ಬೆಂಗಳೂರು: “ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮ ದಲೂ ತೀರದ ಸಂಬಂಧ’…ಎಂಬ ಹಾಡಿನಂತೆ ವಿವಾಹದ ಪ್ರತಿ ಸುಮಧುರ ಕ್ಷಣಗಳನ್ನು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತೆ ಮಾಡುವುದು ಫೋಟೋ, ವಿಡಿಯೋಗಳು. ವಿವಾಹದ ಆಲ್ಬಮ್‌ನ ಫೋಟೋಗಳು, ವಿಡಿಯೋ ನೋಡುವಾಗ ಮದುವೆ ಸಂಭ್ರಮದ ಪ್ರತಿ ಕ್ಷಣಗಳು ನಮ್ಮ ಕಣ್ಣು ಮುಂದೆ ಬರುತ್ತವೆ.
ವಿವಾಹ ಒಂದೆರಡು ದಿನ ನಡೆದರೂ ಆ ಅಮೂಲ್ಯ ಕ್ಷಣಗಳನ್ನು ಸದಾ ಕಣ್ತುಂಬಿ ಕೊಳ್ಳಲು ಫೋಟೋ, ವಿಡಿಯೋಗ್ರಪಿ ಅತ್ಯವಶ್ಯಕವಾಗಿದೆ. ವೆಡ್ಡಿಂಗ್ ಫೋಟೋಗ್ರಫಿ, ವಿಡಿಯೋಗ್ರಫಿ ದೊಡ್ಡ ಉದ್ಯಮವಾಗಿ ಬೆಳೆ ದಿದೆ.
ನಗರದಲ್ಲಿ 1 ಮದುವೆಗೆ ಫೋಟೋ, ವಿಡಿಯೋಗ್ರಫಿಗೆ ಕನಿಷ್ಠ 3 ಲಕ್ಷ ರೂ.ನಿಂದ 25 ಲಕ್ಷ ರೂ. ವರೆಗೆ ಶುಲ್ಕ ಇರಲಿದೆ. ಇದು ಒಂದೂವರೆ ದಿನ ನಡೆ ಯುವ ಮದುವೆಗಾಗಿ ಈ ಶುಲ್ಕ ನಿಗದಿ ಪಡಿಸಲಾಗಿದೆ. 3-5 ದಿನಗಳ ವರೆಗೆ ನಡೆಯುವ ಅದ್ಧೂರಿ ವಿವಾಹಗಳಿಗೆ ದೊಡ್ಡ ಮೊತ್ತದ ಪ್ಯಾಕೇಜ್ ಇರಲಿದೆ. 1 ಕೋಟಿ ರೂ. ದಾಟುವ ವೆಡ್ಡಿಂಗ್ ವಿಡಿಯೋಗ್ರಫಿಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ವಿವಾಹ ವಹಿವಾಟು ವಾರ್ಷಿಕವಾಗಿ 1 ಲಕ್ಷ ಕೋಟಿ ರೂ. ನಡೆಯ ಲಿದೆ. ಈ ಪೈಕಿ ಫೋಟೋ, ವಿಡಿಯೋಗಾಗಿ ಶೇ.4-5 ಖರ್ಚು ಮಾಡ ಲಾಗುತ್ತದೆ, ಅಂದರೆ 5 ಸಾವಿರ ಕೋಟಿ ರೂ. ವಹಿ ವಾಟು ಆಗಲಿದೆ ಎನ್ನುತ್ತಾರೆ ವೆಡ್ಡಿಂಗ್ ಪ್ಲ್ಯಾನರ್.
