Advertisement

ರಾಮನಗರ ಪಿಜಿ ಕೇಂದ್ರ ಸ್ಥಾಪನೆ ಕಾರ್ಯ ಚುರುಕು

12:04 PM Aug 14, 2017 | Team Udayavani |

ಬೆಂಗಳೂರು: ಕಳೆದ ಕೆಲವು ವರ್ಷದಿಂದ ನೆನೆಗುದಿಗೆ ಬಿದ್ದಿರುವ ರಾಮನಗರ ಸ್ನಾತಕೋತ್ತರ ಕೇಂದ್ರದ  ಪ್ರಸ್ತಾವನೆಗೆ ಈಗ ಮರುಜೀವ ಸಿಕ್ಕಿದೆ. ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಸ್ಥಳ ಪರಿಶೀಲನಾ ಕಾರ್ಯ ಈಗ ಚುರುಕುಗೊಂಡಿದೆ.

Advertisement

ರಾಮನಗರ, ಚನ್ನಪಟ್ಟಣ ಸೇರಿದಂತೆ ಬೆಂವಿವಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ರಾಮನಗರದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಬೇಕು ಎಂಬ ಪ್ರಸ್ತಾವನೆ ಅನೇಕ ವರ್ಷಗಳಿಂದ ಬೆಂವಿವಿಯ ಮುಂದಿತ್ತು. ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹಾಗೂ ಕುಲಸಚಿವೆ ಪ್ರೊ. ಸೀತಮ್ಮಾ ಅವರ ಅಧಿಕಾರವಧಿಯಲ್ಲಿ ಈ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಕ್ಕಿತ್ತಾದರೂ, ಸೂಕ್ತ ಸ್ಥಳ ಪಡೆಯಲು ಸಾಧ್ಯವಾಗಿರಲಿಲ್ಲ.

2016ರಲ್ಲೇ ರಾಮನಗರ ಸ್ನಾತಕೋತ್ತರ ಕೇಂದ್ರದ ಹೆಸರಿನಲ್ಲಿ ಎಂ.ಎ. ಅರ್ಥಶಾಸ್ತ್ರ ಹಾಗೂ ಎಂ.ಕಾಂ. ತರಗತಿಗಳನ್ನು ಆರಂಭಿಸಲಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಸ್ಥಳಾವಕಾಶ ದೊರಯದೇ ಇದ್ದರಿಂದ ಜ್ಞಾನಭಾರತೀ ಆವರಣದಲ್ಲೇ ತಗರತಿ ವ್ಯವಸ್ಥೆ ಮಾಡಲಾಗಿತ್ತು. ರಾಮನಗರ ಪಿಜಿ ಕೇಂದ್ರಕ್ಕೆಂದು ಸೇರಿಕೊಂಡ ವಿದ್ಯಾರ್ಥಿಗಳು ನಿತ್ಯ ಜ್ಞಾನಭಾರತಿಗೆ ಬರಬೇಕಾಯಿತು.

ಅಲ್ಲದೇ, ಎಂ.ಕಾಂ. ತರಗತಿಯನ್ನು ಸೆಂಟ್ರಲ್‌ ಕಾಲೇಜಿನಲ್ಲೂ ಮಾಡಲಾಗುತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಮಸ್ಯೆಯಾಗಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವೂ ಕಡಿಮೆಯಾಗಿತ್ತು. ಆದ್ದರಿಂದ ಈ ವರ್ಷವಾದರೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂವಿವಿ ಆಡಳಿತ ಮಂಡಳಿ ಮುಂದಾಗಿದೆ.

ನಿಯೋಗದಿಂದ ಸಂಸದರ ಭೇಟಿ: ಬೆಂವಿವಿ ಹಂಗಾಮಿ ಕುಲಪತಿ ಪ್ರೊ. ಎಚ್‌.ಎನ್‌.ರಮೇಶ್‌, ಕುಲಸಚಿವ ಪ್ರೊ.ಬಿ.ಕೆ.ರವಿ ಸೇರಿದಂತೆ ಆಡಳಿತಾಧಿಕಾರಿಗಳು, ಪರೀಕ್ಷಾಂಗ ವಿಭಾಗದ ಮುಖ್ಯಸ್ಥರು, ಸಿಂಡಿಕೇಟ್‌ ಸದಸ್ಯರನ್ನು ಒಳಗೊಂಡಿರುವ ನಿಯೋಗವೊಂದು ಮೂರು ದಿನದ ಹಿಂದೆ ಸಂಸದ ಡಿ.ಕೆ.ಸುರೇಶ್‌ ಅವರನ್ನು ಭೇಟಿ ಮಾಡಿ ರಾಮನಗರ ಪಿಜಿ ಕೇಂದ್ರಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸುವಂತೆ ಕೋರಿಕೊಂಡಿದ್ದಾರೆ.

