ವಾಷಿಂಗ್ಟನ್: ಟ್ವಿಟರ್ ಸಿಇಓ ಎಲಾನ್ ಮಸ್ಕ್ ತಾನು ಶೀಘ್ರದಲ್ಲಿ ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಮಂಗಳವಾರ (ಡಿ.20) ರಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಟ್ವಿಟರ್ ಸಿಇಓ ಪಟ್ಟಕ್ಕೇರಿದ ಮೇಲೆ ಟ್ವಿಟರ್ ನ ನೀತಿ – ನಿಯಮಗಳು ಬದಲಾಗಿವೆ. ದಿನೇ ದಿನೇ ಟ್ವಿಟರ್ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಮಸ್ಕ್ ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಪೋಲ್ ಮಾಡಿ ಪ್ರಶ್ನೆ ಹಾಕಿ, ಈ ಪೋಲ್ ಗೆ ಬರುವ ಉತ್ತರಕ್ಕೆ ತಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಬಹುತೇಕ ಜನರು ಮಸ್ಕ್ ಟ್ವಿಟರ್ ನಿಂದ ಕೆಳಗೆ ಇಳಿಯಬೇಕೆಂದು ಹೇಳಿದ್ದರು.
ಅಂತಿಮವಾಗಿ ಪೋಲ್ ಪ್ರಶ್ನೆಗೆ 57.5 % ಜನರು ಎಲಾನ್ ಮಸ್ಕ್ ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೆಂದು ಬಯಸಿದ್ದಾರೆ. ಇನ್ನು 45.5% ನೋ ಎಂದು ಉತ್ತರಿಸಿದ್ದಾರೆ. ಈ ಪೋಲ್ ಬದ್ಧನೆಂದು ಹೇಳಿದ್ದ ಮಸ್ಕ್, ಟ್ವೀಟ್ ಮಾಡಿ ತಾನು ಶೀಘ್ರದಲ್ಲಿ ಟ್ವಿಟರ್ ಸಿಇಓ ಸ್ಥಾನದಿಂದ ಇಳಿಯುತ್ತೇನೆ ಎಂದಿದ್ದಾರೆ.
“ಯಾರಾದರೂ ಈ ಕೆಲಸದ ಜವಾಬ್ದಾರಿ ತೆಗೆದುಕೊಳ್ಳುವಷ್ಟು ಮೂರ್ಖರು ಸಿಕ್ಕರೆ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ! ಅದರ ನಂತರ, ನಾನು ಸಾಫ್ಟ್‌ವೇರ್ ಮತ್ತು ಸರ್ವರ್‌ಗಳ ತಂಡಗಳನ್ನು ನಡೆಸಿಕೊಂಡು ಹೋಗುತ್ತೇನೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಟ್ವಿಟರನ್ನು ಜೀವಂತವಾಗಿಡಬಲ್ಲ ಕೆಲಸವನ್ನು ಯಾರೂ ಬಯಸುವುದಿಲ್ಲ. ಇದಕ್ಕೆ ಉತ್ತರಾಧಿಕಾರಿ ಯಾರೂ ಇಲ್ಲ. ಇಲ್ಲಿ ಪ್ರಶ್ನೆ ಇರುವುದು ಸಿಇಒ ಹುಡುಕುವುದು ಅಲ್ಲ, ಪ್ರಶ್ನೆಯೆಂದರೆ ಟ್ವಿಟರನ್ನು ಜೀವಂತವಾಗಿಡಬಲ್ಲ ಸಿಇಒ ಹುಡುಕುವುದು ಎಂದು ಕಮೆಂಟ್ ವೊಂದಕ್ಕೆ ಅವರು ಉತ್ತರಿಸಿದ್ದಾರೆ.