Advertisement

KPSC :ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಈಶ್ವರ ಖಂಡ್ರೆ ಆಗ್ರಹ

08:33 PM May 28, 2021 | Team Udayavani |

ಬೀದರ್: ಕರ್ನಾಟಕ ಲೋಕಸೇವಾ ಆಯೋಗ 2011ರಲ್ಲಿ ನಡೆಸಿದ್ದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆ ಬರೆದು, ಉತ್ತೀರ್ಣರಾಗಿ, ಸಂದರ್ಶನವನ್ನೂ ಎದುರಿಸಿ ಆಯ್ಕೆಯಾಗಿದ್ದ ಎಲ್ಲ 362 ಅಭ್ಯರ್ಥಿಗಳಿಗೆ ಇನ್ನು ವಿಳಂಬ ಮಾಡದೆ ಕೂಡಲೇ ನೇಮಕಾತಿ ಆದೇಶ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಕೆಪಿಎಸ್ಸಿ, 2011ನೇ ಸಾಲಿನಲ್ಲಿ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆ ಭರ್ತಿಗೆ ನಡೆಸಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮದ ಆರೋಪ ಹೊತ್ತಿದ್ದ ಅಂದಿನ ಅಧ್ಯಕ್ಷರು ಮತ್ತು 9 ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದಿರಲು ನಿನ್ನೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಅವರೆಲ್ಲರೂ ನೇಮಕಾತಿಗೆ ಅರ್ಹರಾಗಿದ್ದಾರೆ, ಜೊತೆಗೆ ರಾಜ್ಯದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಸರ್ಕಾರ ತಕ್ಷಣವೇ ನೇಮಕಾತಿ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ರಮದಲ್ಲಿ ಯಾರ ಮೇಲೂ ಕ್ರಮವಾಗಿಲ್ಲ ಆದರೂ, 3 ವರ್ಷ ಕಷ್ಟಪಟ್ಟು ಪರೀಕ್ಷೆ ಬರೆದು, ಸಂದರ್ಶನ ಎದುರಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತಾಗುತ್ತದೆ ಮತ್ತು ಅವರಿಗೆ ಮಾಡಿದ ಅನ್ಯಾಯ ಆಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಕೋವಿಡ್ ನಿಯಂತ್ರಣ ಮಾಡುವತ್ತ ಗಮನ ಕೊಡಿ : ಅಧಿಕಾರಿಗಳಿಗೆ  ಡಿಸಿ ರೋಹಿಣಿ ಸಿಂಧೂರಿ ಸೂಚನೆ

2020ರ ಮಾರ್ಚ್ ನಲ್ಲಿ ನಡೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಈ ವಿಷಯ ಸುದೀರ್ಘವಾಗಿ ಚರ್ಚಿತವಾಗಿತ್ತು, ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಕೂಡನೇ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದರು. ಸರ್ಕಾರ ಸಂಪುಟದಲ್ಲಿ ನಿರ್ಧರಿಸಿ ನೇಮಕಾತಿ ಮಾಡುವ ಭರವಸೆ ನೀಡಿತ್ತು. ಈಗ ಪ್ರಾಸಿಕ್ಯೂಷನ್ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಎಲ್ಲ 362 ಅಭ್ಯರ್ಥಿಗಳಿಗೂ ಮತ್ತೆ ವಿಳಂಬ ಮಾಡದೆ ನೇಮಕಾತಿ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಸಿಐಡಿ ತನಿಖೆಯಲ್ಲಿ ಯಾವುದೇ ವಾಸ್ತವಿಕ ಸಾಕ್ಷ್ಯಾಧಾರವೂ ಲಭಿಸಿರಲಿಲ್ಲ, ಮಿಗಿಲಾಗಿ ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರ ಮೇಲಿನ ಆರೋಪಗಳ ತನಿಖೆಗೆ ರಾಜ್ಯಪಾಲರ ಅನುಮತಿಯೂ ಇರಲಿಲ್ಲ. ಆದಾಗ್ಯೂ ಆಡಳಿತದಲ್ಲಿನ ಕೆಲವೊಂದು ತಪ್ಪು ನಿರ್ಧಾರಗಳಿಂದಾಗಿ 3 ವರ್ಷಗಳ ಕಾಲ ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಆಯ್ಕೆಯಾದವರು, ನೇಮಕಾತಿಗಾಗಿ ಮತ್ತೆ 8 ವರ್ಷಗಳಿಂದ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಮಾಡದವರೂ ಶಿಕ್ಷೆ ಅನುಭವಿಸುತ್ತಿದ್ದಾರೆ. ಹೀಗಾಗಿ 2011ರ ಗೆಜೆಟೆಡ್ ಪ್ರೊಬೆಷನರಿಗಳ ನೇಮಕಾತಿಗೆ ಸುಗ್ರೀವಾಜ್ಞೆ ಹೊರಡಿಸಿ ಎಲ್ಲಾ ಅಭ್ಯರ್ಥಿಗಳಿಗೂ ತಕ್ಷಣವೇ ನೇಮಕಾತಿ ಆದೇಶ ನೀಡಬೇಕು ಅವರಿಗೆ ನ್ಯಾಯ ಒದಗಿಸಬೇಕೆಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next