Advertisement

Karnataka ವಿದ್ಯುತ್‌ ಪ್ರಸರಣ ನಿಗಮದಿಂದ ಪವರ್‌ ಮ್ಯಾನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

05:54 PM Oct 23, 2024 | Team Udayavani |

ಬೆಳ್ಮಣ್‌: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ 411 ಕಿರಿಯ ಸ್ಟೇಷನ್‌ ಪರಿಚಾರಕರು, 81 ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳು ಹಾಗೂ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ 2,268 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಆರ್ಜಿ ಆಹ್ವಾನಿಸಲಾಗಿದೆ. ಇದರಿಂದಾಗಿ ಬಹು ವರ್ಷಗಳಿಂದ ನೇಮಕಾತಿಯ ನಿರೀಕ್ಷೆಯಲ್ಲಿದ್ದ ಹೊರ ಗುತ್ತಿಗೆ ಲೈನ್‌ಮ್ಯಾನ್‌ಗಳು ಮತ್ತೆ ನಿರಾಶರಾಗಿದ್ದಾರೆ.

Advertisement

ಬಹಳಷ್ಟು ವರ್ಷಗಳಿಂದ ಒಳ ಗುತ್ತಿಗೆ ಮೂಲಕ ಸೇವೆ ಸಲ್ಲಿಸಿದ ಇವರು ಬಳಿಕ ಇಲಾಖೆಯ ಭರವಸೆಗಳನ್ನು ನಂಬಿ ಹೊರಗುತ್ತಿಗೆಗೆ ಒಳಗಾದರು. ಮೆಸ್ಕಾಂ ಇಲಾಖೆಯಲ್ಲಿ ಅತೀ ಕಡಿಮೆ ಸಂಬಳಕ್ಕೆ ದುಡಿಯುತ್ತಾ ಮಳೆ ಬಿಸಿಲೆನ್ನದೆ ವಿದ್ಯುತ್‌ ಕಂಬಗಳನ್ನೇರುವ ಕಾಯಕದಿಂದ ಹಿಡಿದು ತೊಂದರೆ ಕೊಡುವ ಗಿಡಗಂಟಿಗಳನ್ನು ರಾತ್ರಿ ಹಗಲು ಕಡಿಯುತ್ತಿದ್ದ ಈ ಶ್ರಮ ಜೀವಿಗಳಿಗೆ ಪವರ್‌ಮ್ಯಾನ್‌ ಹುದ್ದೆ ಮತ್ತೆ ಮರೀಚಿಕೆಯಾಗಿದೆ.

ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ತಮಗೆ ಸರಕಾರದ ನೇಮಕಾತಿಯ ವೇಳೆ ವಿಶೇಷ ಅವಕಾಶ ದೊರೆಯಬಹುದು, ಅಥವಾ ತಮ್ಮ ನೇಮಕಾತಿಯನ್ನೇ ಖಾಯಂಗೊಳಿಸಬಹುದು ಎನ್ನುವ ದೂರದ ಆಸೆಯೊಂದು ಇತ್ತು. ಆದರೆ ಈಗ ಅದಕ್ಕೆ ತಣ್ಣೀರು ಬಿದ್ದಂತಾಗಿದೆ.

ಪ್ರಾಯ ಮಿತಿಯೂ ತೊಡಕು
ಈಗಿನ ಹೊಸ ನೇಮಕಾತಿಯಲ್ಲಿ ಅರ್ಜಿದಾರರಿಗೆ 38 ವರ್ಷದ ಪ್ರಾಯ ಮಿತಿಯನ್ನೂ ನಿಗದಿಪಡಿಸಲಾಗಿದೆ. ಸಣ್ಣ ವಯಸ್ಸಿನಿಂದ ಈ ಕಾಯಕ ನಡೆಸಿಕೊಂಡು ಬಂದು ಹುದ್ದೆಯ ಆಶೆಯಿಂದ ಇನ್ನೂ ಲೈಟ್‌ ಕಂಬವನ್ನೇ ಸುತ್ತುತ್ತಿರುವ ಈಗ 40 ದಾಟಿರುವ ಲೈನ್‌ಮ್ಯಾನ್‌ಗಳು ಈ ಆದೇಶ ನೋಡಿ ನಿರಾಶರಾಗಿದ್ದಾರೆ. ಜತೆಗೆ ಎಸೆಸೆಲ್ಸಿ ವಿದ್ಯಾಭ್ಯಾಸ ಕಡ್ಡಾಯವೆಂಬ ನಿಯಮವೂ ಅವರಿಗೆ ತೊಡಕಾಗಿದೆ.

