Advertisement

ಸಮಾನ ನಾಗರಿಕ ಸಂಹಿತೆ: ಚರ್ಚೆ ಮತ್ತೆ ಮುನ್ನೆಲೆಗೆ

06:38 PM Mar 26, 2022 | Team Udayavani |

ಇತ್ತೀಚೆಗೆ ಮುಕ್ತಾಯವಾಗಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ವಹಿಸಿಕೊಂಡಿದೆ. ಆ ಪೈಕಿ ಉತ್ತರಾಖಂಡದಲ್ಲಿ ಬಿಜೆಪಿ ಸರಕಾರ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡುವ ನಿರ್ಧಾರ ಕೈಗೊಂಡಿದೆ. ಹೀಗಾಗಿ ದೇಶಾದ್ಯಂತ ಮತ್ತೆ ಅದರ ಚರ್ಚೆ ಶುರುವಾಗಿದೆ. ಇತರ ರಾಜ್ಯಗಳಲ್ಲಿಯೂ ಅದು ಜಾರಿಗೆ ಬರಲಿದೆಯೇ ಎಂಬ ಜಿಜ್ಞಾಸೆಯೂ ಶುರುವಾಗಿದೆ. ಹಾಗಿದ್ದರೆ, ಸಮಾನ ನಾಗರಿಕ ಸಂಹಿತೆ ಬಗ್ಗೆ ಕೊಂಚ ಅಧ್ಯಯನ ನಡೆಸೋಣ.

Advertisement

ಏನಿದು ಸಮಾನ ನಾಗರಿಕ ಸಂಹಿತೆ?
ಯುನಿಫಾರ್ಮ್ ಸಿವಿಲ್‌ ಕೋಡ್‌ (ಯುಸಿಸಿ) ಅಥವಾ ಸಮಾನ ನಾಗರಿಕ ಸಂಹಿತೆ ಎಂದರೆ ಭಾರತ ದೇಶಕ್ಕೆ ಅನ್ವಯವಾಗುವಂತೆ ಜಾರಿ ಮಾಡಲಾಗುವ ಒಂದೇ ಕಾನೂನು. ಅದನ್ನು ಎಲ್ಲ ಜಾತಿ ಮತ್ತು ಸಮುದಾಯಗಳಿಗೆ ಅನ್ವಯವಾಗುವಂತೆ ಅನುಷ್ಠಾನ ಮಾಡುವುದು ಮೂಲ ಉದ್ದೇಶ. ಮದುವೆ, ವಿವಾಹ ವಿಚ್ಛೇದನ, ದತ್ತು ಸ್ವೀಕಾರ, ಉತ್ತರಾಧಿಕಾರ ವಿಚಾರಗಳನ್ನು ಅದು ಒಳಗೊಳ್ಳಲಿದೆ. ನಮ್ಮ ದೇಶದ ಸಂವಿಧಾನದ 44ನೇ ವಿಧಿಯಲ್ಲಿ ಅದರ ಬಗ್ಗೆ ಉಲ್ಲೇಖವಾಗಿದೆ. “ಭಾರತ ದೇಶಾದ್ಯಂತ ನಾಗರಿಕರಿಗೆ ಅನ್ವಯವಾಗುವಂತೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದು ಸರಕಾರದ ಕರ್ತವ್ಯವಾಗಿರುತ್ತದೆ’ ಎಂದು ಉಲ್ಲೇಖಗೊಂಡಿದೆ. ಅದು ಜಾರಿಯಾದರೆ ಸಮಾಜದ ಕೆಲವು ವರ್ಗಗಳ ಹಿತಾಸಕ್ತಿ ಕಾಪಾಡಲು ಇದು ನೆರವಾಗುತ್ತದೆ. ಜತೆಗೆ ದೇಶದ ಏಕತೆಯನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ.

ರಾಜಕೀಯ ಮಹತ್ವ
ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಿಂದಿನಿಂದಲೂ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವುದರ ಬಗ್ಗೆ ಒಲವು ಹೊಂದಿದೆ. 2019ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಂಹಿತೆ ಜಾರಿ ಮಾಡುವುದಾಗಿ ಚುನಾವಣ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿತ್ತು.

