Advertisement

“ಇ-ಕ್ಲಾಸ್‌’ಫ‌ಸ್ಟ್‌ ಕ್ಲಾಸ್‌

06:13 PM Jun 19, 2017 | Harsha Rao |

ಸೆಡಾನ್‌ ಕಾರು ಪ್ರಿಯರಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿ ಭಾರತದಲ್ಲೇ ತಯಾರಾದ ಪ್ರತಿಷ್ಠಿತ ಮರ್ಸಿಡಿಸ್‌ ಬೆಂಜ್‌ ಕಂಪನಿಯ “ಲಾಂಗ್‌ ವ್ಹೀಲ್‌ಬೇಸ್‌ ಇ- ಕ್ಲಾಸ್‌ 220ಡಿ’ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಒಂದರ್ಥದಲ್ಲಿ ಎಲ್ಲ ಕಾರು ಪ್ರಿಯರ ನಿದ್ದೆಗೆಡಿಸಿರುವ ಸುಂದರಿ ಇದು. 

Advertisement

“ಇ-ಕ್ಲಾಸ್‌ 220ಡಿ’ ಸೆಡಾನ್‌ ಹೊರನೋಟಕ್ಕಷ್ಟೇ ಆಕರ್ಷಕವಾಗಿ ಕಂಗೊಳಿಸದೆ ಉತ್ತಮ ಕಾರ್ಯಕ್ಷಮತೆಗೆ ಪೂರಕವಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಜೊತೆಗೆ ವಿಶೇಷವಾಗಿ ಅಭಿವೃದ್ಧಿಪಡಿಸಿದ ಎಂಜಿನ್‌ ಅಳವಡಿಸಲಾಗಿದೆ. ಸುಖಕರ, ಸುರಕ್ಷಿತ ಚಾಲನೆ ಹಾಗೂ ಪ್ರಯಾಣ ವ್ಯವಸ್ಥೆ ಹೊಂದಿರುವುದು ಕಾರಿನ ವೈಶಿಷ್ಟé ಹೆಚ್ಚಿಸಿದೆ.

ಮರ್ಸಿಡಿಸ್‌ ಬೆಂಜ್‌ ಕಾರಿನ “ಇ-ಕ್ಲಾಸ್‌’ ಮಾದರಿಯ ಸೆಡಾನ್‌ಗೆ ವಿಶ್ವದಾದ್ಯಂತ ವಿಶೇಷ ಮಾನ್ಯತೆ ಇದೆ. ಈ ಶ್ರೇಣಿಯ ವಾಹನಗಳು ಕೇವಲ ಪ್ರಯಾಣ ಸೌಕರ್ಯಕ್ಕಷ್ಟೇ ಅಲ್ಲದೇ ಸಮಾಜದಲ್ಲಿ ಗೌರವ, ಘನತೆಯ ಪ್ರತೀಕವಾಗಿಯೂ ಪರಿಗಣಿಸುವಷ್ಟರ ಮಟ್ಟಿಗೆ ಆಕರ್ಷಣೆ ಪಡೆದಿತ್ತು. ಹಾಗಾಗಿ ಈ ಶ್ರೇಣೆಯ ವಾಹನಗಳಿಗೆ ವರ್ಷಗಳು ಕಳೆದರೂ ಬೇಡಿಕೆ ಏರುಮುಖವಾಗಿಯೇ ಇದೆ.

ಬಲ ಭಾಗದಲ್ಲಿ ಸ್ಟೇರಿಂಗ್‌
ಜಗತ್ತಿನಾದ್ಯಂತ ಮರ್ಸಿಡಿಸ್‌ ಬೆಂಜ್‌ನ “ಇ- ಕ್ಲಾಸ್‌ ಲಾಂಗ್‌ ವ್ಹೀಲ್‌ ಬೇಸ್‌’ (ಎರಡು ಚಕ್ರಗಳ ನಡುವಿನ ಅಂತರ) ಕಾರುಗಳು ಎಡಬದಿಯಲ್ಲಿ ಸ್ಟೇರಿಂಗ್‌ ಹೊಂದಿರುತ್ತವೆ. ಆದರೆ ಭಾರತದ ಕಾರುಪ್ರಿಯರ ಅನುಕೂಲಕ್ಕಾಗಿ ಹಾಗೂ ದೇಶದ ಸಂಚಾರ ವ್ಯವಸ್ಥೆಗೆ ಪೂರಕವಾಗಿ ಸ್ಟೇರಿಂಗ್‌ ಅನ್ನು ಬಲಭಾಗದಲ್ಲಿ ಅಳವಡಿಸಲಾಗಿದ್ದು, ಅದಕ್ಕೆ ಪೂರಕವಾಗಿ ಒಳವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗಿದೆ. ಹಾಗಾಗಿ ಲಾಂಗ್‌ವ್ಹೀಲ್‌ ಬೇಸ್‌ ಇ-ಕ್ಲಾಸ್‌ ಕಾರ್‌ಅನ್ನು ಭಾರತೀಯ ಸೆಡಾನ್‌ ಪ್ರಿಯರು ಇತರೆ ಕಾರಿನಂತೆ ಚಾಲನೆ ಮಾಡಬಹುದಾಗಿದೆ.

