Advertisement

ಬಗೆಹರಿಯದ ವಿದ್ಯುತ್‌ ಬಿಲ್‌ ಏರುಪೇರು ಗೊಂದಲ

10:10 AM Jun 06, 2020 | sudhir |

ಮಂಗಳೂರು: ಲಾಕ್‌ಡೌನ್‌ನ ಎರಡು ತಿಂಗಳ ಅವಧಿಯಲ್ಲಿ ಬಳಕೆ ಮಾಡಿದ್ದ ವಿದ್ಯುತ್‌ ಬಿಲ್‌ನಲ್ಲಿ ಉಂಟಾಗಿರುವ ಗೊಂದಲ ಮುಂದುವರಿದಿದ್ದು, ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದಾಗಿ ಗ್ರಾಹಕರು ಆರೋಪಿಸಿದರೆ, ಅತ್ತ “ಮೆಸ್ಕಾಂ’ನವರು ಬಿಲ್‌ ಲೆಕ್ಕಾಚಾರ ಸರಿಯಾಗಿದೆ ಎಂದು ವಾದಿಸುತ್ತಿದ್ದಾರೆ.

Advertisement

ಇದರ ಪರಿಣಾಮ, ಮೆಸ್ಕಾಂ ಬಿಲ್‌ ಏರುಪೇರು ಗೊಂದಲ ಮತ್ತಷ್ಟು ಜಟಿಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಹಕರ ಬಿಲ್‌ನಲ್ಲಿ ಎದುರಾಗಿರುವ ಈ ಗೊಂದಲ ಹಾಗೂ ಸಮಸ್ಯೆಗಳಿಗೆ ಅಂತಿಮ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜೂ. 6ರಂದು ಮಧ್ಯಾಹ್ನ ವಿಶೇಷ ಸಭೆ ನಡೆಸಲಿದ್ದಾರೆ.
ಪ್ರತೀ ತಿಂಗಳು 500 ಅಥವಾ 600 ರೂ. ವಿದ್ಯುತ್‌ ಬಿಲ್‌ ಬರುವವರಿಗೆ ಮಾರ್ಚ್‌-ಎಪ್ರಿಲ್‌ನಲ್ಲಿ ದುಪ್ಪಟ್ಟು ಬಿಲ್‌ ಬಂದಿದೆ. ಅದೂ ಕೂಡ 2ತಿಂಗಳ ಬಿಲ್‌ ಮೊತ್ತವನ್ನು ಒಟ್ಟು ಸೇರಿಸಿದ ಪರಿಣಾಮ ಅದು ಮತ್ತಷ್ಟು ಏರಿಕೆಯಾಗಿದೆ. ಜತೆಗೆ, ವಿದ್ಯುತ್‌ ಸ್ಲಾಬ್‌ನಲ್ಲಿ ಏರಿಕೆ ಮಾಡಿದ ರೀತಿ ಸಮರ್ಪಕವಾಗಿಲ್ಲ, ಇತರ ತೆರಿಗೆಗಳನ್ನು ಹಾಕಿದ್ದು ಏಕೆ ? ಬಿಲ್‌ ನೀಡುವವರು ಸರಾಸರಿ ಬಿಲ್‌ಗ‌ಳನ್ನೂ ಮೀಟರ್‌ ನೋಡಿಕೊಂಡು ಸರಿಯಾಗಿ ಏಕೆ ನೀಡಿಲ್ಲ? ಹಿಂದಿನ ಮೊತ್ತ ಪಾವತಿಸಿದ್ದರೂ ಬಾಕಿ ಎಂದು ತೋರಿಸುತ್ತಿರುವುದು ಏಕೆ? ಹೀಗೆ ಗ್ರಾಹಕರು ಕೇಳುತ್ತಿರುವ ಪ್ರಶ್ನೆಗಳ ಮೇಲಿನ ಪ್ರಶ್ನೆಗಳಿಗೆ ಮೆಸ್ಕಾಂ ಅಧಿಕಾರಿಗಳು-ಸಿಬಂದಿ ಸುಸ್ತಾಗಿ ಹೋಗಿದ್ದಾರೆ.

ಆಕ್ಷೇಪಿಸಿದವರಿಗೆ ವಿವರವಾದ ಬಿಲ್‌ ಕೊಡಿ
ಈ ಬಗ್ಗೆ ಭಾರತೀಯ ಕಿಸಾನ್‌ ಸಂಘದ ಸತ್ಯನಾರಾಯಣ ಉಡುಪ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, “ಬಳಕೆ ಅಧಿಕವಾದ ಕಾರಣಕ್ಕಾಗಿ ದರ ಏರಿರಲೂಬಹುದು. ಬಿಲ್‌ ಅಧಿಕ ಆಗಿರುವ ಬಗ್ಗೆ 1912 ನಂಬರಿಗೆ ಯಾರೆಲ್ಲ ದೂರು ನೀಡುತ್ತಾರೋ ಅವರಿಗೆಲ್ಲ 2 ತಿಂಗಳ ವಿವರವಾದ ಮಾಹಿತಿ ನೀಡುವ ಬಿಲ್‌ ಅನ್ನು ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ತಿಂಗಳ ಬಿಲ್‌ ನೀಡದಿರುವುದೇ ಗೊಂದಲ!
ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್‌ ಪ್ರಕಾರ, “ಪ್ರತೀ ತಿಂಗಳಿನ ಬಿಲ್‌ ಅನ್ನು ಪ್ರತ್ಯೇಕವಾಗಿಯೇ ನೀಡುತ್ತಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಈ ಹಿಂದಿನಂತೆ ತಿಂಗಳಿಗೆ ಒಂದರಂತೆ ಆ ಎರಡು ತಿಂಗಳ ಬಿಲ್‌ ನೀಡಲಿ’ ಎಂದು ಆಗ್ರಹಿಸಿದ್ದಾರೆ.

