Advertisement

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

12:59 AM Nov 28, 2024 | Team Udayavani |

ಉಡುಪಿ: ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ಸೃಷ್ಟಿಸಿ ಸರಕಾರ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡೆ ಯುತ್ತಿದ್ದವರ ಮೇಲೆ ಇದೀಗ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

Advertisement

ನಕಲಿ ಕಾರ್ಮಿಕ ಕಾರ್ಡ್‌ ಗಳನ್ನು ಪತ್ತೆಹಚ್ಚಲು ಇಲಾಖೆ ಮುಂದಾಗಿದ್ದು ಈ ವರೆಗೆ ಉಭಯ ಜಿಲ್ಲೆಯಲ್ಲಿ 1,286 ನಕಲಿ ಕಾರ್ಡ್‌ ಗಳನ್ನು ಅಮಾನತುಗೊಳಿಸಲಾಗಿದೆ.

ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 2,46,951 ಕಾರ್ಡ್‌ ನಕಲಿ ಎಂದು ಪಟ್ಟಿ ಮಾಡಿ ಕಾರ್ಮಿಕ ಇಲಾಖೆ ಈ ಎಲ್ಲ ಕಾರ್ಡ್‌ಗಳನ್ನು ಅಮಾನತುಗೊಳಿಸಿದೆ.

ಕಾರ್ಮಿಕರಲ್ಲದವರು ನಕಲಿ ಕಾರ್ಡ್‌ಗಳನ್ನು ಮಾಡಿಸಿ ಸರಕಾರದ ಯೋಜನೆಗಳ ಲಾಭ ಪಡೆಯು ತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿದ್ದವು. ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು 1,69,180 ಕಾರ್ಡ್‌ಗಳು ಪತ್ತೆಯಾಗಿದೆ.

ಸರಕಾರದ ಸೌಲಭ್ಯ
ಕಾರ್ಮಿಕ ಕಾರ್ಡ್‌ ಹೊಂದಿದವರಿಗೆ ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್‌ ಕಿಟ್‌, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಹೀಗೆ 15ಕ್ಕೂ ಹೆಚ್ಚು ವಿಭಾಗದಲ್ಲಿ ಆರ್ಥಿಕ ನೆರವು ಸರಕಾರದಿಂದ ಸಿಗುತ್ತಿದೆ.

Advertisement

ಮಾನದಂಡಗಳೇನು?
ನಿರ್ಮಾಣಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರಬೇಕು. ಪ್ಲಂಬರ್‌, ಪೇಂಟಿಂಗ್‌, ರಸ್ತೆ ನಿರ್ಮಾಣ, ಇಟ್ಟಿಗೆ ನಿರ್ಮಾಣ ಸೇರಿ 56 ವೃತ್ತಿ ಮಾಡುವವರು ಈ ಕಾರ್ಡ್‌ ಪಡೆಯಲು ಅರ್ಹರಾಗಿದ್ದಾರೆ.ನಿರ್ಮಾಣಕ್ಕೆ ಸಂಬಂಧಪಟ್ಟಂತೆ 90 ದಿನ ಕೆಲಸ ಮಾಡಿದ್ದರೆ ಅಂತವರು ಕಾರ್ಮಿಕರ ಕಾರ್ಡ್‌ ಪಡೆಯಲು ಅರ್ಹರು.

ಪ್ರತೀ ವರ್ಷ 1,800 ಕೋಟಿ ರೂ. ಹಣವನ್ನು ಈ ಯೋಜನೆಗಳಿಗೆ ಮೀಸಲಿಡುವ ಇಲಾಖೆ 1,800 ರೂ. ಕೋಟಿ ಪೈಕಿ 1,209 ಕೋಟಿ ರೂ.ಗಳನ್ನು ಫ‌ಲಾನುಭವಿಗಳಿಗೆ ನೀಡುತ್ತಿದೆ.

ಖುದ್ದು ನೋಂದಣಿ
ಮೊಬೈಲ್‌ ಆ್ಯಪ್‌ ಮೂಲಕ ಇ-ಹಾಜರಾತಿ ಸವಲತ್ತು ಕಲ್ಪಿಸಲು ಈಗ ಯೋಜನೆ ರೂಪಿಸಲಾಗಿದೆ. ಕಟ್ಟಡ ಇತರ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿಯೇ ಕಾರ್ಮಿಕರ ನೋಂದಣಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸ್ಥಳದಲ್ಲೇ ಇ-ಕಾರ್ಡ್‌ ಕೊಡುವ ವ್ಯವಸ್ಥೆಯನ್ನೂ ಜಾರಿಗೆ ತರಲು ತಯಾರಿ ನಡೆಯುತ್ತಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕಾರ್ಡ್‌ ರದ್ದಾಗಲಿದೆ
ಬೆಂ.ಗ್ರಾಮಾಂತರ 402, ಬೆಂ.ನಗರ 2,967, ಬಾಗಲಕೋಟೆ 2,039, ಬೆಳಗಾವಿ 1,136, ಬಳ್ಳಾರಿ 1,498, ಬೀದರ್‌ 25,759, ವಿಜಯಪುರ 2,097, ಚಾಮರಾಜನಗರ 743, ಚಿಕ್ಕಬಳ್ಳಾಪುರ 1,242, ಚಿಕ್ಕಮಗಳೂರು 1,173, ಚಿತ್ರದುರ್ಗ 859, ದಕ್ಷಿಣ ಕನ್ನಡ 1,076, ದಾವಣಗೆರೆ 3,659, ಧಾರವಾಡ 3,503, ಗದಗ 3,051, ಕಲಬುರಗಿ 2,280, ಹಾಸನ 2,266, ಹಾವೇರಿ 1,69,180, ಕೊಡಗು 175, ಕೋಲಾರ 1988, ಕೊಪ್ಪಳ 2083, ಮಂಡ್ಯ 396, ಮೈಸೂರು 1,316, ರಾಯಚೂರು 383, ರಾಮನಗರ 2748, ಶಿವಮೊಗ್ಗ 6,900, ತುಮಕೂರು 1,210, ಉಡುಪಿ 210, ಉತ್ತರ ಕನ್ನಡ 4,155.

ಅಕ್ರಮ ತಡೆಗೆ ಕ್ರಮ
ಕಾರ್ಮಿಕರು ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುತ್ತಾರೆ. ಹೋದಲ್ಲೆಲ್ಲ ನೋಂದಣಿ ಮಾಡುವ ಬದಲು ಪೋರ್ಟ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ ಪಡೆದ ಕಾರ್ಡ್‌ ಎಲ್ಲೇ ಕೆಲಸ ಮಾಡಿದರೂ ಅದರಲ್ಲಿ ಮಾಹಿತಿ ಅಡಕವಾಗುವ ಏರ್ಪಾಡು ಮಾಡಲು ಕಾರ್ಮಿಕ ಇಲಾಖೆ ಯೋಜನೆ ಸಿದ್ಧಪಡಿಸಿದೆ.

ಕಾರ್ಮಿಕ ಕಾರ್ಡ್‌ಗಳ ದುರುಪಯೋಗ ಸಲ್ಲದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
– ಕಮಲ್‌ ಶಾ ಅಲ್ತಫ್ ಅಹಮ್ಮದ್‌,
ಜಿಲ್ಲಾ ಕಾರ್ಮಿಕ ಅಧಿಕಾರಿ, ಉಡುಪಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next