Advertisement
ಪಡಿತರ ಚೀಟಿ, ವೃದ್ಧಾಪ್ಯ ವೇತನ, ಉದ್ಯೋಗ ಖಾತ್ರಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ವಿಷಯ ಸೇರಿದಂತೆ ಆಶ್ರಯ ಮನೆಗಳ ಫಲಾನುಭವಿಗಳು ಸರ್ಕಾರದ ಆದೇಶ ಪಡೆದು ಮನೆಗೆ ಬುನಾದಿ ಹಾಕಿ ಅನುದಾನ ಬಿಡುಗಡೆಗಾಗಿ ಸರ್ಕಾರದ ಕಡೆ ನೋಡುವಂತಾಗಿದೆ. ಪ್ರತಿ ಚುನಾವಣೆಯಲ್ಲೂ ನೀತಿ ಸಂಹಿತೆಯ ಭೂತ ಫಲಾನುಭವಿಗಳನ್ನು ಕಾಡುತ್ತಿದೆ. ಕಳೆದ ನಾಲ್ಕು ವರ್ಷದಿಂದ ಗ್ರಾಮೀಣ ಪ್ರದೇಶದ ಜನರು ಪ್ರತಿ ವರ್ಷವೂ ಒಂದಿಲ್ಲೊಂದು ಚುನಾವಣೆ ಎದುರಿಸುವಂತಾಗಿದ್ದು, ಪ್ರತಿ ಚುನಾವಣೆಯ ನೀತಿ ಸಂಹಿತೆ ಜಾರಿಯಿಂದ ಫಲಾನುಭವಿಗಳು ನಿಗದಿತ ಸಮಯದಲ್ಲಿ ಸರ್ಕಾರದ ಅನುದಾನ ದೊರೆಯದೇ ಪರದಾಡುತ್ತಿದ್ದಾರೆ.
Related Articles
Advertisement
ಈ ನಡುವೆ, ರಾಜ್ಯದಲ್ಲಿ ಚುನಾವಣೆಗೆ ಮತದಾನ ಮುಕ್ತಾಯವಾಗಿದ್ದರಿಂದ ಈಗಾಗಲೇ ಘೋಷಣೆಯಾಗಿ ಜಾರಿಯಲ್ಲಿರುವ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಅವಕಾಶ ನೀಡುವಂತೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಶ್ರಯ ಮನೆಗಳಿಗೆ ಅನುದಾನ ಬಿಡುಗಡೆಗೆ ನೀತಿ ಸಂಹಿತೆ ಸಡಿಲಗೊಳಿಸುವಂತೆ ಮನವಿ ಮಾಡಿಕೊಂಡಿದೆ.
ಆದರೆ, ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ನಿಗಮ ಹಾಗೂ ಸರ್ಕಾರ ಅಸಹಾಯಕವಾಗಿದೆ. ಈಗ 22 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಆಗಿರುವುದರಿಂದ ಅಲ್ಲಿ ಚುನಾವಣೆ ಮುಗಿಯುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ದಿನ ಬ್ರೇಕ್ ಬಿದ್ದಂತಾಗಿದೆ.
2019-20ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಮನೆಗಳನ್ನು ಬಿಡುಗಡೆ ಮಾಡುವ ಹೊತ್ತಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ಮತ್ತೂಂದು ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಆ ಮನೆಗಳ ಬಿಡುಗಡೆ ಹೊತ್ತಿಗೆ ಚುನಾವಣೆ ಮುಗಿದು ಬೇರೆ ಸದಸ್ಯರು ಆಯ್ಕೆಯಾಗಿರುತ್ತಾರೆ. ನೀತಿ ಸಂಹಿತೆ ಕಾರಣದಿಂದಲೇ ನಮ್ಮ ಅವಧಿಯ ಯೋಜನೆಗಳಿಗೆ ತಡೆ ಬಿದ್ದಂತಾಗುತ್ತಿದೆ. -ಹೆಸರು ಹೇಳಲಿಚ್ಛಿಸದ ಗ್ರಾ.ಪಂ.ಸದಸ್ಯ ಚುನಾವಣೆಗಳಲ್ಲಿ ಅಕ್ರಮವಾಗದಂತೆ ತಡೆಯಲು ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಆದರೆ, ಕುಡಿಯುವ ನೀರಿಗೆ ಜನ ಸಾಯುತ್ತಿದ್ದರೂ ನೀತಿ ಸಂಹಿತೆ ನೆಪ ಹೇಳಲಾಗುತ್ತದೆ. ನೀತಿ ಸಂಹಿತೆಯಲ್ಲಿ ಆ ರೀತಿಯ ಯಾವುದೇ ನಿರ್ಬಂಧ ಇಲ್ಲ. ಕಾನೂನನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಅಗತ್ಯ ಕಾರ್ಯಗಳಿಗೆ ಅಡ್ಡಿಯಾಗುವ ನೀತಿ ಸಂಹಿತೆಗೆ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
-ರಮೇಶ್ ಕುಮಾರ್, ವಿಧಾನಸಭಾಧ್ಯಕ್ಷ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು ಹಾಗೂ ಫಲಾನುಭವಿಗಳು ಆಯ್ಕೆಯಾಗಿರುವ ಯೋಜನೆಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಹೊಸ ಯೋಜನೆ ಘೋಷಣೆ ಹಾಗೂ ಟೆಂಡರ್ ಕರೆಯುವುದಕ್ಕೆ ನೀತಿ ಸಂಹಿತೆ ಅನ್ವಯ ಆಗುತ್ತದೆ. ಬರ ಹಾಗೂ ಕುಡಿಯುವ ನೀರಿನ ಯೋಜನೆಗೆ ನೀತಿ ಸಂಹಿತೆ ಅನ್ವಯ ಆಗುವುದಿಲ್ಲ.
-ಪಿ.ಎನ್.ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತರು * ಶಂಕರ ಪಾಗೋಜಿ