ಬೆಳಗಾವಿ: ತಮಿಳುನಾಡು ಹಾಗೂ ದಿಲ್ಲಿ ಸರಕಾರದ ನಿಯಮಗಳನ್ನು ಪರಿಶೀಲಿಸಿ, ಅದರ ಮೇರೆಗೆ ಕರ್ನಾಟಕದಲ್ಲೂ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ಪರವಾನಿಗೆ ಕಡ್ಡಾಯಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಗುರುವಾರ ಪರಿಷತ್ ಕಲಾಪದಲ್ಲಿ ಆಗ್ರಹಿಸಿದರು.
ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಸಾರಿಗೆ ಸಚಿವರ ಗಮನ ಸೆಳೆದರು.
ಮಂಗಳೂರು ನಗರದಲ್ಲಿ 8 ಸಾವಿರಕ್ಕೂ ಅಧಿಕ ರಹದಾರಿ ಮತ್ತು ಪರವಾನಿಗೆ ಇರುವ ಆಟೋ ರಿಕ್ಷಾಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಎಲೆಕ್ಟ್ರಿಕಲ್ ರಿಕ್ಷಾಗಳು ಪರವಾನಿಗೆ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯುತ್ ಚಾಲಿತ ಆಟೋರಿûಾಗಳು ಕಾರ್ಯ ನಿರ್ವಹಿಸುತ್ತಿದ್ದುದರಿಂದ ಸೂಕ್ತ ರಿಕ್ಷಾ ನಿಲ್ದಾಣಗಳಿಲ್ಲದೆ ಪರದಾಡುವ ಸಂದರ್ಭ ಒದಗಿದೆ ಎಂದರು.
ನಗರದಲ್ಲಿ 500ಕ್ಕೂ ಅಧಿಕ ರಿಕ್ಷಾ ನಿಲ್ದಾಣಗಳ ಬೇಡಿಕೆ ಇದ್ದರೂ 150 ರಿಕ್ಷಾ ನಿಲ್ದಾಣಗಳು ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಒದಗಿಸಿವೆ. ಇದರಿಂದ ರಿûಾ ಚಾಲಕರಿಗೆ ಬಾಡಿಗೆ ಇಲ್ಲದೆ ತಮ್ಮ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಿûಾ ಚಾಲಕರು ತಮ್ಮ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.