ಭಾರತದಲ್ಲೇ ತಯಾರಿ
“ಇ-ಕ್ಲಾಸ್‌ 220ಡಿ’ ಕಾರು ಭಾರತೀಯರಿಗೆಂದೇ ವಿಶೇಷವಾಗಿ ವಿನ್ಯಾಸಗೊಂಡಿರುವ ಜತೆಗೆ ಭಾರತದಲ್ಲೇ ತಯಾರಾಗುವ ಮೂಲಕ “ಮೇಡ್‌ ಇನ್‌ ಇಂಡಿಯಾ’ ಎಂಬ ಹಿರಿಮೆಗೆ ಪಾತ್ರವಾಗಿದೆ. ಮರ್ಸಿಡಿಸ್‌ ಬೆಂಜ್‌ ಕಂಪನಿಯು ಪುಣೆ ನಗರದ ಹೊರವಲಯದ ಚಾಕನ್‌ ಪ್ರದೇಶದಲ್ಲಿನ ವಿಶ್ವದರ್ಜೆಯ ಘಟಕದಲ್ಲೇ ಈ ಕಾರು ತಯಾರಾಗಿದೆ. ಕಾರಿನಲ್ಲಿ ಬಳಸಿರುವ ಶೇ.85ರಷ್ಟು ಉಪಕರಣಗಳು ದೇಶೀಯವಾಗಿಯೇ ಉತ್ಪಾದನೆಯಾಗಿದ್ದು, ಎಂಜಿನ್‌ ಕೂಡ ಇಲ್ಲಿಯೇ ತಯಾರಾಗುತ್ತಿದೆ.

