Advertisement
ಏನು?
Related Articles
Advertisement
ಯಾವಾಗ ?
2000- 2016ರವರೆಗೆ ಸುಮಾರು 175 ಮಿಲಿಯನ್‌ಗೂ ಅಧಿಕ ಮಂದಿ ವಿಶ್ವದಾದ್ಯಂತ ಈ ಬಿಸಿ ಗಾಳಿಯ ಅಲೆಗೆ ತುತ್ತಾಗಿದ್ದರು. 1998- 2017ರಲ್ಲಿ 1,66,000ಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಯುರೋಪ್‌ನಲ್ಲಿ 2003ರಲ್ಲಿ 70 ಸಾವಿರಕ್ಕೂ ಹೆಚ್ಚು ಹಾಗೂ 2010ರಲ್ಲಿ ರಷ್ಯಾ ಮತ್ತು ಸುತ್ತಲಿನ ರಾಷ್ಟ್ರಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಮರಣಗೊಂಡಿದ್ದರು. 2012ರಲ್ಲಿ ಅಮೆರಿಕದ 8 ಸಾವಿರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿತ್ತು. ಭಾರತದಲ್ಲಿ 2016ರಲ್ಲಿ ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಲ, ಒಡಿಶಾ, ಪಂಜಾಬ್, ಹರಿಯಾಣ, ಚಂಡೀಗಢ, ಹೊಸದಿಲ್ಲಿ, ರಾಜಸ್ಥಾನ, ಮಹಾ ರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌ನಲ್ಲಿ ತೀವ್ರವಾದ ಬಿಸಿಗಾಳಿಯ ಉಪಟಳವಿತ್ತು. 2022ರ ಜೂನ್ 8ರಂದು ದೇಶದ ರಾಜಸ್ಥಾನ,
ಹರಿಯಾಣ, ಹೊಸದಿಲ್ಲಿ, ಪಂಜಾಬ್, ಮಧ್ಯಪ್ರದೇಶ, ಉತ್ತರಪ್ರದೇಶ, ಛತ್ತೀಸ್‌ಗಢ, ಝಾರ್ಖಂಡ್, ಒಡಿಶಾ, ಆಂಧ್ರಪ್ರದೇಶಗಳಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದೆ.
ಯಾಕೆ ?
ಪರಿಣಿತರ ಪ್ರಕಾರ ಇದಕ್ಕೆ ಪ್ರಮುಖ ಕಾರ ಣಗಳಲ್ಲಿ ಒಂದು ಹವಾಮಾನ ವೈಪರೀತ್ಯ. ಹವಾಮಾನ ವೈಪರೀತ್ಯವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. . ಹವಾಮಾನ ವೈಪರೀತ್ಯವು ಇದರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಶಾಖದ ಅಲೆಗಳು ತೀವ್ರಗೊಳ್ಳುತ್ತವೆ. ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆಯಂತೆ.
ಹೇಗೆ?
ಭಾರತದಲ್ಲಿ ಬಿಸಿಗಾಳಿ (ಶಾಖದ ಅಲೆ) ಯ ವಾತಾವರಣ ಎಂದು ಘೋಷಿಸುವ ಮಾನದಂಡ ಇಂತಿದೆ. ಒಂದು ಪ್ರದೇಶದ ಗರಿಷ್ಠ ತಾಪಮಾನವು ಬಯಲು ಪ್ರದೇಶದಲ್ಲಿ 40 ಡಿಗ್ರಿ ಸೆ., ಕರಾವಳಿ ಭಾಗಗಳಲ್ಲಿ 37 ಡಿಗ್ರಿ ಸೆ., ಗುಡ್ಡಗಾಡು ಪ್ರದೇಶದಲ್ಲಿ 30 ಡಿಗ್ರಿ ಸೆ.ಗಿಂತ ಹೆಚ್ಚು ದಾಖಲಾದರೆ ಅದು ಶಾಖದ ಅಲೆ ಎನ್ನಲಾಗುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಬಿಸಿ ಗಾಳಿ ತೀವ್ರತೆಯ ತಿಂಗಳು ಮೇ ಎಂದು ಪರಿಗಣಿಸಲಾಗಿದೆ.
