Advertisement

Bantwal “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ’: ರಾಜ್ಯದೆಲ್ಲೆಡೆ ಮನೆ ಮನೆ ಭೇಟಿ ಅಭಿಯಾನ

12:29 AM Oct 07, 2023 | Team Udayavani |

ಬಂಟ್ವಾಳ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಪರಿಣಾಮಕಾರಿ ಅನುಷ್ಠಾನದ ದೃಷ್ಟಿಯಿಂದ ಕಾಲಮಿತಿ ಯೊಳಗೆ ಕಾರ್ಮಿಕ ಆಯವ್ಯಯ ತಯಾರಿಗಾಗಿ ಸರಕಾರವು ಪ್ರತೀ ವರ್ಷ ಮನೆ ಭೇಟಿ ಕಾರ್ಯ ನಡೆಸುತ್ತಿದ್ದು, ಈ ಬಾರಿ ಅಕ್ಟೋಬರ್‌ ಪೂರ್ತಿ “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ’ ಎಂಬ ಅಭಿಯಾನ ನಡೆಸಲಿದೆ.

Advertisement

ಮುಂದಿನ ಸಾಲಿನ ಆಯವ್ಯಯಕ್ಕಾಗಿ ವೇಳಾಪಟ್ಟಿಯನ್ನು ನಿಗದಿ ಮಾಡಿ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾ ಲಯದಿಂದ ಬಂದ ಸೂಚನೆಯಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ರಾಜ್ಯದ ಪ್ರತೀ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳಿಗೆ ಈಗಾಗಲೇ ಆದೇಶ ನೀಡಿದೆ.

ಪ್ರತೀ ಮನೆಗಳ ಭೇಟಿಗೂ ಆದೇಶ
ಅ. 2ರಿಂದಲೇ ಮನೆ ಮನೆ ಭೇಟಿಯ ಅಭಿಯಾನ ಆರಂಭಗೊಂಡಿದ್ದು, ಅ. 31ರೊಳಗೆ ಪೂರ್ಣಗೊಳ್ಳಬೇಕಿದೆ. ಸಂಬಂಧಪಟ್ಟ ಗ್ರಾ.ಪಂ. ತಂಡ ಮನೆಗಳಿಗೆ ಭೇಟಿ ನೀಡಿ ನರೇಗಾದಲ್ಲಿ ಸಿಗುವ ಕೂಲಿಯ ಮೊತ್ತ, ಕೆಲಸ ಪ್ರಮಾಣ, ಅವಧಿ, ವೈಯಕ್ತಿಕ ಸೌಲಭ್ಯಗಳು, ಅರ್ಹತೆಗಳು, ಹಿರಿಯ ನಾಗರಿಕರು, ಅಂಗವಿಕಲರಿಗೆ ಕಾಮಗಾರಿ ಪ್ರಮಾಣದಲ್ಲಿ ಸಿಗುವ ಶೇ. 50 ರಿಯಾಯಿತಿ, ಅಕುಶಲ ಮಹಿಳೆಯರು, ಲಿಂಗತ್ವ ಅಲ್ಪ ಸಂಖ್ಯಾಕರಿಗೆ ಶೇ. 20 ಅವಕಾಶ ಮೊದಲಾದ ಮಾಹಿತಿಗಳನ್ನು ತಿಳಿಸಲಿದ್ದಾರೆ.

ಜತೆಗೆ ಯೋಜನೆಯ ಮಾಹಿತಿ, ವೀಡಿಯೋಕ್ಕಾಗಿ ಕ್ಯುಆರ್‌ ಕೋಡ್‌ಯನ್ನೊಳಗೊಂಡ ಕರಪತ್ರ ಹಂಚಿಕೆ ಮಾಡಬೇಕಿದೆ. ಅಭಿಯಾನದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್‌ ಸಿಬಂದಿ, ಅನುಷ್ಠಾನ ಇಲಾಖೆಯ ಅಧಿಕಾರಿ, ಸಿಬಂದಿ ಎಲ್ಲರೂ ಪಾಲ್ಗೊಳ್ಳಬೇಕಿದೆ. ಅಭಿಯಾನದ ಮೂಲಕ ಜಲ ಸಂಜೀವಿನಿ ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸುವ ನಿಟ್ಟಿನಲ್ಲೂ ಮಾಹಿತಿ ಸಂಗ್ರಹಗೊಳ್ಳಬೇಕಿದೆ ಎಂದು ವಿವರಿಸಲಾಗಿದೆ.

ಮನೆ ಭೇಟಿಯ ಜತೆಗೆ ಜಾಗೃತಿ ವಾಹನದ ಮೂಲಕ ಪ್ರಚಾರಕ್ಕೂ ಸೂಚನೆ ನೀಡಲಾಗಿದ್ದು, ಪ್ರತೀ ಗ್ರಾಮದಲ್ಲಿ “ಕಾಮಗಾರಿ ಬೇಡಿಕೆ ಪೆಟ್ಟಿಗೆ’ ಯನ್ನಿರಿಸಿ ಅರ್ಜಿ ಸ್ವೀಕರಿಸುವಂತೆ ಸೂಚಿಸಿದ್ದಾರೆ.

Advertisement

ಮುಂದಿನ ಪ್ರಕ್ರಿಯೆ
ಜನರಿಂದ ಸಂಗ್ರಹಿಸಿ ಅರ್ಜಿಗಳನ್ನು ಪರಿಶೀಲಿಸಿ ನ. 15ರೊಳಗೆ ವಾರ್ಡ್‌ ಸಭೆಗಳಲ್ಲಿ ಕಾಮಗಾರಿ ಪಟ್ಟಿ ಅನುಮೋದಿಸಿ ಗ್ರಾಮಸಭೆಗೆ ಸಲ್ಲಿಸಬೇಕು. ನ. 30ರೊಳಗೆ ಗ್ರಾಮಸಭೆ ಪೂರ್ಣಗೊಳಿಸಿ ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಳ್ಳಬೇಕು. ಗ್ರಾಮಸಭೆಯ ಕ್ರಿಯಾಯೋಜನೆಯನ್ನು ಡಿ. 5ರೊಳಗೆ ತಾ.ಪಂ. ಸಲ್ಲಿಸಿ ಡಿ. 20ರೊಳಗೆ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಗೆ, ಅಲ್ಲಿಂದ ರಾಜ್ಯ, ಕೇಂದ್ರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆದು 2024ರ ಫೆ. 20ರ ಬಳಿಕ ಆಯವ್ಯಯ ಪೂರ್ಣಗೊಳ್ಳಲಿದೆ ಎಂದು ಆದೇಶದಲ್ಲಿ ವಿರಿಸಲಾಗಿದೆ.

ಜನರಲ್ಲಿ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಅಭಿಯಾನ ನಡೆಯುತ್ತಿದ್ದು, ಗ್ರಾ.ಪಂ.ಗಳ ಕಳೆದ ವರ್ಷದ ಪ್ರಗತಿ ಏನು, ಮುಂದಿನ ವರ್ಷದ ಬೇಡಿಕೆಗಳೇನು ಎಂಬುದನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ.
– ಡಾ| ಆನಂದ್‌ ಕೆ., ಸಿಇಒ, ದ.ಕ. ಜಿ.ಪಂ.

 

Advertisement

Udayavani is now on Telegram. Click here to join our channel and stay updated with the latest news.

Next