Advertisement

ಹೊಸ ಎಂಜಿನ್‌
ಲಾಂಗ್‌ ವ್ಹೀಲ್‌ ಬೇಸ್‌ ಇ-ಕ್ಲಾಸ್‌ 220ಡಿ ಕಾರಿಗೆ “ಒಎಂ 654′ ಹೆಸರಿನ ಅತ್ಯಾಧುನಿಕ ಎಂಜಿನ್‌ ಅಳವಡಿಸಲಾಗಿದೆ. ಎಂಜಿನ್‌ ಅಲ್ಯೂಮಿನಿಯಂ ಕವಚದಿಂದ ಕೂಡಿರುವುದರಿಂದ ಎಂಜಿನ್‌ ಕಾರ್ಯನಿರ್ವಹಣೆಯಲ್ಲಿದ್ದಾಗ ಅದರಿಂದ ಹೊರಬರುವ ಶಬ್ದ ಕಡಿಮೆ ಇರಲಿದೆ. ಪೆಟ್ರೋಲ್‌ ಕಾರ್‌ ಮಾದರಿಯಲ್ಲಿ ಶಬ್ದರಹಿತ ಪ್ರಯಾಣ ಅನುಭವ ನೀಡುತ್ತದೆ. ಎಂಜಿನ್‌ ಲಘು ತೂಕದ್ದಾಗಿರುವುದರಿಂದ ಹೆಚ್ಚು ದಕ್ಷತೆ ಹೊಂದಿದೆ. ಜತೆಗೆ ನೆಕ್ಸ್ಟ್ ಜನರೇಷನ್‌ ಡೀಸೆಲ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಹೊಸ ಎಂಜಿನ್‌ ಶೇ.13ರಷ್ಟು ಕಡಿಮೆ ಪ್ರಮಾಣದಲ್ಲಿ ಡೀಸೆಲ್‌ ಬಳಸುವುದರಿಂದ ಆರ್ಥಿಕವಾಗಿ ಉಪಯುಕ್ತವಾಗಿದೆ. ಆ ಮೂಲಕ ಇನ್ನಷ್ಟು ಪರಿಸರಸ್ನೇಹಿ ವ್ಯವಸ್ಥೆಯನ್ನುಅಳವಡಿಸಿಕೊಳ್ಳಲು ಆದ್ಯತೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಸ್ಟೇರಿಂಗ್‌ನಲ್ಲಿ ಟಚ್‌ ಸೆನ್ಸಿಟಿವ್‌ ಸಿಸ್ಟಮ್‌
ವಿಶ್ವದಲ್ಲೇ ಪ್ರಥಮ ಬಾರಿಗೆ ಕಾರಿನ ಸ್ಟೇರಿಂಗ್‌ನಲ್ಲೇ ಟಚ್‌ ಸೆನ್ಸಿಟಿವ್‌ ಕಂಟ್ರೋಲ್‌ ಸಿಸ್ಟಂ ಅಳವಡಿಸಲಾಗಿದೆ. ಇದರಿಂದ ಸಂಗೀತ ಕೇಳಲು, ಬದಲಾಯಿಸಲು, ಮೊಬೈಲ್‌ ಕರೆಗಳನ್ನು ಸ್ವೀಕರಿಸಲು, ಇತರೆ ಆಯ್ದ ಸೇವೆಗಳನ್ನು ಚಾಲನೆ ಮಾಡುತ್ತಲೇ ಕೇವಲ ಟಚ್‌ ಸೆನ್ಸಿಟಿವ್‌ ಮೂಲಕ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ “ಇ-ಕ್ಲಾಸ್‌’ ಶ್ರೇಣಿಯ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಹೈ ರೆಸೊಲ್ಯೂಷ್‌ನ ನೆಕ್ಸ್ಟ್ ಜನರೇಷನ್‌ 12.3 ಇಂಚ್‌ನ ಸ್ಕ್ರೀನ್‌ ಅಳವಡಿಸಲಾಗಿದೆ.

ಕಾರು ಚಾಲನೆಯಾದ ಕೂಡಲೇ ಕೇವಲ 7.8 ಸೆಕೆಂಡ್‌ಗಳಲ್ಲಿ 0-100 ಕಿ.ಮೀ. (ಪ್ರತಿ ಗಂಟೆಗೆ) ವೇಗದಲ್ಲಿ ಚಲಿಸಲಿದೆ. ಗರಿಷ್ಠ ವೇಗ ಪ್ರತಿ ಗಂಟೆಗೆ 240 ಕಿ.ಮೀ. ಇದೆ. ಪ್ರಯಾಣಿಸುವವರ ಸುರಕ್ಷತೆಗಾಗಿ ಕಾರಿನಲ್ಲಿ ಒಟ್ಟು ಏಳು ಏರ್‌ಬ್ಯಾಗ್‌ ವ್ಯವಸ್ಥೆ ಇದೆ. ಪ್ಯಾನರೋಮ್ಯಾಟಿಕ್‌ ಸ್ಲೆ„ಡಿಂಗ್‌ ಸನ್‌ರೂಫ್ ವ್ಯವಸ್ಥೆಯಿದ್ದು, ಹವಾಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಥರ್ಮೋಟ್ರೊನಿಕ್‌ ಆಟೋಮ್ಯಾಟಿಕ್‌ ನಿಯಂತ್ರಣ ಸೌಲಭ್ಯ ಹೊಂದಿದೆ. ಕಾರ್‌ನ ಒಳ ಆವರಣದಲ್ಲಿ 64 ಬಣ್ಣಗಳ ಪೈಕಿ ಆಯ್ದ ಬಣ್ಣದ ದೀಪಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. 

