Advertisement
ಗುರುಃ ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಭಾರತೀಯ ಸಂಸ್ಕೃತಿಯಲ್ಲಿ ತಂದೆ – ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡಿದ್ದಾರೆ. ಮನಸ್ಸಿಗೆ ಕವಿದ ಅಜ್ಞಾನವೆಂಬ ಕತ್ತಲೆಯನ್ನು ವಿದ್ಯೆಯ ಮೂಲಕ, ಸುಜ್ಞಾನದ ಬೆಳಕಿನತ್ತ ಕೊಂಡೊಯ್ದು, ಆತ್ಮಸ್ಥೈರ್ಯ ಉಂಟಾಗುವಂತೆ ಮಾಡುವ ಶಕ್ತಿ ಗುರುವಿನಲ್ಲಿದೆ. ಯಾವುದೇ ಕ್ಷೇತ್ರವಾದರೂ ಸಾಧನೆಯಲ್ಲಿ ಯಶಸ್ಸು ಗಳಿಸಲು ಗುರುವಿನ ಸತತ ಮಾರ್ಗದರ್ಶನದ ಅಗತ್ಯವಿದೆ.
Related Articles
Advertisement
ಉತ್ತಮ ಬದುಕಿನ ಪರಿಜ್ಞಾನಕ್ಕಾಗಿ ನಾವು ಗುರುವಿಗೆ ಸದಾ ಋಣಿಯಾಗಿರಬೇಕು. ಮಕ್ಕಳಲ್ಲಿ ಹುದುಗಿರುವ ಸಾಮರ್ಥ್ಯದ ಹೆಚ್ಚಳಕ್ಕೆ ಉತ್ತಮ ವಾತಾವರಣ, ಸಂಸ್ಕಾರಬೇಕು. ಕಲಿಕೆಯ ವಿಷಯವು ಬರಿಯ ತಿಳಿವಳಿಕೆ ಮಾತ್ರ ಅಲ್ಲ, ವಿಷಯವನ್ನು ಹೆಚ್ಚು ಅರ್ಥಪೂರ್ಣ ಮಾಡಬಲ್ಲ ವ್ಯಕ್ತಿತ್ವದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಯು ಮುಂದಿನ ಶಿಕ್ಷಣದ ಬಗ್ಗೆ ಯೋಚಿಸದೆ, ಪ್ರಸ್ತುತ ಕಲಿಕೆಯಲ್ಲಿ ಗಮನವಿತ್ತರೆ ಸಹನೆ, ಶ್ರದ್ಧೆ ಹಾಗೂ ಆತ್ಮವಿಶ್ವಾಸ ಉಂಟಾಗುತ್ತದೆ. ತಾನೇ ಸ್ವತಃ ಕಲಿಯುವಂತೆ ಶಿಷ್ಯರನ್ನು ಪ್ರೇರೇಪಿಸುವ ಮೂಲಕ, ಎಲ್ಲರಲ್ಲೂ ಚೈತನ್ಯ ಮೂಡಿಸುವ ಸಾಕಾರ ರೂಪ ಗುರು.
ಶಿಕ್ಷಕರ ದಿನಾಚರಣೆ ಕೇವಲ ವರ್ಷಕ್ಕೊಮ್ಮೆ ಮಾತ್ರ ಅಲ್ಲ. “ಆಚಾರ್ಯ ದೇವೋಭವ’ ಎಂಬ ನಮ್ಮ ಸಂಸ್ಕೃತಿ ಮಾತು – ಕೃತಿಗಳೆರಡರಲ್ಲೂ ಇರಬೇಕು. ನಿತ್ಯ ಜೀವನದಲ್ಲಿ ವಿವೇಕ ನಮ್ಮ ಸ್ನೇಹಿತನಾಗಬೇಕು.ಇಂದು ಉದ್ಯೋಗ ಗುರಿಯಾಗಿರಿಸಿಕೊಂಡು, ಶಿಕ್ಷಕ ವೃತ್ತಿಯನ್ನು ಅರಸಿ ಬರುವವರೇ ಹೆಚ್ಚು. ಇಲ್ಲೂ ಮನೆಪಾಠಗಳಿಗೆ ಹೆಚ್ಚಿನ ಗಮನ. ಇದಕ್ಕೆ ಸರಿಯಾಗಿ ರಜೆಯಲ್ಲೂ ಸರಕಾರದ ಕೆಲಸಗಳಿಗೆ ಶಿಕ್ಷಕರನ್ನು ಬಳಸುವುದರಿಂದ ಶಿಕ್ಷಕರು ತಮ್ಮ ವೃತ್ತಿಗೆ ನ್ಯಾಯ ದೊರಕಿಸುವಲ್ಲಿ ಎಡವುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ತಮ್ಮ ಸ್ಥಾನ-ಮಾನ- ಗೌರವಗಳನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಇದಕ್ಕೆ ಅಪವಾದವಾಗಿ ಮಾದರಿ ಶಿಕ್ಷಕರು ಇದ್ದರೂ, ಅವರಿಗೆ ಸರಿಯಾದ ಮಾನ್ಯತೆ ಲಭಿಸುತ್ತಿಲ್ಲ. “ಅರ್ಧ ಕಲಿತವರಿಗೆ ಅಬ್ಬರ ಜಾಸ್ತಿ’ ಎಂಬ ಗಾದೆಯಂತೆ, ಆಧುನಿಕ ಶಿಕ್ಷಣದಲ್ಲಿ, ಆದರ್ಶವನ್ನು ಗಾಳಿಗೆ ತೂರಿ ಬದುಕುವುದಕ್ಕೆ ಶಿಕ್ಷಣ ಎಂಬಂತಾಗಿದೆ. ವಿದ್ಯೆಯಿಂದ ಬುದ್ಧಿ ವಿಕಾಸವಾಗಿಲ್ಲ. ವಿನಯವನ್ನು ತಂದು ಕೊಡುತ್ತಿಲ್ಲ. ಗುರುಗಳಿಗೆ ವಿಧೇಯರಾಗಿಲ್ಲ. ಆದ್ದರಿಂದ ಅರ್ಹತೆಯ ಆಧಾರದ ಮೇಲೆಯೇ ಶಿಕ್ಷಕರ ನೇಮಕವಾಗಬೇಕು. ತರಗತಿಗಳಲ್ಲಿ ಶಿಕ್ಷಕರ ನಡೆ-ನುಡಿ ಇನ್ನೂ ಹೆಚ್ಚು ಪಾರದರ್ಶಕವಾಗಿರಬೇಕು. ಅವರು ತಮ್ಮ ಹೇಳಿಕೆ – ಮಾತುಗಳಿಗೆ ಬದ್ಧರಾಗಿರಬೇಕು. ಆಗ ಮಾತ್ರ ಶಿಕ್ಷಕರು ವಿದ್ಯಾರ್ಥಿಗಳಿಂದ ಗೌರವಿಸಲ್ಪಡುತ್ತಾರೆ. ಎಷ್ಟೇ ದಾನ ಮಾಡಿದರೂ ಕಡಿಮೆಯಾಗದಂತಹ ದಾನವೇ ವಿದ್ಯಾ ದಾನ. ಇದರಿಂದ ಸಿಕ್ಕ ಸುಖವು ಚಿರನೂತನವಾಗಿರುತ್ತದೆ. ತಾಯಿ ಇಲ್ಲದೇ ನಾವು ಪ್ರಪಂಚಕ್ಕೆ ಬರಲು ಸಾಧ್ಯವಿಲ್ಲ. ಹಾಗೆಯೇ ಗುರುವಿನ ಆಶೀರ್ವಾದ ಇಲ್ಲದಿದ್ದರೆ ನಾವು ಉದ್ಧಾರವಾಗಲು ಸಾಧ್ಯವಿಲ್ಲ. ನಮ್ಮ ಯಶಸ್ಸಿಗೆ ಕಾರಣರಾದ ಮಾರ್ಗದರ್ಶಕರನ್ನು ನಾವು ಮರೆಯಲು ಸಾಧ್ಯವೇ? ಶಿಕ್ಷಣ – ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಶಾಲಾ ಮಟ್ಟದಲ್ಲಿ ಜಾಗೃತಿಯಾದರೆ ರಾಷ್ಟ್ರದ ಆರೋಗ್ಯ ಚಿತ್ರಣ ಬದಲಾಗುತ್ತದೆ. ಶಿಕ್ಷಣ ಸಂಸ್ಥೆ ದೇಶದ ಜನಜೀವನವನ್ನೇ ಸುವ್ಯವಸ್ಥೆ ಗೊಳಿಸುತ್ತದೆ. ಶಿಕ್ಷಕರು ಭ್ರಷ್ಟರಾದರೆ ಸಮಸ್ತ ಜನಾಂಗವೇ ನಾಶವಾಗುತ್ತದೆ. ಆದ್ದರಿಂದ ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಸಾವಿತ್ರಿ ರಾಮರಾವ್