ಬದಲಾದ ಟ್ರೆಂಡ್: ಈ ಹಿಂದೆ ಮದುವೆಗೆ ಫೋಟೋ, ವಿಡಿಯೋ ಮಾತ್ರ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಉದ್ಯಮ ಭಾರೀ ಬದಲಾವಣೆಯಾಗಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಫೋಟೋ, ವಿಡಿಯೋಗ್ರಫಿ ಕೂಡ ಸಂಪೂರ್ಣ ಬದಲಾಗಿದೆ. ಮದುವೆ ಮಂಟಪಗಳಲ್ಲಿ ನಮ್ಮ ತಲೆಯ ಮೇಲೆ ಡ್ರೋನ್ ಕ್ಯಾಮೆರಾಗಳು ಹಾರಾಡುತ್ತಿರುತ್ತವೆ. ಕಲ್ಯಾಣ ಮಂಟಪದ ಒಳಗಡೆ, ಹೊರ ಭಾಗದಲ್ಲಿ ದೊಡ್ಡ ದೊಡ್ಡ ಎಲ್‌ಇಡಿ ಪರದೆಗಳಲ್ಲಿ ವಿವಾಹದ ಪ್ರತಿ ಕ್ಷಣಗಳನ್ನು ಬಿತ್ತರಿಸಲಾಗುತ್ತದೆ. ಆಲ್ಬಮ್ ಜೊತೆಗೆ ಡಿಜಿಟಲ್ ಫ್ರೆàಮ್ ಕೂಡ ಬಂದಿದೆ. ಡಿವಿಆರ್ ಬದಲಿಗೆ ಪೆನ್ ಡ್ರೈವ್ ಬಂದಿದೆ. ಈ ಹಿಂದೆ ವಿವಾಹ ದಿನವೇ ವಧು ವರರನ್ನು ನೋಡಬೇಕಿತ್ತು. ಈಗ ಪ್ರೀ- ವೆಡ್ಡಿಂಗ್ ಶೂಟಿಂಗ್ ಹೊಸ ಟ್ರೆಂಡ್ ಸೃಷ್ಟಿಸಿದ್ದು, ಈ ಫೋಟೋ, ವಿಡಿಯೋ ವನ್ನು ವಾಟ್ಸಾಪ್ ಮೂಲಕ ಕಳುಹಿಸಿ, ಮದುವೆಗೆ ಬರಲು ಆಹ್ವಾನಿಸಲಾಗುತ್ತದೆ. ಮದುವೆಗೆ ಮುನ್ನವೇ ನವ ಜೋಡಿಗಳ ದರ್ಶನ ಆಗುತ್ತದೆ.
ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ: ಮದುವೆಗೆ ಮುನ್ನ ನಡೆಯುವ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರಕ್ಕೂ ವಿಶೇಷವಾಗಿ ವಿಡಿಯೋ ಮಾಡಿಸ ಲಾಗುತ್ತಿದೆ. ಮನೆಯಲ್ಲಿ ಈ ಕಾರ್ಯಕ್ರಮ ನಡೆದರೆ ವಿಡಿಯೋ ಗ್ರಫಿಗೆ 15-20 ಸಾವಿರ ರೂ. ನಿಗದಿಪಡಿಸಲಾಗಿದೆ. ಇತ್ತೀಚೆಗೆ ಸಿರಿ ವಂತರು, ಸೆಲೆಬ್ರಿಟಿಗಳು, ರಾಜಕೀಯ ನಾಯಕರು ವಿಜೃಂಭಣೆಯಿಂದ ನಡೆಸುತ್ತಾರೆ. ಅರಿಶಿಣನ ಶಾಸ್ತ್ರವನ್ನು ವಧು ವರ ಇಬ್ಬರೂ ಜೊತೆಯಾಗಿ ತಮ್ಮ ಸಂಬಂಧಿಕರು, ಸ್ನೇಹಿತ ರೊಂದಿಗೆ ರೆಸಾರ್ಟ್, ಸ್ಟಾರ್ ಹೋಟೆಲ್ ಗಳಲ್ಲಿ ನಡೆಸುತ್ತಾರೆ. ಇದನ್ನು ವಿಡಿಯೋ ಮಾಡಲು 40-50 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಮೆಹಂದಿ ಶಾಸ್ತ್ರ ಕೂಡ ಪ್ರತಿಷ್ಠೆಯಾಗಿದ್ದು, ಕೈಗಳಿಗೆ ಮೆಹಂದಿ, ಉಗುರುಗಳನ್ನು ನೇಲ್ ಆರ್ಟಿಸ್ಟ್ ಮೂಲಕ ಸಿಂಗರಿಸಿ ಕೊಂಡಿರುತ್ತಾರೆ. ಈ ಮೆಹಂದಿ ಶಾಸ್ತ್ರಕ್ಕೂ ವಿಡಿಯೋಗ್ರಫಿಗೆ ಬೇಡಿಕೆ ಇದೆ.
ದೇಶದಲ್ಲಿ ವೆಡ್ಡಿಂಗ್ ಪೋಟೋಗ್ರಫಿ, ವಿಡಿಯೋಗ್ರಫಿಯಿಂದ ಸುಮಾರು 4-5 ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ 5-6 ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತದೆ. ಈ ಉದ್ಯಮ ತಂತ್ರಜ್ಞಾನ ಬೆಳೆದಂತೆ ಡ್ರೋನ್ ಸೇರಿದಂತೆ ಹೊಸ ಹೊಸ ಉಪಕರಣಗಳನ್ನು ಬಳಸಬೇಕಿದೆ ಎಂದು ವಿಡಿಯೋಗ್ರಾಫರ್ ನಾಗದಿಲೀಪ್ ತಿಳಿಸುತ್ತಾರೆ.
ಪ್ರವಾಸೋದ್ಯಮಕ್ಕೆ ಪ್ರೀ-ವೆಡಿಂಗ್ ಶೂಟ್ ಉತ್ತೇಜನ!
