ಗ್ರಾಸ್ ಐಲೆಟ್: ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಹಂತಕ್ಕೆ ತೇರ್ಗಡೆಯಾಗಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಕೊನೆಯವರೆಗೆ ಹೋರಾಟ ನಡೆಸಿ ಸೋಲು ಕಂಡಿದೆ. ಸ್ಕಾಟ್ಲೆಂಡ್ ವಿರುದ್ದದ ಆಸ್ಟ್ರೇಲಿಯಾ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೂಪರ್ 8 ಹಂತಕ್ಕೆ ತೇರ್ಗಡೆಯಾಗಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸ್ಕಾಟ್ಲೆಂಡ್ ಭರ್ಜರಿ ಬ್ಯಾಟಿಂಗ್ ಮಾಡಿ ಐದು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಆಸೀಸ್ ತಂಡವು 19.4 ಓವರ್ ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ ಸ್ಕಾಟ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಯಿತು.
ಸ್ಕಾಟ್ಲೆಂಡ್ ತಂಡಕ್ಕೆ ಬ್ರೆಂಡನ್ ಮೆಕ್ ಮುಲನ್, ಬೆರಿಂಗ್ಟನ್ ಮತ್ತು ಮಸ್ಸೆ ನೆರವಾದರು. ಮೆಕ್ ಮುಲನ್ 34 ಎಸೆತದಲ್ಲಿ 60 ರನ್ ಮಾಡಿದರೆ, ಬೆರಿಂಗ್ಟನ್ 42 ರನ್ ಮತ್ತು ಮಸ್ಸೆ 35 ರನ್ ಮಾಡಿದರು.
ಗುರಿ ಬೆನ್ನತ್ತಿದ್ದ ಆಸೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತ್ತು. 8.2 ಓವರ್ ಗಳಲ್ಲಿ ಆಸೀಸ್ 60 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ಟ್ರಾವಿಸ್ ಹೆಡ್ ಮತ್ತು ಮಾರ್ಕಸ್ ಸ್ಟೋಯಿನಸ್ ಜೊತೆಯಾಟ ಸ್ಕಾಟ್ಲೆಂಡ್ ಗೆ ಮುಳುವಾಯಿತು.
ಹೆಡ್ 68 ರನ್ ಗಳಿಸಿದರೆ, ಸ್ಟೋಯಿನಸ್ ಕೇವಲ 29 ಎಸೆತಗಳಲ್ಲಿ 59 ರನ್ ಚಚ್ಚಿದರು. ಕೊನೆಯ 5 ಓವರ್ ಗಳಲ್ಲಿ 60 ರನ್ ಬೇಕಿದ್ದಾಗ ಸ್ಟೋಯಿನಸ್ ಪಂದ್ಯವನ್ನು ಆಸೀಸ್ ಕಡೆಗೆ ತಿರುಗಿಸಿದರು. ಕೊನೆಯಲ್ಲಿ ಅಜೇಯ 24 ರನ್ ಗಳಿಸಿದ ಟಿಮ್ ಡೇವಿಡ್ ಜಯ ತಂದಿತ್ತರು.
ಈ ಸೋಲಿನೊಂದಿಗೆ ಸ್ಕಾಟ್ಲೆಂಡ್ ವಿಶ್ವಕಪ್ ಸೂಪರ್ 8 ಕನಸು ನುಚ್ಚು ನೂರಾಯಿತು. ಇಂಗ್ಲೆಂಡ್ ತಂಡವು ಸೂಪರ್ 8 ಹಂತಕ್ಕೆ ತೇರ್ಗಡೆಯಾಯಿತು.