Advertisement

ಅಭಿವೃದ್ಧಿ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳ ತೆರವು ಅನಿವಾರ್ಯ: ಸಿಎಂ ಬೊಮ್ಮಾಯಿ

10:25 PM Dec 23, 2022 | Team Udayavani |

ಹುಬ್ಬಳ್ಳಿ: ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಧಾರ್ಮಿಕ ಕೇಂದ್ರಗಳ ತೆರವು ಅಥವಾ ಸ್ಥಳಾಂತರ ಮಾಡಲಾಗುವುದು, ಅಭಿವೃದ್ಧಿ ದೃಷ್ಟಿಯಿಂದ ಇಂತಹ ಕಾರ್ಯಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಶುಕ್ರವಾರ ಇಲ್ಲಿನ ಬರಿದೇವರಕೊಪ್ಪದಲ್ಲಿ ನಡೆಯುತ್ತಿರುವ ದರ್ಗಾ ಸ್ಥಳಾಂತರ ಕಾರ್ಯವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಿಕತೆ ಬೆಳೆದಂತೆ ರಸ್ತೆಗಳ ಅಗಲೀಕರಣ ಅನಿರ್ವಾಯವಾಗಿ ಮಾಡಬೇಕಾಗುತ್ತದೆ. ಸುಪ್ರಿಂ ಕೋರ್ಟ್ ಆದೇಶದ ಅನ್ವಯ ಇಡೀ ರಾಜ್ಯದಲ್ಲಿ ಇಂತಹ ಧಾರ್ಮಿಕ ಕೇಂದ್ರಗಳ ತರವು, ಸ್ಥಳಾಂತರದ ಕೆಲಸ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಧಾರ್ಮಿಕ ಕೇಂದ್ರಗಳನ್ನು ಉಳಿಸಲು ಪ್ರಯತ್ನಿಸಲಾಗುತ್ತದೆ. ಆಗದಿದ್ದಾಗ ವೈಜ್ಞಾನಿಕವಾಗಿ ಅದನ್ನು ಸ್ಥಳಾಂತರ ಮಾಡಲಾಗುವುದು. ಇಂತಹ ಸಂದರ್ಭದಲ್ಲಿ ಆಯಾ ಧರ್ಮದವರು, ಪ್ರಮುಖರು ಸರಕಾರಕ್ಕೆ ಸಹಕಾರ ನೀಡಬೇಕಾಗುತ್ತದೆ. ಮೈಸೂರಿನಲ್ಲಿಯೂ ಕೂಡ ಒಂದು ದೇವಸ್ಥಾನವನ್ನು ರಕ್ಷಿಸಬೇಕು ಎನ್ನುವುದಿತ್ತು. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು. ಇಂತಹ ಸಂದರ್ಭದಲ್ಲಿ ಎಲ್ಲರೂ ಸಹೋದರ ಭಾವನೆಯಿಂದ ನಡೆದುಕೊಳ್ಳಬೇಕು ಎಂದರು.

ಹೊಸ ಮಸೀದಿಗೆ ಸಹಕಾರ: ದರ್ಗಾದ ಮುಖ್ಯಸ್ಥರು ಸ್ಥಳಾಂತರಕ್ಕೆ ಇಲ್ಲಿನ ಪ್ರಮುಖರು ಸಾಕಷ್ಟು ಸಹಕಾರ ನೀಡಿದ್ದಾರೆ. ಇದರಿಂದಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಿದೆ. ಇದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಇಲ್ಲಿ ಹೊಸದಾಗಿ ಮಸೀದಿ ನಿರ್ಮಾಣದ ಬೇಡಿಕೆಯಿಟ್ಟಿದ್ದಾರೆ. ಅವರು ಸ್ಥಳ ಪರಿಶೀಲಿಸಿ ನಿರ್ಧಾರ ತಿಳಿಸಿದರೆ ಅಗತ್ಯ ಸಹಕಾರ ನೀಡಲಾಗುವುದು. ಇದೇ ರಸ್ತೆಯಲ್ಲಿ ಹದಿಮೂರು ದೇವಸ್ಥಾನಗಳನ್ನು ತೆರವುಗೊಳಿಸಲಾಗಿದೆ. ಮಸೀದಿ, ದೇವಸ್ಥಾನ ತೆರವುಗೊಳಿಸುವುದು ನೋವಿನ ಸಂಗತಿಯಾಗದರೂ ಕೆಲವೊಮ್ಮೆ ಅನಿರ್ವಾವಾಗುತ್ತದೆ. ಈ ರಸ್ತೆಯಲ್ಲಿ ಇನ್ನೊಂದರೆಡು ಧಾರ್ಮಿಕ ಕೇಂದ್ರಗಳಿದ್ದು, ಅವುಗಳ ಸ್ಥಳಾಂತರ ಅಥವಾ ತೆರವು ವಿವಿಧ ಹಂತದಲ್ಲಿದ್ದು, ಅವುಗಳ ಬಗ್ಗೆಯೂ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿವಾಸದಲ್ಲಿ ಮಾತುಕತೆ
ದರ್ಗಾ ಹಾಗೂ ಮಸೀದಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮಾಜದ ಹಿರಿಯರು ಹಾಗೂ ದರ್ಗಾ ಸಮಿತಿಯ ಪ್ರಮುಖರೊಂದಿಗೆ ತಮ್ಮ ನಿವಾಸದಲ್ಲಿ ಚರ್ಚಿಸಿದರು.

ಶುಕ್ರವಾರ ರಾತ್ರಿ ಇಲ್ಲಿನ ಆದರ್ಶನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಚರ್ಚಿಸಿದರು. ದರ್ಗಾ ಸಮಿತಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಮುಖಂಡರು ಹಾಗೂ ಸಮಾಜದ ಹಿರಿಯರು ಚರ್ಚಿಸಿದರು. ಈ ಸಮಯದಲ್ಲಿ ಸುಮಾರು ಮೂರ್ನಾಲ್ಕು ಕೋಟಿ ರೂಪಾಯಿಯ ಮಸೀದಿ ನೆಲಸಮ ಮಾಡಲಾಗಿದೆ. ಪುನರ್ ನಿರ್ಮಾಣಕ್ಕೆ ನೆರವು ನೀಡುವಂತೆ ಮಾಡಿದರು.

Advertisement

ಅಧಿವೇಶನದಲ್ಲಿ ನೀಡಿರುವ ಭರವಸೆಯಂತೆ ನೆರವು ನೀಡುತ್ತೇನೆ ಎಂದು ತಿಳಿಸಿರುವುದಾಗಿ ಪ್ರಮುಖರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಂಜುಮನ್ ಸಂಸ್ಥೆ ಹಾಗೂ ದರ್ಗಾ ಸಮಿತಿಯವರು ಕೆಲವೊಂದು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅವುಗಳನ್ನು ಈಡೇರಿಸುವ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next