ಮಂಗಳೂರು: ಎಲ್ಲ ಆವಿಷ್ಕಾರಗಳಿಗೂ ಮೂಲವಿಜ್ಞಾನವೇ ಬುನಾದಿಯಾಗಿದ್ದು, ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾದ ಆವಶ್ಯಕತೆ ಇದೆ ಎಂದು ಭೌತವಿಜ್ಞಾನಿ ಸರ್ಜ್ ಹೊರಾಕೆ ಹೇಳಿದರು. ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿ ಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಶನಿವಾರ ಆರಂಭಗೊಂಡ ವಿಜ್ಞಾನ ವಿಷಯದಲ್ಲಿ “ಸಹ್ಯಾದ್ರಿ ಸಮ್ಮೇಳನ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಸ್ತುತ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮೂಲವಿಜ್ಞಾನದತ್ತ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಅನೇಕ ಪ್ರತಿಭೆಗಳು ವಿಜ್ಞಾನದಿಂದ ವಿಮುಖವಾಗುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ, ರಾಜ ಕಾರಣಿಗಳು ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಹಿಂದೆ ವಿಜ್ಞಾನಿಗಳು ಮಾಡಿದ ಸಂಶೋಧನೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದಕ್ಕಿಂತ ಹೊಸತಾಗಿ ಏನಾದರೂ ಸಾಧಿಸುವ ಹಂಬಲ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ವಿಜ್ಞಾನವನ್ನು ಕೇವಲ ವೃತ್ತಿಯಾಗಿ ನೋಡಬಾರದು. ಅದೊಂದು ಆಸಕ್ತಿಯ ವಿಷಯ ಆಗಬೇಕು ಎಂದರು.
ರಸಾಯನಶಾಸ್ತ್ರ ವಿಜ್ಞಾನಿ ಅಡಾ ಈ ಎನೋಥ್ ಮಾತನಾಡಿ, ಭಾರತೀಯ ವಿಜ್ಞಾನಿಗಳಲ್ಲಿ ಅಪಾರ ಜ್ಞಾನವಿದೆ. ಅವರಲ್ಲಿ ಇರುವ ಸೌಜನ್ಯ, ಧೈರ್ಯ ಎಲ್ಲರಿಗೂ ಮಾದರಿ. ಜೀವಕೋಶಗಳ ಸಂಶೋಧನಾ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿ ಜಿ.ಎನ್. ರಾಮಚಂದ್ರನ್ ಅವರ ಕೊಡುಗೆ ಅಪಾರವಾದುದು. ನನ್ನ ಪಿಎಚ್‌ಡಿ ಅಧ್ಯಯನಕ್ಕೆ ರಾಮಚಂದ್ರನ್ ಅವರ ಸಂಶೋಧನಾ ವರದಿ ಸಹಕಾರಿಯಾಯಿತು ಎಂದು ತಿಳಿಸಿದರು.
ಅಭೂತಪೂರ್ವ ಪ್ರಗತಿ: ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಭಾರತ ಕಳೆದ ಐದು ದಶಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತ ಪೂರ್ವ ಪ್ರಗತಿ ಸಾಧಿಸಿದೆ. ರಾಜ್ಯ ಸರಕಾರವೂ ವಿಶೇಷ ಯೋಜನೆಗಳನ್ನು ರೂಪಿಸಿ ವಿದ್ಯಾರ್ಥಿ ಗಳು ವಿಜ್ಞಾನದ ಕಡೆಗೆ ಹೆಚ್ಚಿನ ಒಲವು ತೋರಿಸುವಂತೆ ಉತ್ತೇಜನ ನೀಡುತ್ತಿದೆ. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ವಿಜ್ಞಾನ ಸಮ್ಮೇಳನ ಆಯೋಜಿಸುವ ಮೂಲಕ ವಿಜ್ಞಾನ, ತಂತ್ರಜ್ಞಾನ, ವ್ಯವಹಾರಡಳಿತ ವಿಷಯಗಳ ಕಡೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಿ, ಸಂಶೋಧನೆಯ ಕಡೆಗೆ ಪ್ರೇರೇಪಣೆ ಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಭಂಡಾರಿ ಸಮ್ಮೇಳನದ ಉದ್ದೇಶ ವನ್ನು ವಿವರಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್, ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ಡಾ| ಡಿ.ಎಲ್. ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಅಲಹಾಬಾದ್ ಐಐಐಟಿ ನಿವೃತ್ತ ನಿರ್ದೇಶಕ ಡಾ| ಎಂ.ಡಿ. ತಿವಾರಿ, ಉದ್ಯಮಿ ಶಶಿಕಿರಣ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ| ಉಮೇಶ್ ಎಂ. ಭೂಷಿ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಡಾ| ಸಿ.ಕೆ.ಮಂಜುನಾಥ್ ಪ್ರಸ್ತಾವನೆಗೈದರು. ಸಹ್ಯಾದ್ರಿ ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕಿ ಡಾ| ವಿಶಾಲ್ ಸಮರ್ಥ ವಂದಿಸಿದರು. ಜ.10ರ ತನಕ ನಡೆಯುವ ಕಾರ್ಯಕ್ರಮದಲ್ಲಿ ನೊಬೆಲ್ ಪುರಸ್ಕೃತರು, ವಿಜಾnನಿಗಳು, ತಾಂತ್ರಿಕ ಪರಿಣಿತರು ಹಾಗೂ ಉದ್ಯಮಿಗಳು ಜತೆ ಚರ್ಚಾಗೋಷ್ಠಿ ನಡೆಯಲಿದೆ.