ಪರಿಣಾಮ ಏನು?
01. ಯುನೈಟೆಡ್ ಕಿಂಗ್‌ಡಮ್ ವಿಶಿಷ್ಟ ಸಮಶೀತೋಷ್ಣ ವಲಯದ ರಾಷ್ಟ್ರ. ಆದರೆ ಇಲ್ಲಿ ಈಗ ಎಲ್ಲವೂ ಅಸ್ತವ್ಯಸ್ತ. ಯಾಕೆಂದರೆ ಇತ್ತೀಚೆಗೆ ಇಲ್ಲಿನ ತಾಪಮಾನ 40.2 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿದೆ. ಇದು ಆ ದೇಶದ ದಾಖಲೆಯ ಅತ್ಯಧಿಕ ತಾಪಮಾನ. ತೀವ್ರ ತಾಪದಿಂದ ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಇಲ್ಲಿನ ರೈಲು ಹಳಿಗಳಿಗೆ ಹಾನಿಯಾಗಿವೆ. ಸಿಗ್ನಲ್‌ಗಳು ಕರಗುತ್ತಿವೆ. ರನ್‌ವೇಗಳನ್ನು ಮುಚ್ಚಲಾಗಿದೆ. ಹುಲ್ಲುಗಾವಲು ಪ್ರದೇಶಗಳಲ್ಲಿ ಬೆಂಕಿಗಳು ಕಾಣಿಸಿಕೊಂಡಿವೆ. ಫಾರ್ಮ್ ಕಟ್ಟಡಗಳು, ಮನೆಗಳು, ಗ್ಯಾರೇಜ್‌ಗಳು ಬೆಂಕಿಯಿಂದ ಸುಟ್ಟುಹೋಗಿವೆ.
02. ಸ್ಪೇನ್‌ನಲ್ಲಿ ಎರಡು ಬಾರಿ ಬಿಸಿ ಗಾಳಿಯ ಕಾರಣದಿಂದ 1,047 ಮಂದಿ ಸಾವಿಗೀಡಾಗಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ಹೇಳಿದೆ.
03. ಫ್ರಾನ್ಸ್‌ನ ಪಶ್ಚಿಮ ಕರಾವಳಿಯ ಪ್ರಸಿದ್ಧ ಆಕರ್ಷಣೆಯಾದ ಡ್ನೂನ್ ಡಿ ಪಿಲಾಟ್‌ನಲ್ಲಿರುವ ಸುಮಾರು 6,500 ಹೆಕ್ಟೇರ್ ಅರಣ್ಯವು ಸುಟ್ಟುಹೋಗಿದೆ. ಇದೀಗ ಸಂಪೂರ್ಣ ಹೊಗೆಯಿಂದ ಆವರಿಸಿದ ಪ್ರದೇಶ. ಇಲ್ಲಿ ಅಗ್ನಿಶಾಮಕ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇನ್ನೊಂದು ಭಾಗದಲ್ಲಿ 12,800 ಹೆಕ್ಟೇರ್ ಪ್ರದೇಶದಲ್ಲಿ ಬೆಂಕಿಯಿಂದ ಹಾನಿಯಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.
04. ಡೆನ್ಮಾರ್ಕ್‌ನಲ್ಲಿ ಈ ವಾರದಲ್ಲಿ 35.6 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. ಜುಲೈಯಲ್ಲಿ ಇದುವರೆಗಿನ ಅತೀ ಹೆಚ್ಚು ತಾಪಮಾನ ಇದಾಗಿದೆ. ಡೆನ್ಮಾರ್ಕ್‌ನ ಸಾರ್ವಕಾಲಿಕ ತಾಪಮಾನ 1975ರ ಆಗಸ್ಟ್‌ನಲ್ಲಿ 36.4 ಡಿಗ್ರಿ ಸೆ. ದಾಖಲಾಗಿತ್ತು.
