Advertisement
ಮಾರತ್‌ಹಳ್ಳಿಯ ಮಂಜುನಾಥ್‌ನಗರ ನಿವಾಸಿ ಪ್ರಶಾಂತ್ ಕುಮಾರ್ ಪರಾರಿಯಾದ ಆರೋಪಿ. ಶನಿವಾರ ರಾತ್ರಿ ಪ್ರಕರಣವೊಂದರ ಸಂಬಂಧ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ಪ್ರಶಾಂತ್ ತಪ್ಪಿಸಿಕೊಂಡಿದ್ದಾನೆ. ಪ್ರಶಾಂತ್ ಕುಮಾರ್ ಪತ್ತೆಗಾಗಿ ಇನ್‌ಸ್ಪೆಕ್ಟರ್‌ಗಳಾದ ಸಾದಿಕ್ ಪಾಷಾ, ಜಯರಾಜ್, ಪ್ರಶಾಂತ್‌ಬಾಬು ನೇತೃತ್ವದ ತಂಡ ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಈ ವೇಳೆ ಕಾನ್‌ಸ್ಟೆಬಲ್‌ಗಳಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಆರೋಪಿ ಪರಾರಿಯಾದ ಮಾಹಿತಿ ತಿಳಿಯುತ್ತಿದ್ದಂತೆ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಗಂಟೆಗಳ ಕಾಲ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಲು ತಿಳಿಸಿದ್ದಾರೆ.
ಹತ್ಯೆ ಯತ್ನವನ್ನೂ ಮಾಡಿದ್ದ: ಪ್ರಶಾಂತ್‌ನ ಸಹೋದರ ವಿನೋದ್ ಎಂಬಾತ ರೌಡಿಶೀಟರ್ ಆಗಿದ್ದ. ವಿನೋದ್‌ನನ್ನು ಮತ್ತೂಬ್ಬ ರೌಡಿ ಶೀಟರ್ ಶಿವರಾಜ್ ಮತ್ತು ತಂಡ ನಡುರಸ್ತೆಯಲ್ಲಿ ಕೊಲೆಗೈದಿತ್ತು. ಇದರಿಂದ ಆಕ್ರೋಶಗೊಂಡಿದ್ದ ಪ್ರಶಾಂತ್ ನಾಲ್ಕೈದು ಮಂದಿ ಯುವಕರ ತಂಡ ಕಟ್ಟಿಕೊಂಡು ಶಿವರಾಜ್ ಕೊಲೆಗೆ ಸಂಚು ರೂಪಿಸಿದ್ದ. ಆದರೆ, ಅಷ್ಟರಲ್ಲಿ ಶಿವರಾಜ್ ಜೈಲು ಸೇರಿದ್ದ.
ಇತ್ತ ಸಹೋದರ ವಿನೋದ್ ಹತ್ಯೆಗೈಯುವಾಗ ಸ್ಥಳೀಯರು ಸಹಾಯಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಸುಮಾರು 40 ವಾಹನಗಳ ಗಾಜುಗಳನ್ನು ಧ್ವಂಸಗೊಳಿಸಿದ್ದ. ಇದಾದ ಕೆಲವೇ ದಿನಗಳಲ್ಲಿ ಮಾರಕಾಸ್ತ್ರಗಳನ್ನು ಮನೆಗಳ ಮೇಲೆ ಎಸೆದು ದಾಂಧಲೆ ಆರಂಭಿಸಿದ್ದ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ.
ಕೆಲ ದಿನಗಳ ಬಿಟ್ಟು ಮತ್ತೆ ನಗರಕ್ಕೆ ಬಂದಿದ್ದ ಆತ ತನ್ನ ಪೋಷಕರೊಂದಿಗೆ ಸೇರಿಕೊಂಡು ರೌಡಿಶೀಟರ್ ಶಿವರಾಜ್‌ನ ತಂದೆ ಕೃಷ್ಣಪ್ಪನ ಮೇಲೆ ದಾಳಿ ನಡೆಸಿ ಹತ್ಯೆಗೈಯಲು ಯತ್ನಿಸಿದ್ದ. ಆದರೆ, ಅದೃಷ್ಟವಶಾತ್ ಕೃಷ್ಣಪ್ಪ ಬದುಕುಳಿದಿದ್ದರು. ಈ ಪ್ರಕರಣದಲ್ಲೂ ಪ್ರಶಾಂತ್ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರಮಂದಿರದಲ್ಲೇ ಬಂಧಿಸಬೇಕಿತ್ತು ಆರೋಪಿ ಪ್ರಶಾಂತ್ ಕೋಲಾರದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಕೆಲ ದಿನಗಳ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು. ಅದರಂತೆ ಪೊಲೀಸರು ಆತನ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದರು. ಶುಕ್ರವಾರ ರಾತ್ರಿ ಮದ್ಯ ಸೇವಿಸಿದ್ದ ಆರೋಪಿ ಪ್ರಶಾಂತ್ ಅಲ್ಲಿನ ಚಿತ್ರಮಂದಿವೊಂದಕ್ಕೆ ತೆಲುಗು ಚಿತ್ರ ವೀಕ್ಷಣೆಗೆ ಹೋಗಿದ್ದ. ಅದೇ ವೇಳೆ ಆತನನ್ನು ಬೆಂಬತ್ತಿದ ಪೊಲೀಸರು ಚಿತ್ರಮಂದಿರದಲ್ಲೇ ಬಂಧಿಸಿದ್ದಾರೆ. ಆದರೆ, ಪೊಲೀಸರು ಮಫ್ತಿಯಲ್ಲಿ ಬಂದಿದ್ದರಿಂದ ಹೈಡ್ರಾಮಾ ಸೃಷ್ಟಿಸಿದ ಪ್ರಶಾಂತ್, ಯಾರೋ ತನ್ನನ್ನು ಅಪಹರಿಸುತ್ತಿದ್ದಾರೆ ಎಂದು ಕೂಗಾಡಿದ್ದ. ಇದನ್ನು ಗಮನಿಸಿದ ಚಿತ್ರಮಂದಿರದಲ್ಲಿದ್ದ ಇತರರು ಆತನ ನೆರವಿಗೆ ಬರಲು ಮುಂದಾದರಾದರೂ ಅಷ್ಟರಲ್ಲಿ ಅದು ಪೊಲೀಸರು ಎಂದು ಗೊತ್ತಾಗಿ ಸುಮ್ಮನಾದರು ಎನ್ನಲಾಗಿದೆ. ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವುದನ್ನು ಪ್ರಶಾಂತ್ ಕರಗತ ಮಾಡಿಕೊಂಡಿದ್ದ. ಹೀಗಾಗಿ ಚಿತ್ರಮಂದಿರದಲ್ಲೇ ಸೆರೆ ಹಿಡಿಯುವುದು ಅನಿವಾರ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.