ಗೊಂದಲವಿದ್ದರೆ ಪರಿಷ್ಕೃತ ಬಿಲ್‌
ವಿದ್ಯುತ್‌ ಬಿಲ್‌ ನೀಡಿರುವುದು ಬಳಕೆಗಿಂತ ಹೆಚ್ಚುವರಿ ಎಂದು ಕಂಡುಬಂದಲ್ಲಿ ಅಂತಹ ಸ್ಥಾವರಗಳ ಮಾಪಕದ ರೀಡಿಂಗ್‌ ಅನ್ನು ಮತ್ತೆ ತೆಗೆದುಕೊಳ್ಳಲಾಗುತ್ತದೆ. ಒಂದುವೇಳೆ ಗ್ರಾಹಕರು ಸ್ವತಃ ರೀಡಿಂಗ್‌ ಅನ್ನು ಸಂಬಂಧಿಸಿದ ಉಪ ವಿಭಾಗ ಅಥವಾ 1912ಕ್ಕೆ ತಿಳಿಸಿದರೆ ಪರಿಷ್ಕೃತ ಬಿಲ್‌ ನೀಡಲಾಗುತ್ತದೆ ಎಂದು ಮೆಸ್ಕಾಂ ತಿಳಿಸಿದೆ.

Advertisement

ಬಳಕೆ ಹೆಚ್ಚಳ: ಮೆಸ್ಕಾಂ ವಾದ
ಲಾಕ್‌ಡೌನ್‌ ಸಮಯದಲ್ಲಿ ಬಹುತೇಕ ಜನರು ಮನೆಯಲ್ಲೇ ಇದ್ದು ವಿದ್ಯುತ್‌ ಬಳಕೆ ಪ್ರಮಾಣ ಅಧಿಕವಾಗಿದೆ. ಬಳಕೆ ಹೆಚ್ಚಾದಂತೆ ಹೆಚ್ಚಿನ ಸ್ಲಾಬ್‌ ದರಗಳು ಅನ್ವಯವಾಗುವುದರಿಂದ ವಿದ್ಯುತ್‌ ಬಿಲ್‌ ಹೆಚ್ಚಳವಾಗಿದೆ. ಒಂದು ತಿಂಗಳಿಗೆ 30 ಯುನಿಟ್‌ಗಳು ಮೊದಲ ಸ್ಲಾಬ್‌ನಲ್ಲಿ ಬರಲಿದ್ದು, ನಗರ ಪ್ರದೇಶದಲ್ಲಿ 3.70 ರೂ. (ಯುನಿಟ್‌ಗೆ) ಹಾಗೂ 3.60 ರೂ. ವಿಧಿಸಲಾಗಿದೆ. 2 ತಿಂಗಳಿಗೆ ಇದೇ ದರದಲ್ಲಿ 60 ಯುನಿಟ್‌ಗಳನ್ನು ಪರಿಗಣಿಸಲಾಗಿದೆ. 2ನೇ ಸ್ಲಾಬ್‌ನಲ್ಲಿ 1 ತಿಂಗಳಿಗೆ 70 ಯುನಿಟ್‌ನಂತೆ (ಯುನಿಟ್‌ಗೆ ನಗರ 5.20 ರೂ. ಹಾಗೂ ಗ್ರಾಮೀಣ 4.90 ರೂ.) ಎರಡು ತಿಂಗಳಿಗೆ 140 ಯುನಿಟ್‌ಗಳನ್ನು ಪರಿಗಣಿಸಲಾಗಿದೆ.

ಮೂರನೇ ಸ್ಲಾಬ್‌ 100 ಯುನಿಟ್‌ನಂತೆ (ನಗರ 6.75 ರೂ. ಹಾಗೂ ಗ್ರಾಮೀಣ 6.45 ರೂ.) ಎರಡು ತಿಂಗಳಿಗೆ 200 ಯುನಿಟ್‌ಗಳನ್ನು ಪರಿಗಣಿಸಲಾಗಿದೆ. 4ನೇ ಸ್ಲಾಬ್‌ 200 ಯುನಿಟ್‌ಗಿಂತ ಅಧಿಕದಂತೆ (ಯುನಿಟ್‌ಗೆ ನಗರ 7.80 ರೂ. ಗ್ರಾಮೀಣ 7.30 ರೂ.) ಎರಡು ತಿಂಗಳಿಗೆ 400 ಯುನಿಟ್‌ಗಿಂತ ಅಧಿಕವನ್ನು ಪರಿಗಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next