Advertisement

ಇಂಗ್ಲೆಂಡಿನ ಹೊಡೆತಕ್ಕೆ ಶರಣಾದ ನ್ಯೂಜಿಲ್ಯಾಂಡ್‌

10:51 PM Nov 01, 2022 | Team Udayavani |

ಬ್ರಿಸ್ಟನ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್‌ ತಂಡವು ಟಿ20 ವಿಶ್ವಕಪ್‌ ಕೂಟದ ಮಂಗಳವಾರದ ಮಹತ್ವದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 20 ರನ್ನುಗಳಿಂದ ಸೋಲಿಸಿತಲ್ಲದೇ ಸೆಮಿಫೈನಲಿಗೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು.

Advertisement

ನಾಯಕ ಜಾಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಅವರ ಅಮೋಘ ಆಟದಿಂದಾಗಿ ಇಂಗ್ಲೆಂಡ್‌ ತಂಡವು ಆರು ವಿಕೆಟಿಗೆ 179 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡಿನ ನಿಖರ ದಾಳಿಗೆ ರನ್‌ ಗಳಿಸಲು ಒದ್ದಾಡಿದ ನ್ಯೂಜಿಲ್ಯಾಂಡ್‌ ಆರು ವಿಕೆಟಿಗೆ 159 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಗೆಲುವಿನಿಂದ ಇಂಗ್ಲೆಂಡ್‌ ತಂಡವು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡವನ್ನು ಹಿಂದಿಕ್ಕಿ ಬಣ ಒಂದರಲ್ಲಿ ದ್ವಿತೀಯ ಸ್ಥಾನಕ್ಕೇರಿತು. ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ತಲಾ ಐದಂಕ ಹೊಂದಿದ್ದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ನ್ಯೂಜಿಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ.

ಫಿಲಿಪ್ಸ್‌ ಬಿರುಸಿನ ಅರ್ಧಶತಕ
ಭರ್ಜರಿ ಫಾರ್ಮ್ನಲ್ಲಿರುವ ಗ್ಲೆನ್‌ ಫಿಲಿಪ್ಸ್‌ ಈ ಪಂದ್ಯದಲ್ಲೂ ಬಿರುಸಿನ ಅರ್ಧಶತಕ ಹೊಡೆದರೂ ನ್ಯೂಜಿಲ್ಯಾಂಡ್‌ ಗೆಲುವಿನಿಂದ ದೂರವೇ ಉಳಿಯಿತು. ಸ್ಪಿನ್‌ಗೆ ಸ್ವಲ್ಪಮಟ್ಟಿನ ನೆರವು ನೀಡುತ್ತಿದ್ದ ಈ ಪಿಚ್‌ನಲ್ಲಿಯೂ ಫಿಲಿಪ್ಸ್‌ ಇಂಗ್ಲೆಂಡಿನ ಲೆಗ್‌ಸ್ಪಿನ್ನರ್‌ ಅದಿಲ್‌ ರಶೀದ್‌ ಅವರ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿದ್ದರು. ಅವರು ಕೇವಲ 36 ಎಸೆತಗಳಿಂದ 62 ರನ್‌ ಗಳಿಸಿದ್ದರು. 4 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು.

ನ್ಯೂಜಿಲ್ಯಾಂಡ್‌ ಕೊನೆಯ ನಾಲ್ಕು ಓವರ್‌ಗಳಲ್ಲಿ 54 ರನ್‌ ಗಳಿಸಬೇಕಿತ್ತು. ಆಗ ಫಿಲಿಪ್ಸ್‌ ಕ್ರೀಸ್‌ನಲ್ಲಿದ್ದರು. ಆದರೆ ಇಂಗ್ಲೆಂಡಿನ ವೇಗದ ಪಡೆ ನಿಖರ ದಾಳಿ ಸಂಘಟಿಸಿ ಮೇಲುಗೈ ಸಾಧಿಸಿತ್ತು. ಮಾರ್ಕ್‌ ವುಡ್‌ ಸಹಿತ ಸ್ಯಾಮ್‌ ಕರನ್‌ ಮತ್ತು ಕ್ರಿಸ್‌ ವೋಕ್ಸ್‌ ಅವರ ತೀಕ್ಷ್ಣ ದಾಳಿಯಿಂದ ನ್ಯೂಜಿಲ್ಯಾಂಡ್‌ ತತ್ತರಿಸಿತು. 18ನೇ ಓವರಿನಲ್ಲಿ ಫಿಲಿಪ್ಸ್‌ ಅವರ ಬಹುಮೂಲ್ಯ ವಿಕೆಟನ್ನು ಹಾರಿಸಿದ ಕರನ್‌ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು.

