Advertisement

ವಿಟ್ಲ : ವಿದ್ಯುತ್‌ ಕಣ್ಣಾಮುಚ್ಚಾಲೆ, ಪ್ರತಿದಿನವೂ ಕತ್ತಲೆ

03:30 AM Jul 04, 2017 | Karthik A |

ವಿಟ್ಲ: ವಿಟ್ಲ ಮೆಸ್ಕಾಂ ಉಪ ವಿಭಾಗದಲ್ಲಿ ಮಳೆಗಾಲ ಆರಂಭವಾದಂದಿನಿಂದ ವಿದ್ಯುತ್‌ ಕಣ್ಣಾಮುಚ್ಚಾಲೆಯಾಡುತ್ತಿದೆ. ಪ್ರತಿದಿನವೂ ಕತ್ತಲೆ ಆವರಿಸುತ್ತಿದೆ. ಇದು ಸಾರ್ವಜನಿಕರ ತೀರಾ ಅಸಮಾಧಾನಕ್ಕೆ ಕಾರಣವಾಗಿದೆ. ರವಿವಾರ ಹಗಲು -ರಾತ್ರಿ ವಿದ್ಯುತ್‌ ಕಡಿತವಾಗುತ್ತಿತ್ತು. ಕೆಲ ಗಂಟೆಗಳ ಅವಧಿಯಲ್ಲಿ ಹತ್ತಾರು ಬಾರಿ ವಿದ್ಯುತ್‌ ಕಡಿತವಾಗುತ್ತಿತ್ತು. ಮೆಸ್ಕಾಂಗೆ ಗ್ರಾಹಕರು ಕರೆ ನೀಡಿದಾಗ ಲೈನ್‌ ಫಾಲ್ಟ್ ಎಂಬ ಉತ್ತರ ಸಿಗುತ್ತದೆ. ವಯರ್‌ ಕಟ್‌, ಪಿನ್‌ ಕಟ್‌ ಮತ್ತು ಇದಕ್ಕೆ ಸಂಬಂಧಪಟ್ಟ ಸಾಮಗ್ರಿಗಳ ಗುಣಮಟ್ಟ ಸರಿಯಿಲ್ಲ ಎನ್ನಲಾಗುತ್ತಿದೆ.

Advertisement

ಪರಿವರ್ತಕ ಓವರ್‌ಲೋಡ್‌ ವಿಟ್ಲಮೇಗಿನಪೇಟೆಯಲ್ಲಿ 250 ಕೆವಿಎ ಸಾಮರ್ಥ್ಯದ ಪ್ರಧಾನ ವಿದ್ಯುತ್‌ ಟ್ರಾನ್‌ಫಾರ್ಮರ್‌ ಇದೆ. ಇದು ಓವರ್‌ಲೋಡ್‌ ಆಗಿದೆ. ಅಂದರೆ ಸುಮಾರು 350 ಕೆವಿಎವರೆಗೆ ಲೋಡ್‌ ಬೀಳುತ್ತಿದೆ. ಪರಿಣಾಮವಾಗಿ ಆಗಾಗ ಟ್ರಿಪ್‌ ಆಗುತ್ತಿದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಾಡಲು ಇದೂ ಒಂದು ಸಮಸ್ಯೆಯಾಗಿರಬೇಕು ಎನ್ನಲಾಗುತ್ತಿದೆ. ವಾಸ್ತವವಾಗಿ ಈ ಪರಿವರ್ತಕ ಒಮ್ಮೆ ಸುಟ್ಟುಹೋಗಿತ್ತು. ಆ ಬಳಿಕವೂ ಇದರ ಲೋಡನ್ನು ಮತ್ತೂಂದು ಪರಿವರ್ತಕ ಸ್ಥಾಪಿಸಿ, ಅದಕ್ಕೆ ವರ್ಗಾಯಿಸಬೇಕಾಗಿತ್ತು. ಆದರೆ ಆ ಕಾರ್ಯವನ್ನೂ ಮಾಡಲಿಲ್ಲ.

ಕ್ಯಾಂಪ್ಕೋ ಬಳಿ 100 ಕೆವಿಎ ಪರಿವರ್ತಕ
ವಿಟ್ಲ ಬಸ್‌ ನಿಲ್ದಾಣದ ಬಳಿ ಕ್ಯಾಂಪ್ಕೋ ಶಾಖೆಯಿದೆ. ಅದರ ಪಕ್ಕದಲ್ಲಿ 100 ಕೆವಿಎ ಪರಿವರ್ತಕ ಸ್ಥಾಪಿಸಲು ಮೆಸ್ಕಾಂ ಚಿಂತನೆ ನಡೆಸಿದೆ. ಆದರೆ ಅದಕ್ಕೆ ಎಸ್ಟಿಮೇಟ್‌ ಆಗಿದೆ. ಮತ್ತು ಇನ್ನೊಂದು ಪರಿವರ್ತಕ ಸ್ಥಾಪನೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆಯೋ ಗೊತ್ತಿಲ್ಲ. ಬೇಗನೆ ಸಾಗಿದರೆ ವಿಟ್ಲ ಪೇಟೆಯಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಕಡಿಮೆಯಾಗಬಹುದು ಎನ್ನಲಾಗುತ್ತಿದೆ. ವಿಟ್ಲ ಪೇಟೆಯಲ್ಲಿ ಪರಿವರ್ತಕವನ್ನು ಸ್ಥಾಪಿಸಲು ಸ್ಥಳಾವಕಾಶವೂ ಇಲ್ಲ, ಸಹಕಾರವೂ ಇಲ್ಲವೆಂದು ಮೆಸ್ಕಾಂ ಅಧಿಕಾರಿಗಳು ದೂರುತ್ತಿದ್ದಾರೆ.