Advertisement

ರಾಮನಗ ಜಿಲ್ಲಾಧಿಕಾರಿ ಮಮತಾ ಅವರು ಸಭೆಯಲ್ಲಿ ಇದ್ದರು. ಸಮಾಲೋಚನೆಯ ನಂತರ, ಈ ವರ್ಷಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಹಾಗೆಯೇ ಪಿಜಿ ಕೇಂದ್ರಕ್ಕೆ ಸುಮಾರು ಐದು ಎಕರೆ ಜಾಗದ ಭರವಸೆಯನ್ನು ನೀಡಿದ್ದಾರೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸ್ಥಳ ಪರಿಶೀಲನೆ: ರಾಮನಗರ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಹಾಗೂ ರಾಮನಗರದ ಕೆ.ಪಿ.ದೊಡ್ಡಿ ಎಂಬ ಎರಡು ಸ್ಥಳ ಗುರುತಿಸಲಾಗಿದೆ. ಬೆಂವಿವಿ ಸಿಂಡಿಕೇಟ್‌ ಸದಸ್ಯರ ತಂಡವು ಈ ಎರಡು ಪ್ರದೇಶವನ್ನು ಪರಿಶೀಲನೆ ನಡೆಸಿದ್ದು, ಪಿಜಿ ಕೇಂದ್ರದ ನಿರ್ಮಾಣಕ್ಕೆ ಯಾವ ಸ್ಥಳ ಯೋಗ್ಯ ಎಂಬುದರ ವರದಿಯನ್ನು ಶೀಘ್ರವೇ ಕುಲಪತಿಯವರಿಗೆ ಸಲ್ಲಿಸಲಿದ್ದಾರೆ. ವರದಿ ಆಧಾರದಲ್ಲಿ ಕುಲಪತಿಯವರು ಮತ್ತೂಮ್ಮೆ ಜಿಲ್ಲಾಡಳಿತ ಹಾಗೂ ಸಂಸದರೊಂದಿಗೆ ಚರ್ಚೆ ನಡೆಸಲಿದ್ದಾರೆ.

ತಾತ್ಕಾಲಿಕ ಸ್ಥಳ: 2017-18ನೇ ಸಾಲಿನ ಎಂ.ಎ ಅರ್ಥಶಾಸ್ತ್ರ ಹಾಗೂ ಎಂ.ಕಾಂ ತರಗತಿ ನಡೆಸಲು ರಾಮನಗರ ಜಿಲ್ಲಾ ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಐದು ಕೊಠಡಿಗಳು ಲಭ್ಯವಾಗಿವೆ. ಕೊಠಡಿಯ ಲಭ್ಯತೆಯ ಆಧಾರದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ದಾಖಲಾತಿ ಪಡೆದು, ಮೂರನೇ ಸೆಮಿಸ್ಟರ್‌ ಪ್ರವೇಶ ಮಾಡಲಿರುವ ವಿದ್ಯಾರ್ಥಿಗಳಿಗೂ ಅಲ್ಲಿಯೇ ವ್ಯವಸ್ಥೆ ಮಾಡಲಾಗುತ್ತದೆ.

ರಾಮನಗರ ಸ್ನಾತಕೋತ್ತರ ಕೇಂದ್ರಕ್ಕೆ ಸಂಬಂಧಿಸಿದಂತೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ. ಸಂಸದರು ಸೂಕ್ತ ಸ್ಥಳ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಕೌಶಲ್ಯಾಧಾರಿತ ಕೋರ್ಸ್‌ಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಮುಂದಿನ ವರ್ಷ ಎಂ.ಎಸ್ಸಿ ಗಣಿತ ಕೋರ್ಸ್‌ ಆರಂಭಿಸುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಕೋರ್ಸ್‌ ಬಹಳ ಅಗತ್ಯ.
-ಪ್ರೊ.ಎಚ್‌.ಎನ್‌.ರಮೇಶ್‌, ಬೆಂವಿವಿ ಹಂಗಾಮಿ ಕುಲಪತಿ 

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next