Advertisement

ಆಡಳಿತ ಯಂತ್ರ ಚುರುಕಾಗಲಿ: ಕೋವಿಡ್‌ ನಿಯಂತ್ರಣ ಮಧ್ಯೆ ಅಭಿವೃದ್ಧಿಯೂ ಬೇಕು

01:29 AM Sep 04, 2020 | Hari Prasad |

ರಾಜ್ಯದಲ್ಲಿ ಕೋವಿಡ್‌-19 ವೈರಾಣು ಹರಡುವಿಕೆ ನಡುವೆಯೇ, ಜನಜೀವನ ಸಹಜ ಸ್ಥಿತಿಗೆ ಮರಳುತ್ತಲೇ ಆಡಳಿತ ಯಂತ್ರಕ್ಕೂ ವೇಗ ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೂಚನೆ ನೀಡಿರುವುದು ಸ್ವಾಗತಾರ್ಹ.

Advertisement

ಜಗತ್ತನ್ನೇ ಕಾಡುತ್ತಿರುವ ಕೋವಿಡ್‌-19 ಸಾಂಕ್ರಾಮಿಕ ರೋಗ ಇನ್ನಷ್ಟು ವ್ಯಾಪಕ­ವಾಗಿ ಹರಡದಂತೆ ತಡೆಯಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಜತೆಗೆ ಸಹಜ ಜೀವನಕ್ಕೆ ಮರಳುತ್ತಿರುವ ಜನರಿಗೆ ದೈನಂದಿನ ಅಗತ್ಯ ಸೇವೆ ಒದಗಿಸು­ವುದು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಾಂಗಕ್ಕೆ ಚುರುಕು ಮುಟ್ಟಿಸುವ ಕಾರ್ಯ ಸೂಕ್ತವೆನಿಸಿದೆ.

ಸೋಂಕಿನೊಂದಿಗೆ ಬದುಕು ಅನಿವಾರ್ಯವೆಂಬುದು ಅರಿವಾಗುತ್ತಿದ್ದಂತೆಯೇ ಲಾಕ್‌ಡೌನ್‌ ಇತರ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ. ಸೆ.1ರಿಂದ ಅನ್‌ಲಾಕ್‌-4ರ ಮಾರ್ಗಸೂಚಿಯಡಿ ಬಹುತೇಕ ನಿರ್ಬಂಧ ಸಡಿಲಿಸಲಾಗಿದೆ. ಅದರಂತೆ ಆಡಳಿತ ಯಂತ್ರವು ಕ್ರಿಯಾಶೀಲವಾಗಿ ಮುಂದುವರಿಯುವುದು ಅನಿವಾರ್ಯ.

ಪ್ರಸಕ್ತ ಸಾಲಿನ ಬಜೆಟ್‌ ಮಂಡನೆಯಾದ ವಿಧಾನಮಂಡಲ ಅಧಿವೇಶನ ಮುಕ್ತಾಯ­ವಾದ ಮರುದಿನವೇ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಬಜೆಟ್‌ ಘೋಷಿತ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಭಾರೀ ಹಿನ್ನಡೆಯಾಗಿದೆ. ಪ್ರಸ್ತುತ 2020-21ನೇ ಸಾಲಿನಲ್ಲಿ ಐದು ತಿಂಗಳುಗಳು ಪೂರ್ಣಗೊಂಡಿದ್ದು, ಬಹುಪಾಲು ಇಲಾಖೆಗಳು ಇನ್ನಷ್ಟೇ ಬಜೆಟ್‌ ಕಾರ್ಯಕ್ರಮಗಳ ಜಾರಿಗೆ ಮುಂದಾಗಬೇಕಿದೆ.

