ಬೆಂಗಳೂರು: ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಮಾಜಿ ಸಿಇಒ, ಪ್ರಕರಣದ ಪ್ರಮುಖ ಆರೋಪಿ ವಾಸುದೇವಮಯ್ಯ ಆತ್ಮಹತ್ಯೆಗೂ ಮೊದಲು 12 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರದ ಚಿಕ್ಕಲಸಂದ್ರದ ಪೂರ್ಣಪ್ರಜ್ಞಾ ಲೇಔಟ್ ನ ಸಂಬಂಧಿಕರ ಮನೆಯಿಂದ ಹೋಗುವಾಗ ಮಾರ್ಗ ಮಧ್ಯೆ ಕಾರಿನಲ್ಲಿ ಮದ್ಯಕ್ಕೆ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅದಕ್ಕೂ ಮೊದಲು 12 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ತಮ್ಮಿಂದ ಲಾಭ ಪಡೆದುಕೊಂಡು ವಂಚಿಸಿದ ಆರು ಮಂದಿ ಸೇರಿ, ಕೆಲವು ಗಣ್ಯ ವ್ಯಕ್ತಿಗಳ ವಿರುದಟಛಿ ಗಂಭೀರ ಆರೋಪ ಮಾಡಿದ್ದಾರೆ. (ಈ ಆರು ಮಂದಿಯ ಪೈಕಿ ಮೂವರ ಮನೆಗಳ ಮೇಲೆ ಎಸಿಬಿ ಇತ್ತೀಚೆಗೆ ದಾಳಿ ನಡೆಸಿತ್ತು). ಜತೆಗೆ ಎಸಿಬಿ ವಿಚಾರಣೆ ಬಗ್ಗೆಯೂ ಉಲ್ಲೇಖೀಸಿದ್ದಾರೆ ಎಂದು ಹೇಳಲಾಗಿದೆ.
ನಾನು ಬಲಿಪಶು ಆಗಿದ್ದೇನೆ: “ಬ್ಯಾಂಕ್ ಸಿಇಒ ಆಗಿದ್ದ ದಿನಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇನೆ. ಅನಂತರ ಈ ಆರು ಮಂದಿಯಿಂದ ನನಗೆ ತುಂಬಾ ತೊಂದರೆಯಾಗಿದೆ. ನನ್ನಿಂದ ಪ್ರಯೋಜನ ಪಡೆದು, ವಂಚನೆ ಮಾಡಿದ್ದಾರೆ. ನಾನು ಯಾವುದೇ ಆಸ್ತಿ ಸಂಪಾದನೆ ಮಾಡಿಲ್ಲ. ಎಲ್ಲವನ್ನೂ ಕಳೆದು ಕೊಂಡಿದ್ದೇನೆ. ಒತ್ತಡ ಹಾಗೂ ಪರಿಸ್ಥಿತಿಯ ಬಲಿಪಶು ಆಗಿದ್ದೇನೆ. ಬಡ್ಡಿಗೆ ಹಣ ಕೊಟ್ಟು ತಪ್ಪು ಮಾಡಿದ್ದೇನೆ. ಇಲ್ಲಿ ಲಾಭ ಪಡೆದವರು ಯಾರೋ? ಆದರೆ, ಬಲಿಪಶು ನಾನು ಆಗಿದ್ದೇನೆ ಎಂದೆಲ್ಲ ಬರೆದುಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಸಾವು: ಪೂರ್ಣಪ್ರಜ್ಞಾ ಲೇಔಟ್ ನಲ್ಲಿ ವಾಯು ವಿಹಾರ ಮುಗಿಸಿದ ವಾಸುದೇವ ಮಯ್ಯ, ಗಂಟೆಗಟ್ಟಲೆ ಕಾರಿನಲ್ಲೇ ಕುಳಿ ತಿದ್ದರು. ಅನುಮಾನಗೊಂಡ ಸ್ಥಳೀ ಯ ರು ಕಾರಿನ ಬಳಿ ಹೋದಾಗ ವಾಸುದೇವ ಮಯ್ಯ ಮಲಗಿದ್ದ ಸ್ಥಿತಿಯಲ್ಲಿ ಕಾಣಿಸಿ ಕೊಂಡಿದ್ದರು. ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಡೆತ್ ನೋಟ್ ವಶಕ್ಕೆ: ಘಟನೆ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಡೆತ್ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಂದ ವರದಿ ಬಂದ ನಂತರ ತನಿಖೆ ನಡೆಯಲಿದೆ. ಸದ್ಯ, ಅಸಹಜ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.