ಬೆಂಗಳೂರು: ಕೋರಮಂಗಲದ ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಕಲಚೇತನರ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಡಾ.ಜಯಮಾಲಾ ಉದ್ಘಾಟಿಸಿದರು.
ರಾಜ್ಯ ಸರ್ಕಾರದ ಸಹಯೋಗದಲ್ಲಿ ವೀ ಆರ್ ಯುವರ್ ವಾಯ್ಸ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಸುಮಾರು 150 ಪ್ರತಿಷ್ಠಿತ ಕಂಪೆನಿಗಳು ಹಾಗೂ ಸುಮಾರು 5,000 ವಿಕಲಚೇತನರು ಪಾಲ್ಗೊಂಡಿದ್ದರು. ಮೇಳದಲ್ಲಿ 599 ವಿಕಲಚೇತನರು ಅಂತಿಮವಾಗಿ ಆಯ್ಕೆಯಾದರೆ, 2343 ಮಂದಿ ತಾತ್ಕಾಲಿಕ ಆಯ್ಕೆಗೆ ಅರ್ಹರಾಗಿದ್ದು, ದಾಖಲೆ ಎನಿಸಿದೆ. 2000ಕ್ಕೂ ಹೆಚ್ಚು ಸ್ವಯಂಸೇವಾ ಕಾರ್ಯಕರ್ತರು ವಿಕಲಚೇತನರಿಗೆ ಸಹಕರಿಸಿದರು.
ಶಾಸ್ತ್ರೀ ಮೆಮೋರಿಯಲ್ ವಿಶೇಷ ಶಾಲೆಯ ವಿಜಯಲಕ್ಷ್ಮೀಯವರು ಉದ್ಯೋಗ ಹರಿಸಿ ಬಂದವರು ಸೇರಿದಂತೆ 6,500 ಮಂದಿಗೆ ತಿಂಡಿ ಹಾಗೂ ಎಲ್ಲ ಸ್ವಯಂಸೇವಕರು, ಅಧಿಕಾರಿ, ಸಿಬ್ಬಂದಿ, ಉಪಾಧ್ಯಾಯರು ಸೇರಿದಂತೆ 2,800 ಮಂದಿಗೆ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಜತೆಗೆ ಆರು ಬಸ್‌ಗಳನ್ನು ಸೋಮವಾರದ ಮಟ್ಟಿಗೆ ಒದಗಿಸಿದ್ದರು.
ಇತರೆ ಸ್ವಯಂಸೇವಾ ಸಂಸ್ಥೆಗಳು 13 ಬಸ್ಸು ಹಾಗೂ ಸಂಜ್ಞಾ ಭಾಷಾತಜ್ಞರ ಸೇವೆ ಕಲ್ಪಿಸಿದ್ದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮಾರ್ಗದರ್ಶನದಲ್ಲಿ ಉದ್ಯೋಗ ಮೇಳಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕುಡಿಯುವ ನೀರು, ಗಾಲಿ ಕುರ್ಚಿ, ಶಾಮಿಯಾನ ವ್ಯವಸ್ಥೆ, ಸ್ವಯಂಸೇವಾ ಸಂಸ್ಥೆಗಳ ಮಳಿಗೆಗಳು, ಇಲಾಖೆಗಳ ಮಳಿಗೆಗಳು, ಸಂಜ್ಞಾ ಭಾಷಾ ತಜ್ಞರು, 150 ಕಂಪೆನಿಗಳಿಗೆ ಸಂದರ್ಶನ ಕೊಠಡಿ, ಸ್ಥಳದಲ್ಲೇ ನೋಂದಣಿ ವ್ಯವಸ್ಥೆ, ಬ್ಯಾಟರಿಚಾಲಿತ ವಾಹನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿತ್ತು. ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕ ಜಯವಿಭವ ಸ್ವಾಮಿ, ವೀ ಆರ್ ಯುವರ್ ವಾಯ್ಸ ಸಂಸ್ಥೆಯ ಕಾಸಿಮ್ ಬಸಿತ್ ಇತರರು ಪಾಲ್ಗೊಂಡಿದ್ದರು.