Advertisement

ಅಂದರೆ 12 ತಿಂಗಳುಗಳಲ್ಲಿ ಯೋಜನೆ ರೂಪಿಸಿ, ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಿ ಪೂರ್ಣಗೊಳಿಸಬೇಕಾದ ಅಷ್ಟೂ ಪ್ರಕ್ರಿಯೆಗಳು ಕೇವಲ ಏಳು ತಿಂಗಳುಗಳಲ್ಲಿ ಕಾರ್ಯಗತವಾಗಬೇಕಿದೆ. ಪ್ರಮುಖವಾಗಿ ಮೂಲ ಸೌಕರ್ಯ, ಗ್ರಾಮೀಣಾಭಿವೃದ್ದಿ, ಶಿಕ್ಷಣ, ಸಮಾಜ ಕಲ್ಯಾಣ, ನೀರಾವರಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕೈಗಾರಿಕೆ, ವಸತಿಯಂತಹ ಮಹತ್ವದ ಇಲಾಖೆಗಳು ಸಮರೋಪಾದಿಯಲ್ಲಿ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ, ಚಾಲ್ತಿಯಲ್ಲಿರುವ ಕಾರ್ಯಕ್ರಮಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಖುದ್ದು ಮುಖ್ಯಮಂತ್ರಿಗಳೇ ಸೂಚನೆ ನೀಡಿರುವುದು ಉತ್ತಮವಾಗಿದೆ.

ಮೊದಲಿಗೆ ಸಚಿವರು ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿರುವುದರಿಂದ ವಸ್ತುಸ್ಥಿತಿ ಅರಿಯುವ ಜತೆಗೆ ಮುಂದಿನ ಕಾರ್ಯಯೋಜನೆಗಳು, ಅದನ್ನು ಕರಗತಗೊಳಿಸುವ ಕ್ರಮದ ಬಗ್ಗೆಯೂ ಸಚಿವರು ಸ್ಪಷ್ಟ ಸೂಚನೆ ನೀಡಲು ನೆರವಾಗಲಿದೆ. ಅದರ ಬೆನ್ನಲ್ಲೇ ಜಿಲ್ಲಾ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸುವಂತೆ ಆದೇಶಿಸಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ವೇಗ ಸಿಗಲಿದೆ.

ಆ ಮೂಲಕ ಸಚಿವರಿಗೆ ಬಾಕಿ ಉಳಿದಿರುವ ಏಳು ತಿಂಗಳುಗಳ ಒಳಗೆ ಬಜೆಟ್‌ ಕಾರ್ಯ­ಕ್ರಮ­ಗಳ ಅನುಷ್ಠಾನಕ್ಕೆ ಪೂರಕವಾಗಿ ಕ್ರಿಯಾ ಯೋಜನೆಯನ್ನು ಪರಿಷ್ಕರಿಸಿಕೊಂಡು ಕಾಲಮಿತಿಯೊಳಗೆ ಹಂತ ಹಂತವಾಗಿ ಅನುದಾನ ಬಳಕೆ, ಯೋಜನೆಗಳ ಅನುಷ್ಠಾನಕ್ಕೂ ಅನುಕೂಲವಾಗಲಿದೆ.

ಸೆ. 21ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸಚಿವರಿಗೆ ತಮ್ಮ ಖಾತೆಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗಲಿದೆ. ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಅಧಿವೇಶನ ಆರಂಭಕ್ಕೂ ಮುನ್ನಾ ಇಲಾಖಾವಾರು ಸಭೆ ನಡೆಸಲು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಸಿಇಒಗಳೊಂದಿಗೆ ವೀಡಿಯೋ ಸಂವಾದ ನಡೆಸಲು ಚಿಂತಿಸಿರುವುದು ಸಹ ಸಚಿವರು ಇನ್ನಷ್ಟು ಬದ್ಧತೆಯಿಂದ ಕಾರ್ಯಪ್ರವೃತ್ತರಾಗಲು ಪ್ರೇರಣೆ ನೀಡಿದಂತಾಗಬಹುದು.

ಒಟ್ಟಾರೆ ಕೋವಿಡ್‌-19ರೊಂದಿಗೆ ಬದುಕುವ ಜತೆಗೆ ವೈರಾಣು ಒಡ್ಡಿರುವ ಸವಾಲನ್ನೇ ಅವಕಾಶವಾಗಿ ಪರಿವರ್ತಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿಯವರು ‘ಆತ್ಮನಿರ್ಭರ ಭಾರತ’ಕ್ಕೆ ಕರೆ ನೀಡಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next