ಉಪ್ಪಿನಂಗಡಿ: ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿದು ಸಮ್ಮಿಶ್ರ ಸರಕಾರವೂ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾದವು. ಆದರೆ KSRTC ಬಸ್ ಪ್ರಯಾಣದ ಟಿಕೆಟ್ ನಲ್ಲಿ ಇನ್ನೂ ಮೇ 12ರ ಚುನಾವಣೆ ಮುಗಿದಿಲ್ಲ! ‘ಮೇ 12ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಿ’ ಎನ್ನುವ ಘೋಷವಾಕ್ಯ KSRTC ಬಸ್ ನ ಟಿಕೆಟ್ ನಲ್ಲಿ ಈಗಲೂ ಕಾಣಿಸುತ್ತಿದೆ. ಟಿಕೆಟ್ ಯಂತ್ರದ ಸೆಟ್ಟಿಂಗ್ ಬದಲಾಯಿಸದ ಕಾರಣ ಈ ಘೋಷವಾಕ್ಯ ಇನ್ನೂ ಪ್ರಕಟವಾಗುತ್ತಿದೆ. ಜು. 22ರಂದು ಧರ್ಮಸ್ಥಳ ಘಟಕದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಉಪ್ಪಿನಂಗಡಿಯಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ನೀಡಲಾದ ಟಿಕೆಟ್ ನಲ್ಲಿ ಮತ ಚಲಾಯಿಸುವ ಘೋಷ ವಾಕ್ಯ ಕಂಡುಬಂದಿದೆ.
ಟಿಕೆಟ್ ನಲ್ಲಿ ಎಡವಟ್ಟಾದರೆ ಏನಾಗುತ್ತೆ?
ಇದೊಂದು ಗಂಭೀರ ಪ್ರಮಾದ ಅಲ್ಲದಿದ್ದರೂ, ಟಿಕೆಟ್ ನಲ್ಲಿ ಬಸ್ಸಿನ ನೋಂದಣಿ ಸಂಖ್ಯೆ, ಊರು, ದಿನಾಂಕ, ಸಮಯ ಮೊದಲಾದವುಗಳಲ್ಲಿ ಇದೇ ರೀತಿಯಾಗಿ ತಪ್ಪಾದರೆ ಏನು ಗತಿ? ಬಸ್ ಅವಘಡಕ್ಕೆ ತುತ್ತಾದರೆ ಜೀವವಿಮೆ ಪರಿಹಾರ ಧನ ಪಡೆಯಲು ಪ್ರಯಾಣಿಕರಿಗೆ ತೊಂದರೆ ಎದುರಾಗುತ್ತದೆ. ಟಿಕೆಟ್‌ಗಳಲ್ಲಿ ತಪ್ಪಾಗದಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.