05. ಜರ್ಮನಿಯ ಪಶ್ಚಿಮದಲ್ಲಿ ತಾಪಮಾನ ಜುಲೈ ನಲ್ಲೇ 40 ಡಿಗ್ರಿ ಸೆ. ತಲುಪುವ ನಿರೀಕ್ಷೆ ಇದೆ. ಬೇಸಗೆಯಲ್ಲಿ ಇಲ್ಲಿ ಬರಗಾಲದ ಭೀತಿ ಹೆಚ್ಚಿಸಿದೆ. ಇಲ್ಲಿನ ಸ್ಯಾಕೊÕàನಿ ರಾಜ್ಯಕ್ಕೂ ಕಾಡ್ಗಿಚ್ಚು ವ್ಯಾಪಿಸಿದೆ.
06. ಪೋರ್ಚುಗಲ್‌ನಲ್ಲಿ ಜುಲೈ 7ರಿಂದ 18ರವರೆಗೆ 1,063ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
07. ಇಟಲಿಯನ್ನೂ ಕಾಡ್ಗಿಚ್ಚು ಬಿಟ್ಟಿಲ್ಲ. ಅಲ್ಲಿಯೂ ಬಿಸಿಗಾಳಿಯ ಉಪಟಳ ಇದೆ.
08. ಭಾರತದ ಉತ್ತರ ಭಾಗಗಳಲ್ಲಿ ಪ್ರತಿ ವರ್ಷ ಸರಾಸರಿ ಐದಾರು ಬಿಸಿಗಾಳಿಯ ಅಲೆಗಳು ವ್ಯಾಪಿಸುತ್ತವೆ. ಒಂದೊಂದು ಅಲೆಯ ಪರಿಣಾಮ ಕೆಲವು ವಾರದವರೆಗೆ ಇರುತ್ತದೆ. ಈ ವರ್ಷ ಗರಿಷ್ಠ ತಾಪಮಾನ ಜೂ. 29ರಂದು ದಾಖಲಾಗಿದ್ದು 40 ಡಿಗ್ರಿ ಸೆ. ಶಿಮ್ಲಾ, ನೇಪಾಳ, ಲಕ್ನೋ, ಜೈಪುರ, ಹೊಸದಿಲ್ಲಿಯಲ್ಲಿ 10- 17 ದಿನಗಳವರೆಗಿನ ಸುದೀರ್ಘ ಅವಧಿಯ ಗರಿಷ್ಠ ತಾಪಮಾನ ದಾಖಲಾಗಿದೆ.
ಮಾನವನ ಮೇಲೆ ಹೇಗೆ ಪರಿಣಾಮ?