Advertisement

ಬಣ ಒಂದರ ಅಗ್ರಸ್ಥಾನಿ ನ್ಯೂಜಿಲ್ಯಾಂಡಿಗೆ ಇದು ಮೊದಲ ಸೋಲು ಆಗಿದೆ. ನಾಲ್ಕು ಪಂದ್ಯ ಆಡಿರುವ ನ್ಯೂಜಿಲ್ಯಾಂಡ್‌ ಶುಕ್ರವಾರದ ಅಂತಿಮ ಸೂಪರ್‌ 12 ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್‌ ತನ್ನ ಅಂತಿಮ ಪಂದ್ಯದಲ್ಲಿ ಶನಿವಾರ ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿಯೂ ಇಂಗ್ಲೆಂಡ್‌ ಉತ್ತಮ ರನ್‌ಧಾರಣೆಯೊಂದಿಗೆ ಗೆದ್ದರೆ ಸೆಮಿಫೈನಲಿಗೇರುವ ಸಾಧ್ಯತೆಯಿದೆ.

ಇಂಗ್ಲೆಂಡ್‌ ಉತ್ತಮ ಆರಂಭ
ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಇಂಗ್ಲೆಂಡ್‌ ತಂಡವು ಉತ್ತಮ ಆರಂಭ ಪಡೆಯಿತು. ತನ್ನ 100ನೇ ಟಿ20 ಪಂದ್ಯವನ್ನಾಡಿದ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಮೊದಲ ವಿಕೆಟಿಗೆ 10.2 ಓವರ್‌ಗಳಲ್ಲಿ 81 ರನ್‌ ಪೇರಿಸಿ ಬೇರ್ಪಟ್ಟರು. ಹೇಲ್ಸ್‌ 40 ಎಸೆತಗಳಿಂದ 52 ರನ್‌ ಗಳಿಸಿ ಔಟಾದರು. 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

ಬಹುತೇಕ ಇನ್ನಿಂಗ್ಸ್‌ಪೂರ್ತಿ ಆಡಿದ ಬಟ್ಲರ್‌ 19ನೇ ಓವರಿನಲ್ಲಿ ರನೌಟ್‌ಗೆ ಬಲಿಯಾದರು. 47 ಎಸೆತ ಎದುರಿಸಿದ ಅವರು 73 ರನ್‌ ಗಳಿಸಿ ಔಟಾದರು. 7 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್‌ 6 ವಿಕೆಟಿಗೆ 179 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜಾಸ್‌ ಬಟ್ಲರ್‌ ರನೌಟ್‌ 73
ಅಲೆಕ್ಸ್‌ ಹೇಲ್ಸ್‌ ಸ್ಟಂಪ್ಡ್ ಕಾನ್ವೆ ಬಿ ಸ್ಯಾಂಟ್ನರ್‌ 52
ಮೊಯಿನ್‌ ಅಲಿ ಸಿ ಬೌಲ್ಟ್ ಬಿ ಸೋಧಿ 5
ಎಲ್‌. ಲಿವಿಂಗ್‌ಸ್ಟೋನ್‌ ಬಿ ಫೆರ್ಗ್ಯುಸನ್‌ 20
ಹ್ಯಾರಿ ಬ್ರೂಕ್‌ ಸಿ ಅಲೆನ್‌ ಬಿ ಸೌಥಿ 7
ಬೆನ್‌ ಸ್ಟೋಕ್ಸ್‌ ಎಲ್‌ಬಿಡಬ್ಲ್ಯು ಬಿ ಫೆರ್ಗುÂಸನ್‌ 8
ಸ್ಯಾಮ್‌ ಕರನ್‌ ಔಟಾಗದೆ 6
ಡೇವಿಡ್‌ ಮಾಲನ್‌ ಔಟಾಗದೆ 3
ಇತರ 5
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 179
ವಿಕೆಟ್‌ ಪತನ: 1-81, 2-108, 3-153, 4-160, 5-162, 6-176
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 4-0-40-0
ಟಿಮ್‌ ಸೌಥಿ 4-0-43-1
ಮಿಚೆಲ್‌ ಸ್ಯಾಂಟ್ನರ್‌ 4-0-25-1
ಲೂಕಿ ಫೆರ್ಗ್ಯುಸನ್‌ 4-0-45-2
ಐಶ್‌ ಸೋಧಿ 4-0-23-1

ನ್ಯೂಜಿಲ್ಯಾಂಡ್‌
ಫಿನ್‌ ಅಲೆನ್‌ ಸಿ ಸ್ಟೋಕ್ಸ್‌ ಬಿ ಕರನ್‌ 16
ಡೆವೋನ್‌ ಕಾನ್ವೆ ಸ್ಟಂಪ್ಡ್ ಬಟ್ಲರ್‌ ಬಿ ವೋಕ್ಸ್‌ 3
ಕೇನ್‌ ವಿಲಿಯಮ್ಸ್‌ನ್‌ ಸಿ ರಶೀದ್‌ ಬಿ ಸ್ಟೋಕ್ಸ್‌ 40
ಗ್ಲೆನ್‌ ಫಿಲಿಪ್ಸ್‌ ಸಿ ಬದಲಿಗ ಬಿ ಕರನ್‌ 62
ಜೇಮ್ಸ್‌ ನೀಶಮ್‌ ಸಿ ಕರನ್‌ ಬಿ ವುಡ್‌ 6
ಡ್ಯಾರಿಲ್‌ ಮಿಚೆಲ್‌ ಸಿ ಬದಲಿಗ ಬಿ ವೋಕ್ಸ್‌ 3
ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 16
ಐಶ್‌ ಸೋಧಿ ಔಟಾಗದೆ 6
ಇತರ: 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 159
ವಿಕೆಟ್‌ ಪತನ: 1-8, 2-28, 3-119, 4-126, 5-131, 6-135
ಬೌಲಿಂಗ್‌: ಮೊಯಿನ್‌ ಅಲಿ 1-0-4-0
ಕ್ರಿಸ್‌ ವೋಕ್ಸ್‌ 4-0-33-2
ಅದಿಲ್‌ ರಶೀದ್‌ 4-0-33-0
ಸ್ಯಾಮ್‌ ಕರನ್‌ 4-0-26-2
ಮಾರ್ಕ್‌ ವುಡ್‌ 3-0-25-1
ಲಿಯಮ್‌ ಲಿವಿಂಗ್‌ಸ್ಟೋನ್‌ 3-0-26-0
ಬೆನ್‌ ಸ್ಟೋಕ್ಸ್‌ 1-0-10-0