ಈಗಿನದ್ದಲ್ಲ; ಬ್ರಿಟಿಷರ ಕಾಲದ್ದು
ಸಮಾನ ನಾಗರಿಕ ಸಂಹಿತೆಯ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪರ- ವಿರೋಧದ ಬಗ್ಗೆ ಚರ್ಚೆಯಾಗುತ್ತಿರಬಹುದು. ಆದರೆ ಅದರ ಮೂಲ ಹಿಂದಿನ ಬ್ರಿಟಿಷ್‌ ಆಡಳಿತದ್ದು. 1835ರಲ್ಲಿ ಭಾರತದ ಕಾನೂನುಗಳಲ್ಲಿ ಸಮಾನತೆ ಇರಬೇಕು ಎಂಬ ಬಗ್ಗೆ ಚರ್ಚೆ ನಡೆದು, ಅದರ ಬಗ್ಗೆ ವರದಿ ಸಲ್ಲಿಕೆಯಾಗಿತ್ತು. ಅಪರಾಧ, ಸಾಕ್ಷ್ಯ ಮತ್ತು ಗುತ್ತಿಗೆ ವಿಚಾರಗಳು, ವಿಶೇಷವಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಹೊಂದಿರುವ ವೈಯಕ್ತಿಕ ಕಾನೂನುಗಳು, ಧಾರ್ಮಿಕ ಕಟ್ಟುಪಾಡುಗಳ ವಿಚಾರವನ್ನು ಈ ಸಂಹಿತೆ ವ್ಯಾಪ್ತಿಯಿಂದ ಹೊರಗೆ ಇರಿಸಬೇಕು ಎಂದು ಆ ಸಂದರ್ಭದಲ್ಲಿ ತೀರ್ಮಾನಿಸಲಾ ಗಿತ್ತು. ಅಂದಿನ ಬ್ರಿಟಿಷ್‌ ಸರಕಾರದ ಮೇಲೆ ಕೂಡ ಧಾರ್ಮಿಕ ಕಟ್ಟುಪಾಡುಗಳು ಮತ್ತು ವೈಯಕ್ತಿಕ ಕಾನೂನು ಗಳ ವಿಚಾರದಲ್ಲಿ ಕಾನೂನಾತ್ಮಕ ಚೌಕಟ್ಟು ತರಬೇಕು ಎಂಬ ಒತ್ತಡ ಇತ್ತು. ಹೀಗಾಗಿ ಅದು ಬಿ.ಎನ್‌.ರಾವ್‌ ಸಮಿತಿ ಯನ್ನು 1941ರಲ್ಲಿ ರಚಿಸಿ, ಹಿಂದೂ ಸಮುದಾಯ ದಲ್ಲಿರುವ ಧಾರ್ಮಿಕ ಕಟ್ಟುಪಾಡುಗಳನ್ನು ಅಭ್ಯಾಸ ಮಾಡಿ, ಹಿಂದೂ ಸಮುದಾಯಕ್ಕೆ ಸಮಾನವಾಗಿರುವ ಕಾನೂನುಗಳ ಅಗತ್ಯತೆಯ ಬಗ್ಗೆ ಅಧ್ಯಯನ ನಡೆಸಲು ಸೂಚಿಸಲಾಗಿತ್ತು. ಹಿಂದೂ ಸಮುದಾಯದ ಹಲವು ಪೌರಾಣಿಕ ಗ್ರಂಥಗಳು, ಶಾಸನಗಳನ್ನು ಅಧ್ಯಯನ ನಡೆಸಿ, ಹಿಂದೂ ಕಾನೂನು ರಚನೆಯ ಶಿಫಾರಸು ಮಾಡಿತ್ತು. ಅದರಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದು ರಾವ್‌ ಸಮಿತಿ ಹೇಳಿತ್ತು. 1937ರಲ್ಲಿ ಜಾರಿಯಾಗಿದ್ದ ಕಾಯ್ದೆ ಹಿಂದೂ ಸಮಾಜದಲ್ಲಿ ವಿವಾಹ ಮತ್ತು ಉತ್ತರಾಧಿಕಾರ ವಿಚಾರದಲ್ಲಿ ಸಮಾನ ಕಾನೂನು ಮತ್ತು ನಿಯಮಗಳ ರಚನೆಯ ಬಗ್ಗೆ ಶಿಫಾರಸು ಮಾಡಿತ್ತು.