ಪ್ರೀ-ವೆಡ್ಡಿಂಗ್ ಶೂಟ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಒಂದು ದಿನಕ್ಕೆ ಫೋಟೋ, ವಿಡಿಯೋಗೆ 40 ಸಾವಿರ ರೂ., 2 ದಿನಕ್ಕೆ 80 ಸಾವಿರ ರೂ. ಶುಲ್ಕ ವಿಧಿಸಲಾಗುತ್ತದೆ. ರಮಣೀಯ ನೈಸರ್ಗಿಕ ಪರಿಸರ, ಬೀಚ್, ದೇಗುಲ, ನದಿ, ಗುಡ್ಡಗಾಡುಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಲಾಗುತ್ತದೆ. ಟ್ರಾವೆಲ್, ಲೊಕೇಷನ್, ಊಟ, ವಸತಿ ವ್ಯವಸ್ಥೆಯನ್ನು ಫೋಟೋ ಶೂಟ್ ಮಾಡುವವರೇ ಭರಿಸಬೇಕಿದೆ. ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಶೂಟ್‌ನಿಂದ ಕೋಟ್ಯಂತರ ರೂ. ವಹಿವಾಟು ನಡೆಯತ್ತಿದೆ. ತೆರೆಮರೆಯಲ್ಲಿದ್ದ ಅನೇಕ ಪ್ರೇಕ್ಷಣೀಯ ಸ್ಥಳಗಳು ಪ್ರೀ-ವೆಡ್ಡಿಂಗ್ ಶೂಟ್‌ನಿಂದ ಜನಪ್ರಿಯತೆ ಪಡೆದಿವೆ. ಆರೇಳು ವರ್ಷಗಳ ಹಿಂದೆ ಹೊನ್ನಾವರ ಶರಾವತಿ ಹಿನ್ನೀರು ಪ್ರದೇಶ ಅಷ್ಟೇನು ಪರಿಚಯ ಇರಲಿಲ್ಲ. ಪ್ರೀ-ವೆಡ್ಡಿಂಗ್ ಶೂಟ್‌ನಿಂದ ಈ ಪ್ರದೇಶ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅತಿ ಹೆಚ್ಚು ಪ್ರೀ-ವೆಡ್ಡಿಂಗ್ ಶೂಟ್ ನಡೆಯುವ ತಾಣಗಳಲ್ಲಿ ಹೊನ್ನಾವರ ಕೂಡು ಒಂದಾಗಿದೆ. ಇದೇ ರೀತಿ ಹಲವು ಪ್ರದೇಶಗಳು ಬೆಳಕಿಗೆ ಬಂದಿವೆ. ಪ್ರವಾಸೋದ್ಯಮಕ್ಕೆ ಪ್ರೀ-ವೆಡ್ಡಿಂಗ್ ಶೂಟ್ ಸಾಕಷ್ಟು ಉತ್ತೇಜನ ನೀಡುತ್ತಿದೆ ಎನ್ನುತ್ತಾರೆ ಬಸವನಗುಡಿಯ ದಿಲೀಪ್ ವಿಡಿಯೋ ಆ್ಯಂಡ್ ಸ್ಟುಡಿಯದ ವಿಡಿಯೋಗ್ರಾಪರ್ ನಾಗ ದಿಲೀಪ್.
ನಮ್ಮಲ್ಲಿ 10 ಜನರ ಒಂದು ತಂಡ ಇದೆ. ಬೆಂಗಳೂರಿನಲ್ಲಿ ವೆಡ್ಡಿಂಗ್ ಫೋಟೋ, ವಿಡಿಯೋಗ್ರಪಿ ಕನಿಷ್ಠ 3 ಲಕ್ಷ ರೂ. ನಿಂದ ಶುರುವಾಗುತ್ತದೆ. ಅದ್ಧೂರಿಯಾಗಿ ನಡೆಯುವ ಸೆಲೆಬ್ರಿಟಿಗಳ 3-5 ದಿನಗಳ ವಿವಾಹಗಳಿಗೆ 25 ಲಕ್ಷ ರೂ.ನಿಂದ 50 ಲಕ್ಷ ರೂ. ಶುಲ್ಕ ವಿಧಿಸಲಾಗುತ್ತದೆ. ಪ್ರೀ-ವೆಡ್ಡಿಂಗ್ ಶೂಟ್ ಗೆ ಪ್ರತ್ಯೇಕ ಪ್ಯಾಕೇಜ್ ಇದೆ.
●ನಾಗದಿಲೀಪ್, ದಿಲೀಪ್ ವಿಡಿಯೋ ಆ್ಯಂಡ್ ಸ್ಟುಡಿಯೋ ಸಂಸ್ಥೆ, ಬಸವನಗುಡಿ
-ಎಂ.ಆರ್. ನಿರಂಜನ್