Advertisement
ಸಮಗ್ರ ಮಾನವಕೋಟಿಯ ಕಲ್ಯಾಣಕ್ಕಾಗಿ ಪವಿತ್ರ ಖುರುಆನ್, ಪ್ರವಾದಿ ಮುಹಮ್ಮದ್ (ಸ.ಆ.)ರ ಮುಖಾಂತರ, ಜಗತ್ತಿಗೆ ಅವತೀರ್ಣ ಗೊಂಡದ್ದು ಪವಿತ್ರ ರಮ್ಜಾನ್ ಮಾಸದಲ್ಲಿ. ರಮ್ಜಾನ್ ಉಪವಾಸಾನುಷ್ಠಾನದಿಂದ ಪಂಚೇಂದ್ರಿಯಗಳ ಮೇಲೆ ಪೂರ್ಣ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ಒಂದು ಪೂರ್ಣ ಮಾಸ ಕಾಲ ಉಪವಾಸ ಆಚರಿಸಿದ ಮುಸ್ಲಿಮರೆಲ್ಲರಿಗೂ ಅನ್ನಾಹಾರ ಸೇವನೆಗೆ ಅನುಮತಿಸಲ್ಪಟ್ಟ ದಿನವೇ ಈದುಲ್ ಫಿತ್ರ ಸಂಭ್ರಮದ ಆಚರಣೆ.
Related Articles
ರಮ್ಜಾನ್ ಸಹನೆಯ ಮಾಸ. ಅದು ಬದುಕಿನಲ್ಲಿ ಅನುಕಂಪ ಮತ್ತು ಸಹಾನುಭೂತಿಯನ್ನು ಜಾಗೃತಗೊಳಿಸುತ್ತದೆ. ಪ್ರಾರ್ಥನೆ ಮತ್ತು ನಿವೇದನೆಯ ಮಾಸವೂ ಹೌದು. ತಿಳಿದೋ ತಿಳಿಯದೆಯೋ ಘಟಿಸಿದ ಅನೇಕ ಪಾಪಕೃತ್ಯಗಳಿಗೆ ಪಶ್ಚಾತ್ತಾಪ ಪಟ್ಟು, ಪರಮಕೃಪಾಳುವಾದ ಅಲ್ಲಾಹನಲ್ಲಿ ಕ್ಷಮೆ ಯಾಚಿಸುವ ಮಾಸವೂ ಹೌದು.
Advertisement
ಈದುಲ್ ಫಿತ್ರನಂತಹ ಹಬ್ಬಗಳ ಆಚರಣೆಗಳು, ನಮ್ಮ ನಮ್ಮನ್ನು ಪರಸ್ಪರ ಗೌರವಿಸಿಕೊಂಡ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಲು ಪ್ರೇರಣೆ ನೀಡುತ್ತದೆ. ಈ ಸಂಭ್ರಮದಲ್ಲಿ ಇತರ ಧರ್ಮೀಯರೂ ಪಾಲ್ಗೊಂಡಾಗ ಹಬ್ಬದ ಮಹತ್ವ, ಪ್ರೀತಿ-ವಾತ್ಸಲ್ಯ, ಸೌಹಾರ್ದತೆ ಮತ್ತು ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಫಿತ್ರ ಪ್ರಾರ್ಥನೆಯ ಹಬ್ಬಈದುಲ್ ಫಿತ್ರ ಪ್ರಾರ್ಥನೆಯ ಹಬ್ಬ. ಶಾಂತಿ, ಸಮಾನತೆ ಮತ್ತು ಸೌಹಾರ್ದವನ್ನು ದೈನಂದಿನ ಬದುಕಿನಲ್ಲಿ ರೂಢಿಸಿಕೊಂಡು ಮನುಕುಲದ ಶಾಂತಿ, ಸುಭಿಕ್ಷೆ, ನೆಮ್ಮದಿಗಾಗಿ ಅಲ್ಲಾಹನಲ್ಲಿ ಏಕತೆಯಿಂದ ಈದುಲ್ ಫಿತ್ರನ ಈ ಶುಭದಿನದಂದು ನಾವೆಲ್ಲ ಪ್ರಾರ್ಥಿಸೋಣ. ಪ್ರೀತಿ-ವಿಶ್ವಾಸ, ಔದಾರ್ಯ, ಸಂಯಮ, ಕರುಣೆ, ಶಾಂತಿ-ಸೌಹಾರ್ದ ಭಾರತೀಯರಾದ ನಮ್ಮೆಲ್ಲ ರಲ್ಲೂ ಸದಾ ತುಂಬಿ ತುಳುಕುತಲಿರಲಿ ಎಂದು ಈ ಸುಸಂದರ್ಭದಲ್ಲಿ ಹಾರೈಸೋಣ. ತ್ಯಾಗದ ಮಹತ್ವ ಬೋಧಿರುವ ಝಕಾತ್
“ಝಕಾತ್’ ಎಂಬುದು ಮುಸ್ಲಿಮರಿಗೆ ಬದುಕಿ ನಲ್ಲಿ ತ್ಯಾಗದ ಮಹತ್ವವನ್ನು ಬೋಧಿಸು ತ್ತದೆ. ಈದುಲ್ ಫಿತ್ರನಂದು “ಫಿತ್ರ ಝಕಾತ್’ ಎಂಬ ನಿರ್ಬಂಧ ದಾನವು ಬಡಬಗ್ಗರೂ ಹಬ್ಬದಲ್ಲಿ ಪಾಲ್ಗೊಂಡು ಸಂತೋಷಪಡಬೇಕೆಂಬ ಸದುದ್ದೇಶದಿಂದ ಕೂಡಿದೆ. “ನೀನು ಅಲ್ಲಾಹನ ಅನುಗ್ರಹದಿಂದ ಗಳಿಸಿರುವ ಸಂಪತ್ತಿನಲ್ಲಿ ದೀನ ದಲಿತರ, ಬಡಬಗ್ಗರ ಹಾಗೂ ಕಷ್ಟಕಾರ್ಪಣ್ಯ ಕ್ಕೊಳಗಾದವರ ಒಂದು ಪಾಲು ಸೇರಿಕೊಂಡಿದೆ ಎಂದೂ ನೀನು ಅರ್ಥ ಮಾಡಿಕೊಳ್ಳಲೇಬೇಕು’ ಎಂದು ಖುರುಆನ್ ಬೋಧಿಸಿದೆ. ಅಗತ್ಯ ಬಿದ್ದಾಗ ತನ್ನ ಹೆಚ್ಚಿನ ಸಂಪತ್ತನ್ನು ದೇವನ ಮಾರ್ಗದಲ್ಲಿ ಖರ್ಚು ಮಾಡಲು ಪ್ರೋತ್ಸಾಹ ನೀಡುತ್ತದೆ. “ಝಕಾತ್’ ಬದುಕಿನುದ್ದಕ್ಕೂ ಪರೋಪಕಾರ ಪ್ರಜ್ಞೆ, ಅನುಕಂಪ, ಸಮಾನತೆ ಮತ್ತು ಸೌಹಾರ್ದವನ್ನು ಪಾಲಿಸಲು ಪ್ರೇರಣೆ ನೀಡುತ್ತದೆ. – ಕೆ.ಪಿ. ಅಬ್ದುಲ್‌ಖಾದರ್ ಕುತ್ತೆತ್ತೂರು