ಹಿಂದೂ ಸಂಹಿತೆ ಮಸೂದೆ ಎಂದರೇನು?
ಬಿ.ಎನ್‌.ರಾವ್‌ ನೇತೃತ್ವದ ಸಮಿತಿ ತನ್ನ ಶಿಫಾರಸುಗಳನ್ನು ಸಂವಿಧಾನಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ನೇತೃತ್ವದ ಆಯ್ಕೆ ಸಮಿತಿಗೆ ಸಲ್ಲಿಕೆ ಮಾಡಿತ್ತು. ದೇಶದಲ್ಲಿ ಸಂವಿಧಾನ ಆಯ್ಕೆಗೊಂಡ ಬಳಿಕ ಅಂದರೆ, 1951ರಲ್ಲಿ ಅದನ್ನು ಪರಾಮರ್ಶೆ ನಡೆಸಲು ತೀರ್ಮಾನಿಸಲಾಗಿತ್ತು. ಚರ್ಚೆಗಳು ಮುಂದುವರಿಯುತ್ತಿದ್ದಂತೆ ಅದರ ಮಾನ್ಯತೆ ಮುಕ್ತಾಯವಾಗಿತ್ತು. ಹೀಗಾಗಿ 1952ರಲ್ಲಿ ಶಿಫಾರಸನ್ನು ಮತ್ತೆ ಸಲ್ಲಿಕೆ ಮಾಡಲಾಗಿತ್ತು.

Advertisement

n1956ರಲ್ಲಿ ಪರಾಮರ್ಶೆ ಬಳಿಕ ಹಿಂದೂ ಸಂಹಿತೆ ಮಸೂದೆ (ಹಿಂದೂ ಕೋಡ್‌ ಬಿಲ್‌)ಯನ್ನು ಅಂಗೀಕರಿಸಿ, ಅದನ್ನು ಹಿಂದೂ ಉತ್ತರಾಧಿಕಾರ ಕಾಯ್ದೆ ಎಂದು ತಿದ್ದುಪಡಿ ಮಾಡಿ, ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಕ್ಖ್ ಸಮುದಾಯಗಳಲ್ಲಿ ಆಸ್ತಿಯ ಹಂಚಿಕೆ ಬಗ್ಗೆ ಉತ್ತರಾಧಿಕಾರಿಗಳಿಗೆ ಉಯಿಲು ಮಾಡದೇ ಇದ್ದಲ್ಲಿ ಅವುಗಳನ್ನು ಸುಸೂತ್ರವಾಗಿ ನಿರ್ವಹಿಸಲೂ ಅವಕಾಶ ಕಲ್ಪಿಸಲಾಗಿತ್ತು. ಈ ಕಾಯ್ದೆಯಿಂದಾಗಿ ಹಿಂದೂ ಸಮು ದಾಯದ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಮತ್ತು ಮಾಲಕತ್ವ ಸಿಗುವಂತಾಯಿತು. ತಂದೆಯ ಕಡೆಯಿಂದ ಸಿಗಬೇಕಾಗದ ಆಸ್ತಿಯಲ್ಲೂ ಸರಿಯಾದ ಭಾಗ ಸಿಗಲು ಈ ಕಾಯ್ದೆ ನೆರವಾಗಿದೆ.

