Advertisement

ಅಭ್ಯರ್ಥಿಗಳ ಮುಂದೆ ಉದ್ಯೋಗ ಪ್ರಣಾಳಿಕೆ

12:23 PM Mar 31, 2019 | Lakshmi GovindaRaju |

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಭರವಸೆ ನೀಡುವುದು, ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುವುದು ಸಹಜ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸಾವಿರಕ್ಕೂ ಹೆಚ್ಚು ಯುವಕರು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಪ್ರಣಾಳಿಕೆಯನ್ನು ಅಭ್ಯರ್ಥಿಗಳ ಮುಂದಿಟ್ಟಿದ್ದಾರೆ!

Advertisement

ಉದ್ಯೋಗಕ್ಕಾಗಿ ಯುವಜನರು ಮತ್ತು ಗುತ್ತಿಗೆ ನೌಕರರ ಒಕ್ಕೂಟಗಳ ನೇತೃತ್ವದಲ್ಲಿ “ಯುವ ಅಜೆಂಡಾ-2019′ ಎನ್ನುವ ಹೆಸರಿನೊಂದಿಗೆ ಪ್ರಣಾಳಿಕೆ ಸಿದ್ಧಪಡಿಸಿದೆ. ರಾಜ್ಯದ 21 ಜಿಲ್ಲೆಗಳಲ್ಲಿ “ಉದ್ಯೋಗಕ್ಕಾಗಿ ಯುವಜನರು’ ಸಮಿತಿಗಳನ್ನು ರಚಿಸಿಕೊಂಡಿದ್ದು, ಸಾವಿರಾರು ಯುವಕರು ಇದರಲ್ಲಿ ಸಕ್ರಿಯರಾಗಿದ್ದಾರೆ.

“ಯುವಕರಿಗೆ ಉದ್ಯೋಗ ಸೃಷ್ಟಿಸುವ ಮತ್ತು ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ಭರವಸೆ ನೀಡುವ ಅಭ್ಯರ್ಥಿಗಳಿಗೆ ನಾವು ಮತ ನೀಡಲಿದ್ದೇವೆ. ಅಷ್ಟೇ ಅಲ್ಲ, ಆಯ್ಕೆಯಾದ ಅಭ್ಯರ್ಥಿಗಳು ಭರವಸೆ ಈಡೇರಿಸದಿದ್ದರೂ ಮುಂದೆ ಪ್ರಶ್ನಿಸುತ್ತೇವೆ’ ಎನ್ನುತ್ತಾರೆ ಬೆಂಗಳೂರು ಸಮಿತಿಯ ಸಂಚಾಲಕ ಮುತ್ತುರಾಜ್‌.

“ಉದ್ಯೋಗಕ್ಕೆ ಆದ್ಯತೆ ನೀಡುವ ಪಕ್ಷಗಳಿಗೆ ನಮ್ಮ ಮತ’ ಎನ್ನುವ ಘೋಷಾವಾಕ್ಯದೊಂದಿಗೆ ಯುವ ಸಮೂಹ ಸಕ್ರಿಯವಾಗಿದೆ. ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕುವ ಮತ್ತು ಯುವಜನರು ಉದ್ಯೋಗ ಮಾಡಲು ಪೂರಕ ವಾತಾವರಣವನ್ನು ಸೃಷ್ಟಿಸುವ ಸಮರ್ಥ ನಾಯಕರಿಗೆ ಮತ ನೀಡಲು ಮುಂದಾಗಿದೆ.

ಯುವಕರನ್ನು ಕೇವಲ ಮತಬ್ಯಾಂಕ್‌ನ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಅವರ ಭವಿಷ್ಯದ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎನ್ನುವುದು ಈ ಆಂದೋಲದಲ್ಲಿ ತೊಡಗಿಸಿಕೊಂಡಿರುವ ಯುವಕರ ಅಭಿಮತ. ಯುವ ಸಮಿತಿಯ ಸದಸ್ಯರು ಮನೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

Advertisement

ಕೇವಲ ಉದ್ಯೋಗ ಸೃಷ್ಟಿಯಲ್ಲ, ಉದ್ಯೋಗದಲ್ಲಿ ಭದ್ರತೆ ಮತ್ತು ಆದಾಯ ಖಾತರಿಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಿಂದ ಈ ಸಮಿತಿ ಸಕ್ರಿಯವಾಗಿದೆ. “ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 7.3ರಷ್ಟಿದ್ದು, ರಾಜ್ಯದಲ್ಲಿ ಶೇ 1.5 ರಷ್ಟು ನಿರುದ್ಯೋಗಿಗಳಿದ್ದಾರೆ.

ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ರಾಜಕೀಯ ಪಕ್ಷದ ನಾಯಕರು ಈ ಸಮಸ್ಯೆಗಳನ್ನು ಪರಿಹರಿಸುವುದರ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ನಾವೇ ಅವರ ಮುಂದೆ ಪ್ರಣಾಳಿಕೆಯನ್ನು ಇಟ್ಟಿದ್ದೇವೆ.

ಆಯ್ದ ಜಿಲ್ಲೆಗಳಲ್ಲಿ ರಾಜಕೀಯ ಅಭ್ಯರ್ಥಿಗಳ ಮುಖಾಮುಖೀ ಸಂವಾದವನ್ನು ನಡೆಸಲು ಉದ್ದೇಶಿಸಲಾಗಿದೆ. ಯಾರು “ಉದ್ಯೋಗಕ್ಕಾಗಿ ಯುವಜನರು’ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡುವವರಿಗೆ ಮತ ಚಲಾಯಿಸಲಿದ್ದೇವೆ’ ಎನ್ನುತ್ತಾರೆ ಸಮಿತಿಯ ಸದಸ್ಯ ಸರೋವರ್‌.

ಯುವಜನರ ಪ್ರಮುಖ ಹಕ್ಕೋತ್ತಾಯಗಳು: ನಿರಂತರ ಉದ್ಯೋಗ ಸೃಷ್ಟಿ ಯೋಜನೆ, ಸಮೀಕ್ಷೆ ಮತ್ತು ಉಸ್ತುವಾರಿ ನೋಡಿಕೊಳ್ಳಲು “ಉದ್ಯೋಗ ಆಯೋಗ’ವನ್ನು ರಚನೆ ಮಾಡಬೇಕು. ಬಂಡವಾಳ ಮತ್ತು ಶ್ರಮ ಕೇಂದ್ರಿತ ಉದ್ಯೋಗ ಸೃಷ್ಟಿಸುವ ವಲಯಗಳಿಗೆ ಪ್ರೋತ್ಸಾಹ.

ಗುತ್ತಿಗೆ ಕಾರ್ಮಿಕರು ಮತ್ತು ನೌಕರರಿಗೆ ಉದ್ಯೋಗ ಭದ್ರತೆ ಮತ್ತು ಸಮಾನ ವೇತನ, ತಾರತಮ್ಯವಿಲ್ಲದ ಉದ್ಯೋಗ ನೀತಿ ಜಾರಿಗೊಳಿಸಬೇಕು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಮುಂದಿಟ್ಟಿದೆ.

ಹೋರಾಟಕ್ಕೆ ತಂತ್ರಜ್ಞಾನದ ಟಚ್‌: ಉದ್ಯೋಗಕ್ಕಾಗಿ ಯುವಜನರು ಫೇಸ್‌ಬುಕ್‌ ಮತ್ತು ವಾಟ್ಸ್‌ಅಪ್‌ಗ್ಳಲ್ಲಿ ಹೆಚ್ಚು ಸಕ್ರಿಯವಾಗಿದೆ. “ಯೂತ್‌ ಅಜೆಂಡಾ-2019′ ಫೇಸ್‌ಬುಕ್‌ (ಉದ್ಯೋಗಕ್ಕೇ ವೋಟು) ಖಾತೆಯ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಂದ 23 ಸಾವಿರ ಜನ ಯುವಕರು ಇದರಲ್ಲಿ ಸಕ್ರಿಯರಾಗಿದ್ದಾರೆ. ಯುವಜನಾಂದೋಲನ ಬಿಡುಗಡೆ ಮಾಡಿರುವ “ಮಯ್‌ ಜಾಬ್‌’ ಆ್ಯಪ್‌ 30 ಸಾವಿರಕ್ಕೂ ಹೆಚ್ಚು ಜನ ಡೋನ್‌ಲೊಡ್‌ ಮಾಡಿಕೊಂಡಿದ್ದಾರೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next