದ್ದಾರೆ. ಈ ಸರಣಿಯನ್ನು ಹಶೀನ್ ಖಾಣ್, ಎಶ್ಮಾನ್ ಖಾನ್ ಮತ್ತು ರಘು ಶಾಸಿ ನಿರ್ದೇಶಿಸುತ್ತಿದ್ದಾರೆ.ಸುನೀಲ್‌ಗೆ ನಟನೆಗೆ ವಾಪಸ್ಸಾಗಬೇಕು ಎಂಬ ಯಾವ ಉದ್ದೇಶ ಇರಲಿಲ್ಲ.
“ನಾನು ಸಿನಿಮಾ ಮಾಡುವಾಗ ಒಳ್ಳೆಯ ನಟ ಎಂದನಿಸಿಕೊಳ್ಳಬೇಕು ಎಂಬ ಚಟ ಇತ್ತು. ನಾನ್ಯಾವತ್ತೂ ಸ್ಟಾರ್‌ಪಟ್ಟಕ್ಕಾಗಿ ಕೆಲಸ ಮಾಡಲಿಲ್ಲ. ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು, ಒಳ್ಳೆಯ ಚಿತ್ರಗಳನ್ನು ಮಾಡಬೇಕು ಎಂಬ ಆಸೆಯಿಂದ ಮಾಡಿದೆ. ಈ ಮಧ್ಯೆ ಬೇರೆ ತರಹದ ಪಾತ್ರಗಳಿಗೆ ಕಾಯುತ್ತಿದ್ದೆ. ಆದರೆ, ಆಗ ಈ ನನ್ನ ಬಯಕೆಯ ಸಿನಿಮಾಗಳು ಬರುತ್ತಿರಲಿಲ್ಲ. ಒಂದೇ ತರಹ ಪಾತ್ರ ಮಾಡಿ ಸಾಕಾಗಿತ್ತು. ಒಂದು ಬ್ರೇಕ್ ಬೇಕಾಗಿತ್ತು.
ಹಾಗಾಗಿ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳೋಣ ಅಂದುಕೊಂಡೆ. ಆ ಬ್ರೇಕ್ ದೊಡ್ಡದಾಯಿತು. ಈ ಮಧ್ಯೆ ಮುಂಬೈಗೆ ಹೋಗಿ ಒಂದಿಷ್ಟು ಕೆಲಸ ಮಾಡಿದೆ. ಗಾಯನದಲ್ಲಿ ತೊಡಗಿಕೊಂಡೆ. ಅಷ್ಟರಲ್ಲಿ ನಟನೆಯ ಒಲವು ಕಡಿಮೆ ಆಗಿತ್ತು. ನಿಜ ಹೇಳಬೇಕೆಂದರೆ, ನಾನೇನು ಅಷ್ಟು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಒಂದಿಷ್ಟು ವಿಭಿನ್ನ ಕಾನ್ಸೆಪ್ಟ್ನ ಸಿನಿಮಾಗಳು ಬರುತ್ತಿವೆ. “ತಿಥಿ’, “ರಂಗಿತರಂಗ’, “ಶುದ್ಧಿ’, “ಕಿರಿಕ್ ಪಾರ್ಟಿ’ ಚಿತ್ರಗಳನ್ನು ಜನ ಮೆಚ್ಚುವುದರ ಜೊತೆಗೆ, ದೊಡ್ಡ ಹಿಟ್ ಸಹ ಹಾಗಿದ್ದವು.
ಇಮೇಜ್ ಇಲ್ಲದ ಹೀರೋಗಳು, ನಿರ್ದೇಶಕರು ಸಹ ಕ್ಲಿಕ್ ಆಗುತ್ತಿವೆ. ಇಂತಹ ಸಂದರ್ಭದಲ್ಲಿ ನಾನು ಇರಬೇಕು ಎಂದನಿಸಿತು. ಆದರೆ, ನಾನು ಯಾರನ್ನು ಕೇಳುವುದಕ್ಕೆ ಹೋಗಿರಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಅಷ್ಟರಲ್ಲಿ ಪ್ರದೀಪ್ ಬಂದು ವೆಬ್ ಸೀರೀಸ್ ಬಗ್ಗೆ ಹೇಳಿದರು. ನಿಜ ಹೇಳಬೇಕೆಂದರೆ, ನನಗೆ ವೆಬ್ ಸರಣಿ ಬಗ್ಗೆ ಗೊತ್ತಿರಲಿಲ್ಲ. ಅವರು ವಿವರಿಸಿದಾಗ, ಯಾಕೆ ಒಂದು ಟ್ರೈ ಮಾಡಬಾರದು ಎಂದನಿಸಿತು. ಜೊತೆಗೆ ನಾನು ಬಯಸುತ್ತಿದ್ದ ಪಾತ್ರಗಳು ಸಹ ಸಿಕ್ಕಿತ್ತು. ಹಾಗಾಗಿ ವಾಪಸ್ಸು ಬಂದೆ’ ಎನ್ನುತ್ತಾರೆ ಸುನೀಲ್.
ಕಳಪೆ ಕಥೆಯಲ್ಲಿ ಹೀರೋ ಆಗುವುದಕ್ಕಿಂತ, ಒಳ್ಳೆಯ ಕಥೆಯಲ್ಲಿ ಸಣ್ಣ ಪಾತ್ರವಾದರೂ ಸರಿ ಎನ್ನುತ್ತಾರೆ ಸುನೀಲ್. “ನನಗೆ ಅವಕಾಶ ಬರಲಿಲ್ಲ ಎಂದಲ್ಲ. ಬಂದಿದ್ದರಲ್ಲಿ ಆಸಕ್ತಿ ಮೂಡಿಸಿದ ಕಥೆಗಳು ಬಹಳ ಕಡಿಮೆ ಎಂದರೆ ತಪ್ಪಿಲ್ಲ. ಹಾಗಾಗಿ ಸುಮ್ಮನಿದ್ದೆ. ನನ್ನ ಪ್ರಕಾರ, ಕಳಪೆ ಕಥೆಯಲ್ಲಿ ಹೀರೋ ಆಗುವುದಕ್ಕಿಂತ, ಒಳ್ಳೆಯ ಕಥೆಯಲ್ಲಿ ಸಣ್ಣ ಪಾತ್ರವಾದರೂ ಮಾಡುವುದಕ್ಕೆ ನಾನು ತಯಾರು. ಹಾಗಾಗಿ ಒಳ್ಳೆಯ ಕಥೆ ಬೇಕು ನನಗೆ’ ಎನ್ನುತ್ತಾರೆ ಸುನೀಲ್.