Advertisement

ಉಡುಪಿ ಸರಕಾರಿ ಬಸ್‌ ನಿಲ್ದಾಣದಲ್ಲಿ ಕತ್ತಲೆ ಭಾಗ್ಯ!

07:35 AM Jul 31, 2018 | Team Udayavani |

ಉಡುಪಿ: ನಗರದ KSRTC ಬಸ್‌ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುವ ಜಂಕ್ಷನ್‌. ನಿತ್ಯವೂ ಸುಮಾರು 400 ಬಸ್‌ ಗಳು ಸಂಚರಿಸುತ್ತವೆ. ಇಂತಹ ನಿಲ್ದಾಣ ಕಳೆದ 15 ದಿನಗಳಿಂದ ವಿದ್ಯುತ್‌ ಇಲ್ಲದೆ ಕತ್ತಲ ಕೂಪವಾಗಿದೆ. ನಿಲ್ದಾಣದೊಳಗಿರುವ ಅಂಗಡಿ ಮುಂಗಟ್ಟು, ಬಸ್‌ ನಿಲ್ದಾಣದ ಕಚೇರಿಗೆ ವಿದ್ಯುತ್‌ ಸಂಪರ್ಕ ಇದೆ. ಆದರೆ ಬಸ್‌ ನಿಲ್ದಾಣದ ಒಳಗೆ ವಿದ್ಯುತ್‌ ಸರಬರಾಜು ಕೆಟ್ಟಿದೆ. ಹೊರಗೆ ಮೂರು ದೊಡ್ಡ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದ್ದು, ಅವು ಕಾರ್ಯ ನಿರ್ವಹಿಸುತ್ತಿಲ್ಲ. ದೂರದೂರಿಗೆ ತೆರಳುವ ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರ ಸಹಿತ ಎಲ್ಲ ಪ್ರಯಾಣಿಕರು ರಾತ್ರಿ ವೇಳೆ ಬೆಳಕಿಲ್ಲದೆ ಸಂಕಟಕ್ಕೀಡಾಗಿದ್ದಾರೆ.

Advertisement

ಕಾಲಿಗೆ ಎಡವುವ ಕುಡುಕರು
ಎಲ್ಲೆಂದರಲ್ಲಿ ಕುಡುಕರು ಮಲಗುತ್ತ ನಿಲ್ದಾಣವನ್ನು ಕುಲಗೆಡಿಸುತ್ತಿದ್ದಾರೆ. ಮಲಗಿರುವಲ್ಲೇ ಮಲಮೂತ್ರ ವಿಸರ್ಜಿಸಿ ಪರಿಸರವನ್ನು ಹಾಳು ಮಾಡುತ್ತಾರೆ. ಎಲ್ಲೆಂದರಲ್ಲಿ ಮಲಗಿರುವುದರಿಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಓಡಾಡಲು ತೊಡಕಾಗಿದೆ. ಕತ್ತಲೆಯಲ್ಲಿ ಮಲಗಿರುವ ಕುಡುಕರ ಕೈಕಾಲು ಎಡವಿ ಹಲವರು ಬಿದ್ದಿದ್ದಾರೆ. ರವಿವಾರ ರಾತ್ರಿ ಕುಡುಕರಿಬ್ಬರು ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದರು ಎಂದು ನಿಲ್ದಾಣದಲ್ಲಿರುವ ಅಂಗಡಿ ಮಾಲಕರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕಳ್ಳರ ಕಾಟ
ವಿದ್ಯುತ್‌ ಸಂಪರ್ಕ ಇರುವಾಗಲೇ ಕುಡಿದು ಬಿದ್ದವರ ಜೇಬಿಗೆ ಕೈ ಹಾಕಿ ಕಳ್ಳರು ಹಣ ಕದಿಯುತ್ತಾರೆ. ವಿದ್ಯುತ್‌ ಸಂಪರ್ಕವಿಲ್ಲದೆ ಇರುವ ಈ ಸಂದರ್ಭ ಕಳ್ಳರ ಉಪಟಳ ಅಧಿಕವಾಗಿದೆ. ಬಯಲು ಸೀಮೆಯ ಕೂಲಿ ಕಾರ್ಮಿಕ ವರ್ಗದವರನ್ನು ಬೆದರಿಸಿ ಹಣ ಲಪಟಾಯಿಸುತ್ತಾರೆ ಎಂದು ಸ್ಥಳೀಯ ಅಂಗಡಿ ಮಾಲಕರು ಆರೋಪಿಸಿದ್ದಾರೆ.

ಪ್ರಯಾಣಿಕರಿಗೆ ಹಿಂಜರಿಕೆ
ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ರಾತ್ರಿ ಪ್ರಯಾಣಿಕರು ಬಸ್‌ ನಿಲ್ದಾಣದೊಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿ ಹತ್ತು ಗಂಟೆಯವರೆಗೆ ಅಕ್ಕಪಕ್ಕದ ಅಂಗಡಿಯ ಮಂದ ಬೆಳಕು ಬೆಳಗಿದರೂ ಬಳಿಕ ಇಲ್ಲಿ ಕಾರ್ಗತ್ತಲು. ರಾತ್ರಿ ವೇಳೆ ಪ್ರಯಾಣಿಕರು ಮಳೆ ಬಂದರೆ ಕೊಡೆ ಹಿಡಿದುಕೊಂಡು ಹೊರಗೆಯೇ ನಿಲ್ಲುತ್ತಾರೆ ವಿನಾ ಬಸ್‌ ನಿಲ್ದಾಣದೊಳಗೆ ಹೋಗುವ ಮನಸ್ಸು ಮಾಡುತ್ತಿಲ್ಲ.

ಬಸ್‌ ನಿಲ್ದಾಣವನ್ನು ನಗರಸಭೆ ನಿರ್ವಹಿಸುತ್ತಿದೆ. ಇಲ್ಲಿ ನಿಲ್ಲುವ ಪ್ರತಿ ಬಸ್‌ ಗೆ 2 ರೂ.ನಂತೆ ಬಾಡಿಗೆ ರೂಪದಲ್ಲಿ ನಗರಸಭೆಗೆ ನೀಡಲಾಗುತ್ತಿದೆ. ನಿಲ್ದಾಣದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್‌ ಸಂಪರ್ಕವಿಲ್ಲ. ನಗರಸಭೆಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಸ್ಪಂದನೆ ಇಲ್ಲ. ಗಂಭೀರ ಸಮಸ್ಯೆಗಳಿದ್ದರೆ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಬಹುದಿತ್ತು. ಅದನ್ನೂ ಮಾಡಿಲ್ಲ. ನಗರಸಭೆ ನಿರ್ಲಕ್ಷ್ಯದಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
– ಅಲ್ತಾರು ಉದಯ ಶೆಟ್ಟಿ, KSRTC ಉಡುಪಿ ಡಿಪೋ ಮ್ಯಾನೇಜರ್‌.

Advertisement

ಎರಡು ದಿನಗಳಲ್ಲಿ ವ್ಯವಸ್ಥೆ
ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿರುವ ದೋಷ ಇನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇನ್ನೆರಡು ದಿನಗಳಲ್ಲಿ ವಿದ್ಯುತ್‌ ವ್ಯವಸ್ಥೆ ಸರಿಪಡಿಸುತ್ತೇವೆ.
– ಜರ್ನಾರ್ದನ, ನಗರಸಭೆ ಆಯುಕ್ತರು. 

— ಹರೀಶ್‌ ಕಿರಣ್‌ ತುಂಗ

Advertisement

Udayavani is now on Telegram. Click here to join our channel and stay updated with the latest news.

Next