Advertisement

ಸೃಜನಶೀಲತೆ ಪ್ರೇರೇಪಿಸುವ ಶಿಕ್ಷಣ ಅಗತ್ಯ: ಪ್ರೊ|ಸಿ.ಎನ್‌.ಆರ್‌. ರಾವ್

07:00 AM Sep 19, 2017 | Team Udayavani |

ಮಂಗಳೂರು: ಪ್ರಸ್ತುತ ಅನುಸರಿಸಿಕೊಂಡು ಬರುತ್ತಿರುವ ಏಕತಾನತೆಯ ಶಿಕ್ಷಣ ಪದ್ಧತಿಯಿಂದ ಹೊರ ಬಂದು ಯುವಜನತೆಯಲ್ಲಿ ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ರಮವನ್ನು ಮರು ವಿನ್ಯಾಸಗೊಳಿಸುವುದು ಇಂದಿನ ಆವಶ್ಯಕತೆಯಾಗಿದೆ ಎಂದು ಪ್ರಖ್ಯಾತ ವಿಜ್ಞಾನಿ ಹಾಗೂ ಭಾರತರತ್ನ ಪ್ರೊ| ಸಿ.ಎನ್‌.ಆರ್‌. ರಾವ್‌ ಅಭಿಪ್ರಾಯಪಟ್ಟರು.

Advertisement

ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಸೋಮವಾರ ದತ್ತಿ ಉಪನ್ಯಾಸ ನೀಡಿದ ಅವರು, ಪ್ರಸ್ತುತ ನಾವು ಜ್ಞಾನ ಸ್ಫೋಟದ ಕಾಲಘಟ್ಟದಲ್ಲಿದ್ದೇವೆ. ಕೇವಲ ಪಾಠಪುಸ್ತಕಗಳಿಗೆ ಸೀಮಿತಗೊಳಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವ ಯಾಂತ್ರಿಕ ಸ್ವರೂಪದ ಶಿಕ್ಷಣ ವಿದ್ಯಾರ್ಥಿಗಳನ್ನು ಅದುಮಿಡುವ ಮತ್ತು ಒತ್ತಡದಲ್ಲಿ ಸಿಲುಕಿಸುತ್ತದೆ. ಇಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಸಂಶೋಧನ ಶೀಲತೆಗೆ ಅವಕಾಶವಿಲ್ಲ. ಈ ರೀತಿಯ ದೃಷ್ಟಿಕೋನದಲ್ಲಿ ಪರಿವರ್ತನೆಗಳಾಗಬೇಕು ಎಂದರು.

ವಿಶ್ವದ ಮಹಾನ್‌ ವಿಜ್ಞಾನಿಗಳಲ್ಲಿ ಬಹಳಷ್ಟು ಮಂದಿಯ ಸಾಧನೆಗಳನ್ನು ಅವಲೋಕಿಸಿದಾಗ ಶಿಕ್ಷಣದ ಬದಲು ಕ್ರಿಯಾಶೀಲತೆ ಮತ್ತು ಸಂಶೋಧನಾ ಪ್ರವೃತ್ತಿಯಿಂದಾಗಿ ಅವರು ಸಾಧಕರಾಗಿ ಮೂಡಿಬರಲು ಸಾಧ್ಯವಾಗಿದೆ ಎಂದರು.

137 ವರ್ಷಗಳ ಇತಿಹಾಸವಿರುವ ಸಂತ ಅಲೋಶಿಯಸ್‌ ಕಾಲೇಜಿನ ಬಗ್ಗೆ ಬಹಳಷ್ಟು ವರ್ಷಗಳ ಹಿಂದೆಯೇ
ತಿಳಿದುಕೊಂಡಿದ್ದೇನೆ. ಸಹೋದ್ಯೋಗಿಗಳಾಗಿದ್ದವರಲ್ಲಿ ಬಹಳಷ್ಟು ಮಂದಿ ಈ ಶಿಕ್ಷಣ ಸಂಸ್ಥೆಯವರಲ್ಲಿ ಕಲಿತವರು ಇದ್ದರು. ಇದೊಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.

ಸ್ಟಾರ್‌ ಪದವಿ ಪ್ರದಾನ ಭಾರತ ಸರಕಾರದ ಜೈವಿಕ ತಂತ್ರಜ್ಞಾನ ವಿಭಾಗ ನೀಡಿರುವ ಸ್ಟಾರ್‌ ಪದವಿಯನ್ನು ಪ್ರೊ| ಸಿ.ಎನ್‌.ಆರ್‌. ರಾವ್‌ ಅವರು ಸಂತ ಅಲೋಶಿಯಸ್‌ ಕಾಲೇಜಿಗೆ ಪ್ರದಾನ ಮಾಡಿದರು. ಸಂತ ಅಲೋಶಿಯಸ್‌ ಕಾಲೇಜು ಸ್ಟಾರ್‌ ಪದವಿ ಪಡೆದಿರುವ 20 ಕಾಲೇಜುಗಳಲ್ಲಿ ಒಂದಾಗಿದೆ.

Advertisement

ಸಂತ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ಫಾ| ಡೈನಿಸಿಯಸ್‌ ವಾಸ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶು
ಪಾಲ ಪ್ರವೀಣ್‌ ಮಾರ್ಟಿಸ್‌ ಸ್ವಾಗತಿಸಿದರು. ಕುಲಸಚಿವ ಪೊ| ನರಹರಿ, ಫಾ| ಪ್ರದೀಪ್‌ ಸಿಕ್ವೇರಾ, ರಸಾಯನಶಾಸ್ತ್ರ ವಿಭಾಗದ ಡಾ| ರೋನಾಲ್ಡ್‌ ನಜ್ರೆತ್‌ ಉಪಸ್ಥಿತರಿದ್ದರು.

ಇನ್‌ಸ್ಟ್ರೆಮೆಂಟೇಶನ್‌ ಸೆಂಟರ್‌ಗೆ ಪ್ರೊ| ಸಿ.ಎನ್‌.ಆರ್‌. ರಾವ್‌ ಹೆಸರು ಸಂತ ಅಲೋಶಿಯಸ್‌ ಕಾಲೇಜಿನ ಇನ್‌ಸ್ಟ್ರೆಮೆಂಟೇಶನ್‌ ಸೆಂಟರ್‌ನ್ನು ಪ್ರೊ| ಸಿ.ಎನ್‌.ಆರ್‌. ರಾವ್‌ ಇನ್‌ಸ್ಟ್ರೆಮೆಂಟೇಶನ್‌ ಸೆಂಟರ್‌ ಎಂದು ನಾಮಕರಣ ಮಾಡಲಾಗಿದ್ದು ಪ್ರೊ| ರಾವ್‌ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಹಾರಾರ್ಪಣೆಗೈದು, ಸ್ಮರಣಿಕೆ, ಅಭಿನಂದನಾ ಪತ್ರವನ್ನು ನೀಡಿ ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next