ಪಂದ್ಯಶ್ರೇಷ್ಠ: ಜಾಸ್‌ ಬಟ್ಲರ್‌

ನಮ್ಮಲ್ಲಿ ಆತ್ಮವಿಶ್ವಾಸವಿದೆ: ಜಾಸ್‌ ಬಟ್ಲರ್‌
ಐರ್ಲೆಂಡ್‌ ವಿರುದ್ಧ ತಂಡದ ಆಘಾತಕಾರಿ ಸೋಲಿನ ಬಗ್ಗೆ ನಾವು ಗಂಭೀರವಾಗಿ ಚಿಂತಿಸುವುದಿಲ್ಲ. ಯಾಕೆಂದರೆ ನಮ್ಮ ತಂಡದಲ್ಲಿ ಹಲವು ಶ್ರೇಷ್ಠ ಆಟಗಾರರು ಇದ್ದಾರೆ ಮತ್ತು ಸದ್ದ ಸಾಗುತ್ತಿರುವ ಟಿ20 ವಿಶ್ವಕಪ್‌ನಲ್ಲಿ ತಿರುಗೇಟು ನೀಡುವಷ್ಟು ಆತ್ಮವಿಶ್ವಾಸ ನಮ್ಮಲ್ಲಿದೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌ ಹೇಳಿದ್ದಾರೆ.

ಐರ್ಲೆಂಡ್‌ ವಿರುದ್ಧ ಅ. 26ರಂದು ನಡೆದ ಪಂದ್ಯದಲ್ಲಿ ಸೋತ ಬಳಿಕ ಇಂಗ್ಲೆಂಡ್‌ ತಂಡವು ಬಹಳಷ್ಟು ಒತ್ತಡಕ್ಕೆ ಬಿತ್ತು. ಆದರೆ ಮಂಗಳವಾರ ನ್ಯೂಜಿಲ್ಯಾಂಡ್‌ ತಂಡವನ್ನು 20 ರನ್ನುಗಳಿಂದ ಸೋಲಿಸುವ ಮೂಲಕ ತಂಡವು ಸೆಮಿಫೈನಲಿಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ಹಿಂದಿನ ನಿರ್ವಹಣೆಯ ಬಗ್ಗೆ ನಾವು ಅಲೋಚನೆ ಮಾಡುತ್ತಿಲ್ಲ. ನಮ್ಮ ಆಟವಾಡುವ ಬಳಗದಲ್ಲಿ ಉತ್ತಮ ಆಟಗಾರರು ಇದ್ದಾರೆ. ನಮ್ಮ ಶ್ರೇಷ್ಠ ನಿರ್ವಹಣೆಯನ್ನು ನ್ಯೂಜಿಲ್ಯಾಂಡ್‌ ವಿರುದ್ಧ ತೋರಿಸಿದ್ದೇವೆ. ಈ ನಿರ್ವಹಣೆ ಮುಂದಿನ ಪಂದ್ಯಗಳಲ್ಲೂ ಮುಂದುವರಿಯಲಿದೆ ಎಂದವರು ವಿವರಿಸಿದರು.

ಮೊದಲಿಗೆ ಬ್ಯಾಟಿಂಗ್‌ ಮಾಡುವ ನಿರ್ಧಾರ ಮಾಡಿರುವುದು ಉತ್ತಮ ಆಯ್ಕೆಯಾಗಿದೆ. 160ರಿಂದ 165 ರನ್‌ ಪೇರಿಸುವುದು ನಮ್ಮ ಗುರಿಯಾಗಿತ್ತು. ಕೊನೆಯಲ್ಲಿ ನಾವು ಅದಕ್ಕಿಂತಲೂ ಹೆಚ್ಚಿನ ರನ್‌ ಪೇರಿಸಿದ್ದೆವು. ನಮ್ಮ ಬೌಲಿಂಗ್‌ ಕೂಡ ಉತ್ತಮ ಮಟ್ಟದಲ್ಲಿತ್ತು. ಇನ್ನು ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲುವುದು ಅತೀ ಮುಖ್ಯ ಎಂದು ಬಟ್ಲರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next