ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನುಸುಳುವಿಕೆ ಯತ್ನವನ್ನು ವಿಫಲಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ದೇಶದೊಳಕ್ಕೆ ನುಸುಳಲು ಯತ್ನಿಸಿದ್ದ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿದೆ.
ಗಡಿ ನಿಯಂತ್ರಣ ರೇಖೆಯಾಚೆ ಇರುವ ಉಗ್ರರ ಲಾಂಚ್ ಪ್ಯಾಡ್‌ನಿಂದ ಭಯೋತ್ಪಾದಕರು ಮಾಚಿಲ್ ವಲಯದ ಮೂಲಕ ಒಳನುಸುಳುವ ಸಂಚು ರೂಪಿಸಿದ್ದಾರೆ ಎಂಬ ನಿಖರ ಮಾಹಿತಿ ಕುಪ್ವಾರಾ ಎಸ್‌ಎಸ್‌ಪಿಯಿಂದ ಬಂದಿತ್ತು. ಕೂಡಲೇ ಆ ಪ್ರದೇಶದಲ್ಲಿ ಸೇನೆಯನ್ನು ಹೈಅಲರ್ಟ್‌ನಲ್ಲಿ ಇಡಲಾಗಿತ್ತು. ಒಳನುಸುಳುವಿಕೆ ಸಾಧ್ಯತೆಯಿರುವ ಎಲ್ಲ ಕಡೆಯಲ್ಲೂ ಸೇನೆ ಮತ್ತು ಜಮ್ಮು-ಕಾಶ್ಮೀರದ ವಿಶೇಷ ಕಾರ್ಯಾಚರಣಾ ಪಡೆಯನ್ನು ನಿಯೋಜಿಸಲಾಗಿತ್ತು.
ಕಾರ್ಯಾಚರಣೆ:
ಎಲ್‌ಒಸಿ ಬಳಿಕ ಭಾರೀ ಮಳೆಯಾಗುತ್ತಿದ್ದು, ದೃಷ್ಟಿ ಗೋಚರತೆಯೂ ಕ್ಷೀಣಿಸಿದೆ. ಸತತ 2 ರಾತ್ರಿಗಳಿಂದಲೂ ತಾಪಮಾನ ಇಳಿಕೆಯಾಗಿದೆ. ಇಂತಹ ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೇ ಯೋಧರು ಕಾರ್ಯಾಚರಣೆಗಿಳಿದಿದ್ದಾರೆ. ಬುಧವಾರ ಬೆಳಗಿನ ಜಾವ ಭಯೋತ್ಪಾದಕರು ಕಣ್ಣಿಗೆ ಬೀಳುತ್ತಿದ್ದಂತೆ, ಎರಡೂ ಕಡೆ ಗುಂಡಿನ ಚಕಮಕಿ ಆರಂಭವಾಗಿದೆ. ಕೊನೆಗೆ ಇಬ್ಬರು ನುಸುಳುಕೋರರನ್ನೂ ಸೇನೆ ಹೊಡೆದುರುಳಿಸಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಎರಡು ಎಕೆ ಸರಣಿಯ ರೈಫಲ್‌ಗಳು, ಮ್ಯಾಗಜಿನ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಗೊತ್ತಾಗಿಲ್ಲ ಎಂದೂ ವಕ್ತಾರರು ಹೇಳಿದ್ದಾರೆ.