ಹವಾಮಾನ ಬದಲಾವಣೆಯ ಪರಿಣಾಮ 21ನೇ ಶತಮಾದಲ್ಲಿ ಜಾಗತಿಕ ತಾಪಮಾನ ಮತ್ತು ಶಾಖದ ಅಲೆಗಳ ತೀವ್ರತೆಯು ಹೆಚ್ಚಾಗಿದೆ. ಹೆಚ್ಚಿನ ಬಿಸಿ ಗಾಳಿಯ ಪರಿಣಾಮ ಮಾನವನ ಮೇಲೂ ಆರೋಗ್ಯದ ಮೇಲಾಗುತ್ತಿದೆ. ಈ ಸಂದರ್ಭದಲ್ಲಿ ಹಗಲು ದೀರ್ಘಾವಧಿಯಾಗಿದ್ದು, ರಾತ್ರಿ ಅವಧಿಯಲ್ಲೂ ತಾಪಮಾನ ಹೆಚ್ಚಾಗಿರುತ್ತದೆ. ಇದು ಮಾನವನ ದೇಹದ ಮೇಲೆ ಒತ್ತಡ ಹೆಚ್ಚು ಮಾಡುತ್ತದೆ. ಇದರಿಂದಾಗಿ ಉಸಿರಾಟದ ಸಮಸ್ಯೆ, ಹೃದಯ ರಕ್ತನಾಳದ ಕಾಯಿಲೆಗಳು, ಮಧುಮೇಹ, ಮೂತ್ರಪಿಂಡದ ಕಾಯಿಲೆಗಳನ್ನು ಉಲ್ಬಣಗೊಳಿಸುತ್ತದೆ. ಅಲ್ಲದೇ ಅಕಾಲಿಕ ಮರಣ, ಅಂಗವೈಕಲ್ಯಕ್ಕೂ ಕಾರಣವಾಗುತ್ತದೆ. ಶಾಖದ ಅಲೆಯು ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಗಾಳಿ, ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಲವಾರು ಸಾಂಕ್ರಾಮಿಕಗಳಿಗೂ ಶಾಖದ ಅಲೆ ಕಾರಣವಾಗುತ್ತದೆ.
ಸ್ನೀಕರ್ ವೇವ್
ಸುಂದರಿ ರೇನಿಸ್ಜರಾದ ಒಡಲಲ್ಲೊಬ್ಬ ಅಪಾಯಕಾರಿ ಮಾಯಾವಿ
ಕಪ್ಪು ಮರಳು, ಭೋರ್ಗರೆವ ಅಲೆ ಹಾಗೂ ಭೌಗೋಳಿಕ ಸೌಂದರ್ಯದ ಕಾರಣ ಗಳಿಂದಾಗಿ ಪ್ರವಾಸಿಗ ರನ್ನು ಸೂಜಿಲಿಗಲ್ಲಿನಂತೆ ಸೆಳೆಯುವ ಆಕರ್ಷಕ ಬೀಚ್ ಐಸ್‌ಲ್ಯಾಂಡ್‌ನ
ದಕ್ಷಿಣ ಕರಾವಳಿಯ ರೇನಿಸ್ಜರಾ ಅಷ್ಟೇ ಅಪಾಯಕಾರಿ. ಇದಕ್ಕೆ ಇಲ್ಲಿನ ಭೌಗೋಳಿಕತೆ ಹಾಗೂ ಸಮುದ್ರದ ವಿಶೇಷ ಸೆಳೆತದ ಅಲೆ (ಸ್ನೀಕರ್ ವೇವ್) ಕಾರಣವಂತೆ. ಇದರ ಅರಿವಿಲ್ಲದೆ ಬೀಚ್‌ನ ಸೌಂದರ್ಯದಲ್ಲಿ ಮೈಮರೆತು ಜೀವ ಕಳೆದುಕೊಂಡವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ.
ಸ್ನೀಕರ್ ವೇವ್ ಎಂದರೇನು?