ವೈಯಕ್ತಿಕ ಕಾನೂನುಗಳೆಂದರೇನು?
ಕೆಲವು ನಿರ್ದಿಷ್ಟ ಸಮುದಾಯಗಳು ಧರ್ಮ, ಜಾತಿ, ನಂಬಿಕೆ ಮತ್ತು ವಿಶ್ವಾಸಗಳನ್ನು ಅನುಸರಿಸುವವರಿಗೆ ಇರುವ ಕಾನೂನು. ಅದಕ್ಕಾಗಿ ಆ ಸಮುದಾಯಗಳು ಹೊಂದಿರುವ ಧಾರ್ಮಿಕ ಗ್ರಂಥಗಳಲ್ಲಿನ ಉಲ್ಲೇಖ, ಕಟ್ಟುಪಾಡುಗಳ ಸಮಗ್ರ ಅಧ್ಯಯನ ನಡೆಸಿ ಕಾನೂನಿನ ರೂಪ ನೀಡಲಾಗಿರುತ್ತದೆ. ಹಿಂದೂಗಳು ಮತ್ತು ಮುಸ್ಲಿಂ ಸಮುದಾಯ ದವರು ಹೊಂದಿರುವ ಕಾನೂನುಗಳು ಆಯಾ ಸಮುದಾಯದ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ರಚಿಸಲಾಗಿರುತ್ತದೆ. ಹಿಂದೂಗಳಲ್ಲಿ ಉತ್ತರಾಧಿಕಾರ, ಪಿತ್ರಾರ್ಜಿತ, ವಿವಾಹ, ದತ್ತು ಸ್ವೀಕಾರ, ತಂದೆ ಮಾಡಿರುವ ಸಾಲವನ್ನು ಮಗ ತೀರಿಸುವ ವಿಚಾರ, ಸಹ- ಪಾಲನೆ, (ಕೋ-ಪೇರೆಂಟ್‌), ಕುಟುಂಬ ಹೊಂದಿರುವ ಆಸ್ತಿಯ ವಿಭಜನೆ, ನಿರ್ವಹಣೆ, ಪಾಲಕತ್ವ (ಗಾರ್ಡಿಯನ್‌ಶಿಪ್‌) ಮತ್ತು ದತ್ತಿಗಳಿಗೆ ದೇಣಿಗೆ ವಿಚಾರದಲ್ಲಿ ವೈಯಕ್ತಿಕ ಕಾನೂನುಗಳು ಇವೆ. ಮುಸ್ಲಿಂ ಸಮುದಾಯದಲ್ಲಿ ಪಿತ್ರಾರ್ಜಿತ, ಉಯಿಲು, ಉತ್ತರಾಧಿಕಾರ, ಪರಂಪರೆ, ವಿವಾಹ, ವಕ್ಫ್, ವರದಕ್ಷಿಣೆ, ಪಾಲಕತ್ವ (ಗಾರ್ಡಿಯನ್‌ಶಿಪ್‌), ಉಡುಗೊರೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಕುರಾನ್‌ನಿಂದ ಆಯ್ದುಕೊಳ್ಳಲಾಗಿದೆ.

ಗೋವಾದಲ್ಲಿ ಈಗಾಗಲೇ ಇದೆ
ದೇಶವನ್ನು ಗಮನಿಸಿದಾಗ ಬೀಚ್‌ಗಳ ರಾಜ್ಯ ಗೋವಾದಲ್ಲಿ ಈಗಾಗಲೇ ಸಮಾನ ನಾಗರಿಕ ಸಂಹಿತೆ ಈಗಾಗಲೇ ಜಾರಿ ಯಲ್ಲಿದೆ. ಆ ರಾಜ್ಯದಲ್ಲಿ 1867ರ ಪೋರ್ಚುಗೀಸ್‌ ಸಮಾನ ಸಂಹಿತೆಯನ್ನು ಈಗಾಗಲೇ ಹೊಂದಿದೆ. ಪೋರ್ಚುಗೀಸ್‌ ಆಡಳಿತದಿಂದ ಗೋವಾ ಮುಕ್ತಗೊಂಡ ಬಳಿಕವೂ ಅದು ಊರ್ಜಿತದಲ್ಲಿ ಇತ್ತು. 1962ರಲ್ಲಿ ಜಾರಿಗೊಂಡ ಗೋವಾ, ದಮನ್‌ ಮತ್ತು ದಿಯು ಆಡಳಿತಾತ್ಮಕ ಕಾಯ್ದೆಯ ಸೆಕ್ಷನ್‌ 5 (1)ರ ಅನ್ವಯ ಪೋರ್ಚುಗೀಸ್‌ ಸಮಾನ ಸಂಹಿತೆ ಯನ್ನೂ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿ ಜಾರಿಯಲ್ಲಿ ಇರುವ ಯುಸಿಸಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಪ್ರತಿಪಾದಿಸುತ್ತಿರುವಂತೆ ಇಲ್ಲ.

