ಬೆಂಗಳೂರು: ರಾಜ್ಯದ ಕೈಗಾರಿಕೆಗಳಲ್ಲಿ ಉತ್ಪತ್ತಿ ಆಗುವ ಅಪಾಯಕಾರಿ ತ್ಯಾಜ್ಯವನ್ನು ಕೈಗಾರಿಕೆಗಳು ಎಲ್ಲಿ ವಿಲೇವಾರಿ ಮಾಡುತ್ತಿವೆ ಮತ್ತು ಯಾರು ಇದರ ಮೇಲ್ವಿಚಾರಣೆ ಮಾಡುತ್ತಾರೆ. ಎಲ್ಲಿಂದ -ಎಲ್ಲಿಗೆ ಅಪಾಯಕಾರಿ ತ್ಯಾಜ್ಯ ಸಾಗಾಣಿಕೆ ಆಗುತ್ತದೆ ಎನ್ನುವುದು ಸೇರಿದಂತೆ ಸಮಗ್ರ ಮಾಹಿತಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲಿಸಲು ‘ಇ- ಮ್ಯಾನಿಫೆಸ್ಟ್’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
ರಾಜ್ಯದಲ್ಲಿ ಕೈಗಾರಿಕೆಗಳ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಮಾಹಿತಿಯ ಬಗ್ಗೆ ಕೆಎಸ್‌ಪಿಸಿಬಿ ಇಲ್ಲಿಯವರೆಗೆ ಲಿಖಿತ ರೂಪದ ದಾಖಲೆ ಸಂಗ್ರಹಿಸುತ್ತಿತ್ತು. ಇದು ನಾಪತ್ತೆ ಆಗುವ ಮತ್ತು ಮಾಹಿತಿಯನ್ನು ತಿದ್ದುವ ಸಾಧ್ಯತೆಯೂ ಇತ್ತು. ಅಲ್ಲದೆ, ಇದರಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದರಲ್ಲೂ ಹಿನ್ನಡೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಕೈಗಾರಿಕೆಗಳಲ್ಲಿ ಉತ್ಪತ್ತಿ ಆಗುವ ಅಪಾಯಕಾರಿ ತ್ಯಾಜ್ಯವನ್ನು ಕೆಎಸ್‌ಪಿಸಿಬಿಯ ಅಧಿಕೃತ ವೆಬ್‌ಸೈಟ್‌ನ ಇ- ಮ್ಯಾನಿಫೆಸ್ಟ್ ನಲ್ಲಿ ಕಡ್ಡಾಯವಾಗಿ ದಾಖಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಅವರು ಆದೇಶ ಮಾಡಿದ್ದಾರೆ.
ಅಪಾಯಕಾರಿ ತ್ಯಾಜ್ಯ ವಿಲೇವಾರಿ -2016 ಅನ್ವಯ ಈ ಆದೇಶ ಮಾಡಲಾಗಿದ್ದು, ಒಮ್ಮೆ ಕೈಗಾರಿಕೆಗಳು ಕೆಎಸ್‌ಪಿಸಿಬಿಯ ಇ- ಮ್ಯಾನಿಫೆಸ್ಟ್ ನಲ್ಲಿ ಮಾಹಿತಿ ದಾಖಲಿಸಿದ ನಂತರ ಕೆಎಸ್‌ಪಿಸಿಬಿಯ ವಲಯ ಮಟ್ಟದ ಪರಿಸರ ಅಧಿಕಾರಿಗಳು ಮಾಹಿತಿ ಪರಿಶೀಲನೆ ಮಾಡಿ ಅನುಮೋದನೆ ನೀಡಲಿದ್ದಾರೆ. ಆಯಾ ಪ್ರದೇಶದಲ್ಲಿರುವ ಕೈಗಾರಿಕೆಗಳ ಮಾಹಿತಿ ದಾಖಲಿಸಲು ಕ್ರಮ ವಹಿಸುವಂತೆ ವಲಯ ಮಟ್ಟದ ಪರಿಸರ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ:ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಎನ್ ಎಸ್ ಎಸ್ ಘಟಕ ಕಡ್ಡಾಯ – ಡಾ. ನಾರಾಯಣಗೌಡ
ಈ ಪದ್ಧತಿ ಜಾರಿ ಮಾಡುವುದರಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಹಾಯವಾಗಲಿದೆ. ಅಪಾಯಕಾರಿ ತ್ಯಾಜ್ಯದ ವಿಲೇವಾರಿಯ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗಲಿದೆ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ತಿಳಿಸಿದ್ದಾರೆ.