ಇದೊಂದು ನೈಸರ್ಗಿಕ ಪ್ರಕ್ರಿಯೆ. ಹಲವು ಸಣ್ಣಪುಟ್ಟ ಸ್ನೀಕರ್ ಅಲೆಗಳು ಒಟ್ಟಾಗಿ ಒಂದು ದೊಡ್ಡ ಅಲೆಯನ್ನು ಸೃಷ್ಟಿಸುತ್ತದೆ. ಇದಕ್ಕೆ ಸಿಲುಕಿದರೆ ಜೀವ ಉಳಿಸಿಕೊಳ್ಳುವುದು ಕಷ್ಟ. ಆ ಆಲೆಯ ಸೆಳೆತ ಆಸಾಧಾರಣವಾದುದು. ರೇನಿಸ್ಜರಾ ಬೀಚ್‌ನ ಸಮೀಪದ ಕಡಲಲ್ಲಿರುವ ಭೂಗತ ಬಂಡೆ ಗಳೂ ಇಂಥ ಅಲೆಗಳ ಸೃಷ್ಟಿಗೆ ಒಂದು ಕಾರಣವಂತೆ. ಅವು ಒಂದು
ರೀತಿಯ ಮಾಯಾವಿಯಂ ತಿದ್ದು, ಎಷ್ಟೋ ಬಾರಿ ನಮ್ಮ ಸಮೀಪಕ್ಕೆ ಬರುವವರೆಗೂ ಗೊತ್ತಾಗದು. ಅಲೆಯ ತೀವ್ರತೆ ಹೆಚ್ಚಿರುವ ಸಂದರ್ಭದಲ್ಲಿ ಬೀಚ್ ಅನ್ನು ಮುಚ್ಚಿ ಪ್ರವಾಸಿಗರನ್ನು ನಿರ್ಬಂಧಿಸ ಬೇಕೆಂಬ ಆಧಿಕಾರಿಗಳ ಸಲಹೆಗೆ ಆಡಳಿತ ಮೊಹರು ಒತ್ತಿಲ್ಲ.
ಕಲರ್ ಕೋಡೆಡ್ ವ್ಯವಸ್ಥೆ
ಆಡಳಿತವೀಗ ಹೆಚ್ಚುವರಿ ಸುರಕ್ಷಾ ಕ್ರಮಗಳನ್ನು ಅಳವಡಿಸತೊಡಗಿದೆ. ಬೀಚ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಅಲೆಗಳ ಅಪಾಯದ ತೀವ್ರತೆಗೆ ಹೊಂದಿ ಕೊಂಡು ಹಸುರು, ಹಳದಿ ಮತ್ತು ಕೆಂಪು ಬಣ್ಣ ಗಳ ಸಂಕೇತ ನೀಡಲಾಗುತ್ತಿದೆ. ಕೆಮರಾ ಅಳವಡಿಸಿ ಪ್ರವಾಸಿಗರ ಮೇಲೆ ನಿಗಾ ಇರಿಸಿದೆ. ಈ ಹೊಸ ವ್ಯವಸ್ಥೆಯು ಬೀಚ್‌ನ ಸಹಜ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಟೀಕೆಯೂ ಇದೆ.
ಸಾಕಪ್ಪಾ ಸಾಕು ಚೀನ
ಕೊರೊನಾ ಮಾಡಿರುವ ಹಾನಿ ಲೆಕ್ಕವಿಲ್ಲದಷ್ಟು. ಜಗತ್ತಿಗೇ ಮಾರಕವಾಗಿದ್ದ ಕೊರೊನಾದ ಮೂಲ ದೇಶಕ್ಕೂ ಈಗ ಬಿಸಿ ತಟ್ಟಿದೆ. ಒಂದು ಕಾಲದಲ್ಲಿ ಚೀನದ ಪೌರತ್ವವನ್ನು ಪಡೆಯಲು, ಅಲ್ಲಿ ಉದ್ಯಮವನ್ನು ಆರಂಭಿಸಲು ಎಷ್ಟು ಕಾತುರತೆ ಇತ್ತೋ ಅಷ್ಟೇ ಅವಸರವೀಗ ತೊರೆಯುವಲ್ಲಿ ಕಂಡುಬರುತ್ತಿದೆ. ದಿನಕ್ಕೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ತಾನು ಚೀನ ತೊರೆಯುವ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಲಿಯನೇರ್‌ಗಳೇ ಮುಂಚೂಣಿಯಲ್ಲಿದ್ದಾರೆ. ಇದು ಚೀನಕ್ಕೆ ದೊಡ್ಡ ತಲೆನೋವಾಗಿದೆ.