ಗೋವಾದ ಪ್ರತ್ಯೇಕತೆ ಏನು?
ಗೋವಾದಲ್ಲಿನ ನಿಯಮ ಪ್ರಕಾರ ದ್ವಿಪತ್ನಿತ್ವ ಅಥವಾ ದ್ವಿಪತಿತ್ವ ಇಲ್ಲ. ಹಿಂದೂಗಳನ್ನು ಹೊರತುಪಡಿಸಿ ಇತರ ಧರ್ಮದವರಿಗೆ ದ್ವಿಪತ್ನಿತ್ವ ಅಥವಾ ದ್ವಿಪತಿತ್ವ ಇಲ್ಲ. ಆದರೆ, ಗೋವಾದ ಹಿಂದೂಗಳ ವಿಶೇಷ ಸಂಸ್ಕೃತಿ ಮತ್ತು ಕಟ್ಟುಪಾಡುಗಳ ಸಂಹಿತೆಯಲ್ಲಿ ಉಲ್ಲೇಖಗೊಂಡಿರುವ ಪ್ರಕಾರ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಪತ್ನಿ 25 ವರ್ಷದ ಒಳಗೆ ಮಗುವಿಗೆ ಜನ್ಮ ನೀಡಲು ಅಸಾಧ್ಯವಾದರೆ ಮತ್ತು 30 ವರ್ಷದೊಳಗೆ ಗಂಡು ಮಗುವಿಗೆ ಜನ್ಮ ನೀಡಲು ಅಸಾಧ್ಯವಾದರೆ ದ್ವಿಪತ್ನಿತ್ವ ಹೊಂದಬಹುದು. ಹಿಂದೂ ಪುರುಷರಿಗೆ ಮಾತ್ರ ಇಂಥ ಅವಕಾಶ ಮಾತ್ರ ಕಲ್ಪಿಸಲಾಗಿದೆ. ಎರಡು ಭಿನ್ನ ಧರ್ಮೀಯರ ವಿವಾಹ ನೋಂದಣಿ ಮಾಡುವ ಬಗ್ಗೆ ಇರುವ ವಿಶೇಷ ವಿವಾಹ ಕಾಯ್ದೆ (ದ ಸ್ಪೆಷಲ್‌ ಮ್ಯಾರೇಜ್‌ ಆ್ಯಕ್ಟ್) ಕೂಡ ಇಲ್ಲಿ ಬೇರೆಯೇ ಆಗಿದೆ. ಕಾನೂನಿನ ಅನ್ವಯ ಗೋವಾದಲ್ಲಿ ಮುಸ್ಲಿಮರು ಬಹುಪತ್ನಿತ್ನ ಪಾಲಿಸುವಂತಿಲ್ಲ ಮತ್ತು ಮೌಖೀಕ ವಿವಾಹ ವಿಚ್ಛೇದನ (ತಲಾಖ್‌) ನೀಡಲು ಅವಕಾಶ ಇಲ್ಲ.

