Advertisement

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

01:35 AM Dec 02, 2021 | Team Udayavani |

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ್ಯೂ ಗೋ ಹತ್ಯೆ ನಡೆಯುತ್ತಿರುವುದಕ್ಕೆ ತೀವ್ರ ನೋವಿದೆ. ಗೋ ಕಳ್ಳರನ್ನು ಸಂಪೂರ್ಣವಾಗಿ ಬಲೆ ಹಾಕುವ ತನಕ ಬಿಡುವುದಿಲ್ಲ ಮತ್ತು ಪೊಲೀಸ್‌ ಇಲಾಖೆಯನ್ನು ಬಲಪಡಿಸಲಿದ್ದೇವೆ ಪಂಚಾಯತ್‌ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ತೀರ್ಥಹಳ್ಳಿಯ ಮೇಳೆಗೆ ಸಮೀಪದ ಕೂಳೂರು ಮಾರ್ಗದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವುದನ್ನು ತಡೆಯಲು ಯತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರಿಬ್ಬರ ಮೇಲೆ ಪಿಕ್‌ಅಪ್‌ ಹತ್ತಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಕೆಎಂಸಿಯಲ್ಲಿ ದಾಖಲಾಗಿದ್ದ ಕಾರ್ಯಕರ್ತರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

ಆನಂತರ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದಲ್ಲಿದ್ದಾಗಲೂ ಗೋ ರಕ್ಷರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿರುವುದರಿಂದ ಮೈ ಕುದಿಯುತ್ತಿದೆ. ಇಂತಹ ವಿಷಯದಲ್ಲಿ ಪೊಲೀಸರು ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳುವ ಬಗ್ಗ ಗೃಹ ಸಚಿವರೊಂದಿಗೂ ಚರ್ಚೆ ಮಾಡಲಾಗುತ್ತದೆ. ಗೋ ಹತ್ಯೆ ಮಾಡುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ಇದಕ್ಕಾಗಿ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ತರಲಿದ್ದೇವೆ. ಬಿಜೆಪಿ ಶಾಸಕರು ಯವುದೇ ಕಾರಣಕ್ಕೂ ಗೋ ಹಂತಕರಿಗೆ ಬೆಂಬಲ ನೀಡುವುದಿಲ್ಲ ಎಂದರು.

ಕಾಂಗ್ರೆಸ್‌ ಸರಕಾರ ಇದ್ದಾಗ ಗೋ ರಕ್ಷಕರ ಮೇಲೆ ಕೇಸ್‌ ಹಾಕಿಸುವ ಪ್ರಯತ್ನ ನಡೆಸಿದ್ದರು. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಿದ್ದರು. ಈಗಲೂ ಗೋ ಹತ್ಯೆ ಸಂಪೂರ್ಣವಾಗಿ ನಿಂತಿಲ್ಲ. ಆದರೆ, ಈ ಹಿಂದೆ ನಡೆಯುತ್ತಿದ್ದಷ್ಟು ನಡೆಯುತ್ತಿಲ್ಲ. ಗೋ ರಕ್ಷಣೆಯಲ್ಲಿ ಹಲ್ಲೆಗೆ ಒಳಗಾದ ಕಾರ್ಯಕರ್ತರ ಆಸ್ಪತ್ರೆ ವೆಚ್ಚ ಅವರ ಕುಟುಂಬದ ಮೇಲೆ ಬೀಳದಂತೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

Advertisement

ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಹಿಂದೂ ಸಂಘಟನೆಯ ವಾಸುದೇವ, ದಯಾಳು, ಕಾಂತೇಶ್‌ ಇದ್ದರು.

ನಿರಾಣಿ ಸಿಎಂ ಆಗುತ್ತಾರೆ ಎಂದಿದ್ದು ನಿಜ
ಮುರುಗೇಶ್‌ ನಿರಾಣಿಯವರು ಸಣ್ಣ ಉದ್ಯಮದಿಂದ ದೇಶಕ್ಕೆ ಮಾದರಿಯಾಗುವ ದೊಡ್ಡ ಸಕ್ಕರೆ ಕಾರ್ಖಾನೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರಲ್ಲಿ ಕೌಶಲ, ಬುದ್ದಿವಂತಿಕೆಯಿದೆ. ಮುಂದೊಂದು ದಿನ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದೇನೆ. ಆದರೆ, ಈಗಲೇ ಮುಖ್ಯಮಂತ್ರಿ ಬದಲಾಗಿ ನಿರಾಣಿಯವರು ಹೊಸ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಲ್ಲ. ಈ ಹಿಂದೆ ನನ್ನನ್ನು ಸಂಘಟನೆಯೆ ಉಪಮುಖ್ಯಮಂತ್ರಿ ಮಾಡಿದ್ದು. ಮುಂದೆಯೂ ಸಂಘಟನೆ ಏನು ಮಾಡುತ್ತದೋ ಅದು ಆಗುತ್ತದೆ ಎಂದರು.

ಮೊಟ್ಟೆ ನೀಡುತ್ತೇವೆ
ಸರಕಾರದ ಯೋಜನೆ, ಕಾರ್ಯ ಕ್ರಮಗಳನ್ನು ವಿರೋಧಿಸುವುದ ಕ್ಕಾಗಿಯೇ ಕೆಲವರು ಇದ್ದಾರೆ. ಮೊಟ್ಟೆ ನೀಡುತ್ತಿರುವುದು ಇದೇ ಮೊದಲಲ್ಲ. ದೇಶದಲ್ಲಿ ಅನೇಕ ಸರಕಾರಗಳು ಮೊಟ್ಟೆ ನೀಡಿವೆ. ಜನರ ಹಿತದೃಷ್ಟಿಯಿಂದ ಆಯಾ ಇಲಾಖೆಗಳು ಕ್ರಮ ತೆಗೆದುಕೊಳ್ಳಲಿವೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡಬೇಕೋ, ಸೇಬು ನೀಡಬೇಕೋ ಎಂಬುದನ್ನು ಸರಕಾರ ನಿರ್ಧರಿಸಲಿದೆ ಎಂದು ಈಶ್ವರಪ್ಪ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next