ಬೆಂಗಳೂರು: ವಂಚನೆ, ಕಿಡ್ನಾಪ್, ಬ್ಲಾಕ್ ಅಂಡ್ ವೈಟ್ ದಂಧೆ ಪ್ರಕರಣಗಳ ಆರೋಪಿ ಮಾಜಿ ಕಾರ್ಪೋರೇಟರ್ ವಿ. ನಾಗರಾಜುವಿನ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.
ಅಮಾನ್ಯಗೊಂಡ ನೋಟು ಬದಲಾವಣೆ ಕುರಿತಂತೆ ನಾಗರಾಜ್ ನಿವಾಸದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಿಕ್ಕಿರುವ ಪ್ರಕರಣದ ಬಗ್ಗೆ ಇ.ಡಿ ಅಕಾರಿಗಳು ಮಾಹಿತಿ ಸಂಗ್ರಹಿಸಿದ್ದು ಜೂನ್ ಮೊದಲ ವಾರದಲ್ಲಿ ತನಿಖೆ ಆರಂಭಿಸುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಬಂಧನಕ್ಕೊಳಗಾಗುವ ಮುನ್ನ ನಾಗ ಅಜ್ಞಾತ ಸ್ಥಳದಿಂದ ತಾನು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹೊಂದಿದರ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ಮಾಧ್ಯಮಕ್ಕೆ ಬಿಡುಗಡೆಮಾಡಿರುವುದನ್ನೇ ತನಿಖೆಗೆ ಸಾಕ್ಷಿಯನ್ನಾಗಿ ಜಾರಿನಿರ್ದೇಶನಾಲಯ ಪರಿಗಣಿಸಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಏಪ್ರಿಲ್ 14ರಂದು ನಾಗನ ಮನೆಯಲ್ಲಿ ದೊರೆತ 14.80 ಕೋಟಿ ರೂ. ಕಪ್ಪುಹಣ ಸಂಬಂಧ ಶೇ 85 ರಷ್ಟು ದಂಡ ತೆರಬೇಕಾಗಿದೆ. ಒಂದು ವೇಳೆ ಹಣ ಪಾವತಿಸದಿದ್ದರೆ ಆತನ ಒಟ್ಟಾರೆ ಆಸ್ತಿ ಮೌಲ್ಯವನ್ನು ಪರಿಗಣಿಸಿ ದಂಡ ಪಾವತಿಯಮೌಲ್ಯದಷ್ಟು ಆಸ್ತಿಯನ್ನು ಜಫ್ತಿ ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಗೆ ಬಾರದ ನಾಗನ ಪತ್ನಿ!: ನಾಗನ ನಿವಾಸದ ಮೇಲೆ ದಾಳಿ ನಡೆಸಿದ ಸಂಧರ್ಭದಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದ ನಾಗನ ಪತ್ನಿ ಲಕ್ಷ್ಮೀಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆಕೆ ಇದುವರೆಗೂ ಪೊಲೀಸರ ಮುಂದೆ ಹಾಜರಾಗಿಲ್ಲ. ಪ್ರಕರಣ ಸಂಬಂಧ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಶಾಸಕನಾಗಲೆಂದು ಹೀಗೆ ಮಾಡಿದ್ದೇನೆ ಬಿಟ್ಟುಬಿಡಿ
ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ನಾಗರಾಜು ತನಿಖಾಕಾರಿಗಳ ಮುಂದೆ ಹೈಡ್ರಾಮವನ್ನೇ ಸೃಷ್ಟಿಸುತ್ತಿದ್ದಾನೆ. ಸೆಲ್‌ನೊಳಗೆ ವಿಚಿತ್ರವಾಗಿ ವರ್ತಿ ಸುವುದು, ಒಬ್ಬನೇ ಪೋನ್‌ನಲ್ಲಿ ಮಾತನಾಡುವುದು, ಹುಚ್ಚನಂತೆ ವರ್ತಿಸಿ ಪೊಲೀಸರಿಗೆ ಅಂಗಲಾಚುತ್ತಿದ್ದಾನೆ. ಈ ಮೂಲಕ ಕಿರಿಕಿರಿ ಸೃಷ್ಟಿಸಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿ ಸುತ್ತಿದ್ದಾನೆ. ಎಂದು ಹೇಳಲಾಗಿದೆ. ಶಾಸಕನಾಗುವ ಆಸೆಯಿಂದ ತಪ್ಪು ಮಾಡಿದ್ದೇನೆ ಇದೊಂದು ಬಾರಿ ಕ್ಷಮಿಸಿ ಎಂದು ಗೋಳಾಟ ನಡೆಸುತ್ತಾನೆ ಎಂದು ಪೊಲೀಸ್ ಅಕಾರಿಯೊಬ್ಬರು ತಿಳಿಸಿದರು.