ಶಾಬಾನೊ ಪ್ರಕರಣದಲ್ಲೂ ಉಲ್ಲೇಖ
ಗೋವಾದ ಹೊಂದಿರುವ ವ್ಯವಸ್ಥೆಯ ಬಗ್ಗೆ 1985ರಲ್ಲಿ ಸುಪ್ರೀಂ ಕೋರ್ಟ್‌ ಶಾಬಾನೊ ಪ್ರಕರಣದ ತೀರ್ಪಿನಲ್ಲಿಯೂ ಉಲ್ಲೇಖಗೊಂಡು, ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಸಮಾನ ನಾಗರಿಕ ಸಂಹಿತೆಯ ಬಗ್ಗೆಯೂ ಕೂಡ ಸುಪ್ರೀಂ ಕೋರ್ಟ್‌ನ ಅಂದಿನ ನ್ಯಾಯಪೀಠ “ಸಂವಿಧಾನದ 44ನೇ ವಿಧಿಯಲ್ಲಿನ ಅಂಶ ಕಾನೂನಾಗದೆ ಅನುಷ್ಠಾನವಾಗದೆ ಉಳಿದಿದೆ ಎನ್ನುವುದು ವಿಷಾದನೀಯ. ವಿವಿಧ ರೀತಿಯ ಕಾನೂನುಗಳಲ್ಲಿರುವ ಅಭಿಪ್ರಾಯಗಳನ್ನು ನಿವಾರಿಸಿ ಏಕರೂಪದ ಒಂದೇ ಕಾಯ್ದೆಗಳನ್ನು ಹೊಂದಿ ಒಂದನ್ನೇ ಹೊದಲು ಮತ್ತು ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದಿಂದ ದೇಶದಲ್ಲಿ ರಾಷ್ಟ್ರೀಯ ಏಕತೆಯನ್ನು ಹೊಂದಲು ಅನುಕೂಲವಾಗಲಿದೆ. ಈ ವಿಚಾರದಲ್ಲಿ ಯಾವುದೇ ಒಂದು ಸಮುದಾಯ ಧೈರ್ಯದಿಂದ ಮುಂದೆ ಬಂದು ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ, ಸರಕಾರವೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಅಧಿಕಾರವೂ ಇದೆ ಮತ್ತು ಕಾನೂನು ತರಲೂ ಅಧಿಕಾಯುಕ್ತವಾಗಿದೆ’ ಎಂದು ಶಾಬಾನೊ ಪ್ರಕರಣದ ತೀರ್ಪಿನಲ್ಲಿ ನ್ಯಾಯಪೀಠ ಉಲ್ಲೇಖಿಸಿತ್ತು. ಜತೆಗೆ ಹಲವು ಮಹತ್ವದ ಪ್ರಕರಣಗಳ ತೀರ್ಪಿನಲ್ಲಿಯೂ ಕೂಡ ಯುಸಿಸಿ ಯಾಕೆ ಜಾರಿಯಾಗಿಲ್ಲ ಎಂದೂ ನ್ಯಾಯಪೀಠಗಳು ಪ್ರಶ್ನೆ ಮಾಡಿವೆ.

ಪರ ಮತ್ತು ವಿರೋಧ ಅಭಿಪ್ರಾಯಗಳು
ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಪ್ರತಿಪಾದಿಸುವ ಕೆಲವು ವಿಶ್ಲೇಷಕರು ಮತ್ತು ತಜ್ಞರು, ದೇಶದ ಎಲ್ಲ ಸಮುದಾಯದವರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಇದರೊಂದಿಗೆ ಲಿಂಗ ಸಮಾನತೆ ಕಾಪಾಡಿಕೊಳ್ಳಲೂ ನೆರವಾಗುತ್ತದೆ.

ಇನ್ನು ಕೆಲವರು ಹೊಂದಿರುವ ಅಭಿಪ್ರಾಯದ ಪ್ರಕಾರ ಸಮಾನತೆಯನ್ನು ಪ್ರತಿಪಾದಿಸಲು ದೀರ್ಘಾವಧಿ ತೆಗೆದುಕೊಳ್ಳಬಹುದು. ಸಂವಿಧಾನದ 25ನೇ ವಿಧಿಯಲ್ಲಿ ಪ್ರತಿಪಾದಿಸಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗಬಹುದು. ಅಲ್ಪಸಂಖ್ಯಾಕ ಸಮುದಾಯದವರು ಸದ್ಯ ಹೊಂದಿರುವ ಹಕ್ಕುಗಳಿಗೆ ಚ್ಯುತಿಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.

ಉತ್ತರಾಖಂಡ ಸರಕಾರ ಕೈಗೊಂಡ ನಿರ್ಧಾರವೇನು?
ಉತ್ತರಾಖಂಡದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಬಿಜೆಪಿ ಸರಕಾರ ಚುನಾವಣ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿದ್ದಂತೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ. ಅದರ ಅನುಷ್ಠಾನ ಹೇಗೆ ಇರಬೇಕು ಎಂಬ ಬಗ್ಗೆ ಸಮಿತಿ ರಚಿಸಲೂ ಹೊಸ ಸಚಿವ ಸಂಪುಟ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next