ಐದು ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡುವ (ಹೈ ನೆಟ್ ವರ್ತ್ ಇಂಡಿವಿಜುವಲ್ಸ್) ಸುಮಾರು 10 ಸಾವಿರ ಮಂದಿ ಈ ವರ್ಷ ಚೀನ ತೊರೆಯಲು ನಿರ್ಧರಿಸಿದ್ದಾರೆ. ಜತೆಗೆ ಸುಮಾರು 48 ಬಿಲಿಯನ್ ಡಾಲರ್ ತಮ್ಮ ಜತೆ ಕೊಂಡೊಯ್ಯಲಿದ್ದಾರೆ ಎನ್ನುತ್ತದೆ ಹೆನ್ಲಿ ಮತ್ತು ಪಾಟ್ನìರ್ನ ಹೊಸ ಸಂಪತ್ತು ವಲಸೆ ವರದಿ. ಹಾಂಕಾಂಗ್‌ನ ಸಂಖ್ಯೆಯು ಇದರಲ್ಲಿ ಹೆಚ್ಚಿದೆ ಎಂದಿದೆ. ಬೀಜಿಂಗ್‌ನಲ್ಲಿ ನೆಲೆಸಿರುವ 3,000 ಎಚ್ ಎನ್‌ಡಬ್ಲ್ಯುಐಗಳು 12 ಬಿಲಿಯನ್ ಡಾಲರ್‌ನೊಂದಿಗೆ ಈ ವರ್ಷ ದೇಶ ತೊರೆಯಲು ಮುಂದಾಗಿದ್ದಾರೆ.
ಕಳೆದ ತಿಂಗಳು ಶಾಂಘೈ ಮೂಲದ ಬಿಲಿಯನೇರ್, ಎಕ್ಸ್‌ಡಿ ಗೇಮಿಂಗ್ ಕಂಪೆನಿಯ ಸಿಇಒ ಯಿಮೆಂಗ್ ಹುವಂಗ್ ತಾನು ಮತ್ತು ತನ್ನ ಕುಟುಂಬದವರು ಚೀನ ತೊರೆಯಲು ನಿರ್ಧರಿಸಿರುವುದಾಗಿ ಹೇಳಿದ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾರ್ಚ್‌ವರೆಗೆ ವಿ ಚಾಟ್‌ನಲ್ಲಿ “ಹೌ ಟು ಮೂವ್ ಕೆನಡಾ’ ಎಂದು ಹುಡುಕಾಟ ನಡೆಸಿದವರ ಸಂಖ್ಯೆ 3,000 ಎಂದಿದೆ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‌ನ ಥಿಂಕ್ ಟ್ಯಾಂಕ್ ವರದಿಯು ತಿಳಿಸಿದೆ. ಎಪ್ರಿಲ್‌ನಲ್ಲಿ ಯೂರೊಪಿಯನ್ ಚೇಂಬರ್ ಆಫ್ ಕಾಮರ್ಸ್‌ನ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ. 23 ಮಂದಿ ವಲಸೆ ಹೋಗಲು ಯೋಚಿಸುತ್ತಿದ್ದಾರೆ.
ಕಾರಣಗಳೇನು?