ಪುತ್ತೂರು ರಸ್ತೆ ಕಂಬಗಳ ಸ್ಥಳಾಂತರವಾಗಿಲ್ಲ
ವಿಟ್ಲ ಜಂಕ್ಷನ್‌ನಿಂದ ಪುತ್ತೂರು ರಸ್ತೆಯವರೆಗೆ 7 ವಿದ್ಯುತ್‌ ಕಂಬಗಳು ರಸ್ತೆಯ ಬದಿಯಲ್ಲೇ ಇವೆ. ಕಳೆದ ಏಳು ವರ್ಷಗಳಿಂದ ಸ್ಥಳೀಯರು ಇವುಗಳನ್ನು ಸ್ಥಳಾಂತರಗೊಳಿಸಬೇಕು ಎನ್ನುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಿತ್ಯ ಟ್ರಾಫಿಕ್‌ ಜಾಮ್‌ಗೆ ಇದೊಂದು ಪ್ರಮುಖ ಕಾರಣವಾಗಿದೆ. ಅರಮನೆ ರಸ್ತೆಯ 9 ಕಂಬಗಳನ್ನು ಸ್ಥಳಾಂತರಿಸಿದಂತೆ ಇವುಗಳನ್ನೂ 11 ಮೀಟರ್‌ ಎತ್ತರದ ಸ್ಪನ್‌ ಪೋಲ್‌ಗ‌ಳನ್ನು ಅಳವಡಿಸಿ, ಸಮಸ್ಯೆ ಬಗೆ ಹರಿಸಬೇಕೆಂದು ನಾಗರಿಕರ ಒತ್ತಾಯವಿದೆ. ಆದರೆ ಮೆಸ್ಕಾಂ ಎಸ್ಟಿಮೇಟ್‌ ತಯಾರಿಸಿಲ್ಲ. ಲೋಕೋಪಯೋಗಿ ಇಲಾಖೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ ಬಳಿಕ ಎಸ್ಟಿಮೇಟ್‌ ತಯಾರಿಸುತ್ತೇವೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಈ ಸಂಕಷ್ಟದಿಂದ ಕಂಬಗಳು ಸ್ಥಳಾಂತರವಾಗುತ್ತಿಲ್ಲ. ಅಂಗಡಿ ಮಾಲಕರು ತಮ್ಮ ಅಂಗಡಿಗಳ ಮುಂಭಾಗ ಕೆಡವಿ ವರ್ಷಗಟ್ಟಲೆ ಕಳೆದು ಹೋದರೂ ಕಂಬ ಸ್ಥಳಾಂತರ ಮಾಡಿಲ್ಲ ಎಂದು ದೂರಿದ್ದಾರೆ.

ಹಳ್ಳಿಯಲ್ಲಿ  ಹೀನಾಯ ಸ್ಥಿತಿ
ವಿಟ್ಲ ಪೇಟೆಯಲ್ಲಿ ವಿದ್ಯುತ್‌ ಪರಿಸ್ಥಿತಿ ಶೋಚನೀಯವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಹೀನಾಯವಾಗಿದೆ. ವಿದ್ಯುತ್‌ ಕಡಿತದಿಂದ ಹಳ್ಳಿಗರು ಕಂಗಾಲಾಗಿದ್ದಾರೆ. ಈ ಬಾರಿ ಬೇಸಗೆಯಲ್ಲಿ ವಿದ್ಯುತ್‌ ಕಡಿತದ ಸಮಸ್ಯೆ ಇರಲಿಲ್ಲ. ಮಳೆಗಾಲದಲ್ಲೇ ವಿದ್ಯುತ್‌ ಇಲ್ಲ. ಅತ್ಯಂತ ಶೋಚನೀಯ ಪರಿಸ್ಥಿತಿಗೆ ಸ್ಪಂದನವಿಲ್ಲ ಎಂದು ಹಳ್ಳಿಗರು ದೂರುತ್ತಿದ್ದಾರೆ. ರಾತ್ರಿ ವಿದ್ಯುತ್‌ ಕಡಿತ ಸಂಭವಿಸಿದರೆ ಮರುದಿನ ಬೆಳಗ್ಗೆ ಅಥವಾ ಮಧ್ಯಾಹ್ನ ವಿದ್ಯುತ್‌ ಪ್ರತ್ಯಕ್ಷವಾಗುತ್ತದೆ. ಪ್ರತೀ ಬುಧವಾರ ನಿರ್ವಹಣೆಗಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿತ್ತು. ಆಗಿನ ನಿರ್ವಹಣ ಕಾಮಗಾರಿ ಸಮರ್ಪಕವಾಗಿರಲಿಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

Advertisement

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next