“ಇ-ಕ್ಲಾಸ್‌’ ಅತಿ ಹೆಚ್ಚು ಮಾರಾಟ
ಮರ್ಸಿಡಿಸ್‌ ಬೆಂಜ್‌ ಕಂಪನಿಯ ನಾನಾ ಮಾದರಿ ವೈಶಿಷ್ಟéದ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಭಾರತೀಯ ಗ್ರಾಹಕರು ಬಳಸುತ್ತಿದ್ದಾರೆ. ಆದರೆ ಬೆಂಜ್‌ ಕಂಪನಿಯ ಕಾರುಗಳ ಪೈಕಿ “ಇ-ಕ್ಲಾಸ್‌’ ಭಾರತೀಯರಿಗೆ ಅಚ್ಚುಮೆಚ್ಚು ಎನ್ನಲಾಗಿದೆ. ಭಾರತದಲ್ಲಿ ಬೆಂಜ್‌ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಗೆ “ಇ-ಕ್ಲಾಸ್‌’ ಶ್ರೇಣಿಯ ಕಾರುಗಳು ಭಾಜನವಾಗಿವೆ. ಹಾಗೆಂದೇ ಕಂಪನಿಯು ಗ್ರಾಹಕರ ನಿರೀಕ್ಷೆಗಳನ್ನು ತಲುಪಲು ಹೊಸ ಸೌಲಭ್ಯಗಳನ್ನು ಒಳಗೊಂಡ ಮಾದರಿಗಳನ್ನು ಪರಿಚಯಿಸುತ್ತಲೇ ಇದೆ.

ಮರ್ಸಿಡಿಸ್‌ ಬೆಂಜ್‌ ಇ-ಕ್ಲಾಸ್‌ 220ಡಿ ಮಾದರಿಯ ಕಾರಿನ ಬೆಲೆ 57.14 ಲಕ್ಷ ರೂ. (ಪುಣೆಯಲ್ಲಿ ಎಕ್ಸ್‌ ಶೋರೂಂ) ನಿಗದಿಯಾಗಿದೆ. ದೇಶಾದ್ಯಂತ ಜಾರಿಯಾಗಲಿರುವ “ಜಿಎಸ್‌ಟಿ’ ವ್ಯವಸ್ಥೆಯ ಸೌಲಭ್ಯವನ್ನು ಮುಂಚಿತವಾಗಿಯೇ ನೀಡಲು ಕಂಪನಿ ಮುಂದಾಗಿದೆ. ಅಂದರೆ ಜಿಎಸ್‌ಟಿ ಜಾರಿಯಾದ ಬಳಿಕ ಐಷಾರಾಮಿ ಕಾರುಗಳ ತೆರಿಗೆ ಪ್ರಮಾಣ ಇಳಿಕೆಯಾಗಲಿದ್ದು, ಆ ಸೌಲಭ್ಯವನ್ನು ಜಾರಿಗೂ ಮುನ್ನವೇ ನೀಡುತ್ತಿರುವುದು ವಿಶೇಷ.

ಭಾರತೀಯರಿಗೆಂದೇ ನಿರ್ಮಾಣ
ಕಂಪನಿಯ ನಾನಾ ಮಾದರಿಯ ಕಾರ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದ್ದರೂ “ಇ-ಕ್ಲಾಸ್‌’ ಶ್ರೇಣಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗುತ್ತವೆ. ಹಾಗಾಗಿ ಈ ಶ್ರೇಣಿಯ ಕಾರು ಬಯಸುವವರಿಗೆ ಹೊಸ ಕೊಡುಗೆಯಾಗಿ ಲಾಂಗ್‌ ವ್ಹೀಲ್‌ ಬೇಸ್‌ ಹೊಂದಿರುವ “ಇ-ಕ್ಲಾಸ್‌ 220ಡಿ’ ಕಾರು ಅಭಿವೃದ್ಧಿಪಡಿಸಲಾಗಿದೆ. ಇದು ಕಾರುಪ್ರಿಯರ ಮೆಚ್ಚುಗೆ ಗಳಿಸುವ ವಿಶ್ವಾಸವಿದೆ ಎಂದು ಮರ್ಸಿಡಿಸ್‌ ಬೆಂಜ್‌ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ರೊಲ್ಯಾಂಡ್‌ ಫೋಲ್ಗರ್‌ ತಿಳಿಸಿದ್ದಾರೆ. 

ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳ ಜತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಹೊಸದಾಗಿ ಅಭಿವೃದ್ಧಿಪಡಿಸಲಾದ ಎಂಜಿನ್‌ ಭಾರತದ ಘಟಕದಲ್ಲೇ ತಯಾರಾಗಿರುವುದು ವಿಶೇಷ. ಆ ಮೂಲಕ ವಿಶ್ವದಲ್ಲೇ ವರ್ಷದ ಐಷಾರಾಮಿ ಕಾರು ಎಂಬ ಹೆಗ್ಗಳಿಕೆಯ ಶ್ರೇಣಿಯ ವಾಹನವನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ.

– ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next