ಕೊರೊನಾ ನಿಯಂತ್ರಣಕ್ಕೆ ಚೀನವು “ಝೀರೋ ಕೋವಿಡ್’ ನೀತಿ ಪಾಲಿಸುತ್ತಿದೆ. ಇದು ಮೊದಲ ಕೊರೊನಾ ಅಲೆಯಲ್ಲಿ ಯಶಸ್ವಿಯಾಗಿದ್ದರೂ ಈ ಬಾರಿ ಕಿರಿಕಿರಿ ಎನಿಸತೊಡಗಿದೆ. ಸಾಮೂಹಿಕ ಲಾಕ್‌ಡೌನ್‌ನಿಂದಾಗಿ ಬ್ಯಾಂಕ್ ಉದ್ಯೋಗಿಗಳು ಕಚೇರಿಯಲ್ಲೇ ಬಾಕಿಯಾಗುವಂತಾಗಿದೆ. ಮತ್ತೂಂದು ಕಂಪೆನಿಯ ಕಾರ್ಮಿಕರಿಗೆ ಕಾರ್ಖಾನೆಯಲ್ಲೇ ಮಲಗುವಂತೆ ಸೂಚಿಸಲಾಗಿದೆ. ಪಾರ್ಕಿಂಗ್ ಏರಿಯಾದಲ್ಲಿ 33,000 ಜನರನ್ನು ಕೊರೊನಾ ಪರೀಕ್ಷೆಗೆ ಕಾಯಿಸಲಾಗುತ್ತಿದೆ. 2 ತಿಂಗಳ ಲಾಕ್‌ಡೌನ್ ಕಳೆದ ಜೂನ್‌ನಲ್ಲಿ ಕೊನೆಗೊಂಡಿದೆ. ಇದರಿಂದಾಗಿ ಜನರ ಮಾನಸಿಕ ಆರೋಗ್ಯವು ಹದಗೆಡುತ್ತಿದೆ. ಇದು ಉದ್ಯಮಿಗಳಿಗೆ ತಲೆನೋವಾಗಿದೆ. ಚೀನದ ಆರ್ಥಿಕ ಸ್ಥಿತಿಯು 2ನೇ ತ್ತೈಮಾಸಿಕದಲ್ಲಿ ತೀವ್ರ ಇಳಿಕೆ ಕಂಡಿದ್ದು, ಕೇವಲ ಶೇ. 0.4 ಬೆಳವಣಿಗೆಯಾಗಿದೆ. ಯುವ ನಿರುದ್ಯೋಗ ದರವು ಶೇ. 18ಕ್ಕೆ ಏರಿಕೆಯಾಗಿದೆ.
ಉದ್ಯಮಿಗಳ ವಲಸೆಯಿಂದ ಆರ್ಥಿಕ ಸ್ಥಿತಿ, ಉದ್ಯೋಗದ ಕೊರತೆ ಉಂಟಾಗು ತ್ತಿದೆ. ಜತೆಗೆ ರಾಜಕೀಯವಾಗಿಯೂ ಚೀನದ ಪರಿಸ್ಥಿತಿ ಉತ್ತಮವಾಗಿಲ್ಲ. ಡೋನಾಲ್ಡ್ ಟ್ರಂಪ್ ಮತ್ತು ಬೈಡನ್‌ನ ಆಡಳಿತದ ನೀತಿಯಲ್ಲೂ ಬದಲಾವಣೆ ತಂದಿದೆ. ಚೀನವು ವಲಸೆಯನ್ನು ತಡೆಗಟ್ಟಲು ಹಲವು ಮಾರ್ಗ ಹುಡುಕುತ್ತಿದೆ.
ವೀಸಾವನ್ನು ಅತೀ ಅಗತ್ಯವಿರುವವರಿಗೆ ಮಾತ್ರ ನೀಡಲು ನಿರ್ಧರಿಸಿದೆ. ಚೀನದ ಕೇವಲ ಶೇ. 10 ಜನರು ವೀಸಾ ಹೊಂದಿದ್ದು, ಚೀನ ಆರ್ಥಿಕ ವಲಸೆಯನ್ನು ತಡೆಗಟ್ಟಲು ಕೇವಲ 50,000 ಡಾಲರ್‌ನಷ್ಟು ಮಾತ್ರ ವಿದೇಶಿ ಹಣಕ್ಕೆ ಬದಲಾಯಿಸಲು ಅವಕಾಶ ನೀಡಿದೆ. ವಿಶೇಷವೆಂದರೆ ಚೀನದಿಂದ ಹೊರಹೋದವರು ಹೆಚ್ಚಾಗಿ ಸಿಂಗಾಪುರಕ್ಕೆ ಹೋಗುತ್ತಾರೆ.