ಇಂಧನ ಸಚಿವರಿಗೆ ಮನವಿ ನೀಡಲಾಗಿತ್ತು
ಈಗಾಗಲೇ ಕಾರ್ಕಳದ ವಿವಿಧೆಡೆ ಸುಮಾರು 48 ಮಂದಿ ಹೊರಗುತ್ತಿಗೆಯಡಿ ದುಡಿಯುತ್ತಿದ್ದಾರೆ. ಇಂತಹ ಹಲವಾರು ಲೈನ್‌ಮ್ಯಾನ್‌ಗಳು ಈ ಹಿಂದಿನ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಸಹಿತ ಹಲವರಲ್ಲಿ ಖಾಯಂಮಾತಿಗೆ ಮನವಿ ಮಾಡಿದ್ದರು. ಇದೀಗ ಹುದ್ದೆಗಳಿಗೆ ಅರ್ಜಿ ಆಹ್ವಾನ ಬಂದಿದ್ದು ಪ್ರಾಯ ಮಿತಿ ಹಾಗೂ ಎಸ್‌ಎಸ್‌ಎಲ್‌ಸಿ ಅರ್ಹತೆ ಈ ಆಕಾಂಕ್ಷಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇದೀಗ ಇಂಧನ ಸಚಿವ ಜಾರ್ಜ್‌ ಅವರಿಗೆ ಹೊರ ಗುತ್ತಿಗೆದಾರರರನ್ನು ಶಾಶ್ವತ ಲೈನ್‌ಮ್ಯಾನ್‌ಗಳೆಂದು ಪರಿಗಣಿಸುವಂತೆ ಮನವಿ ಮಾಡಲಾಗುವುದು ಎಂದು ಲೈನ್‌ಮ್ಯಾನ್‌ಒಬ್ಬರು ತಿಳಿಸಿದ್ದಾರೆ.

Advertisement

ನಮ್ಮ ಸೇವೆಗೆ ಬೆಲೆ ಇಲ್ಲವೇ?
ಬಹಳಷ್ಟು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಬೇಸರವಿದೆ. ನಾವು ಇಷ್ಟು ವರ್ಷ ಮಾಡಿದ ಸೇವೆಗೆ ಬೆಲೆಯೇ ಇಲ್ಲದಂತಾಗಿ ಹೋಗಿದೆ. ಹೊಸ ನೇಮಕಾತಿ ವೇಳೆ ನಮ್ಮನ್ನು ಪರಿಗಣಿಸಬಹುದು ಎಂಬ ಆಸೆ ಇತ್ತು. ಆದರೆ, ನಮಗಾಗಿ ಯಾವುದೇ ವಿಶೇಷ ಅವಕಾಶ ನೀಡದೆ ಇರುವುದು ನೋವು ತಂದಿದೆ.
– ಒಬ್ಬರು ಲೈನ್‌ಮ್ಯಾನ್‌

ಹಳಬರೇ ಇದ್ದರೆ ಒಳಿತು
ಹೊರ ಗುತ್ತಿಗೆ ಉದ್ಯೋಗಿಗಳು ಶಾಶ್ವತವಾಗಿ ನಮ್ಮ ಜತೆ ಬಂದರೆ ಒಳ್ಳೆಯದು. ಅವರು ಸ್ಥಳೀಯರೇ ಆದ್ದರಿಂದ ವರ್ಗಾವಣೆಯ ಸಮಸ್ಯೆ ಇರುವುದಿಲ್ಲ. ಆದರೆ ಇದು ಸರಕಾರಿ ಮಟ್ಟದಿಂದಲೇ ಬದಲಾವಣೆ ಆಗಬೇಕಾದ ಪ್ರಕ್ರಿಯೆ.
-ನರಸಿಂಹ ಪಂಡಿತ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ , ಕಾರ್ಕಳ ಮೆಸ್ಕಾಂ

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next