Advertisement

ಅಗೆದು ಹಾಕಿದ ರಸ್ತೆ: ದುರಸ್ತಿ ಕಾಮಗಾರಿ ಅರ್ಧದಲ್ಲೇ ಬಾಕಿ

04:33 PM Jan 24, 2018 | Team Udayavani |

ಸುಬ್ರಹ್ಮಣ್ಯ : ಗುತ್ತಿಗಾರು – ಕಮಿಲ – ಬಳ್ಪ ರಸ್ತೆ ದುರಸ್ತಿಗಾಗಿ 10 ವರ್ಷಗಳಿಂದ ಜನರು ಒತ್ತಾಯಿಸುತ್ತಿದ್ದರು. ಕೊನೆಗೂ ಅನುದಾನ ದೊರೆತು ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿತು. ಅದೀಗ ಆಮೆಗತಿಯಲ್ಲಿ ಸಾಗುತ್ತಿದೆ.

Advertisement

ರಸ್ತೆಯ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಆದರೆ ಸಮರ್ಪಕವಾಗಿಲ್ಲ. ಅಲ್ಲಲ್ಲಿ ಅಗೆದು ಹಾಕಿದ ರಸ್ತೆಯಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಗುತ್ತಿಗೆದಾರರು, ಇಲಾಖೆ ಅಧಿಕಾರಿಗಳನ್ನು ಇಲ್ಲಿನ
ಜನ ಶಪಿಸುತ್ತಿದ್ದಾರೆ.

ತೇಪೆ ಕಾರ್ಯವಾಗಿಲ್ಲ
ಬಳ್ಪ – ಕಮಿಲ – ಗುತ್ತಿಗಾರು ರಸ್ತೆ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ದಿನವೂ ನೂರಾರು ವಾಹನಗಳು ಈ ರಸ್ತೆಯ ಮೂಲಕ ಓಡಾಡುತ್ತವೆ. 5.4 ಕಿ.ಮೀ. ದೂರದ ಈ ರಸ್ತೆ ದುರಸ್ತಿಗೆ 10 ವರ್ಷಗಳಿಂದ ಒತ್ತಾಯವಿತ್ತು. ಎರಡು ವರ್ಷದ ಹಿಂದೆ 1 ಕಿ.ಮೀ. ರಸ್ತೆಯನ್ನು ಸಂಪೂರ್ಣ ಕಿತ್ತು ಮರು ಡಾಮರೀಕರಣ ಮಾಡಲಾಗಿತ್ತು. ಆದರೆ ಅದು ಒಂದೇ ಮಳೆಗಾಲದಲ್ಲಿ ಅಲ್ಲಲ್ಲಿ ಎದ್ದು ಹೋಗಿತ್ತು. ಬಳಿಕ ಜನತೆ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೇಪೆ ಕಾರ್ಯ ಮಾಡಿದ್ದರು. ಮಳೆಗಾಲದ ಸಂದರ್ಭ ಮತ್ತೆ ಹೊಂಡಗಳು ಬಿದ್ದಿದ್ದವು. ಇದನ್ನು ಮಳೆಗಾಲದ ನಂತರ ದುರಸ್ತಿ ಮಾಡಲಾಗುವುದು ಎಂದು ಇಲಾಖೆ ಪತ್ರದ ಮೂಲಕ ತಿಳಿಸಿದ್ದರೂ ಇದುವರೆಗೂ ತೇಪೆ ಕಾರ್ಯವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಕಮಿಲ ಪೇಟೆಯಿಂದ ಮುಂದೆ 40 ಮೀಟರ್‌ ಅಗೆದು ಹಾಕಲಾಗಿದ್ದು, ಈಗ ಎಸ್ಟಿಮೇಟಿನಲ್ಲಿ ಸೇರಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳೂ ಮಾತನಾಡುತ್ತಿಲ್ಲ. ಈ 40 ಮೀಟರ್‌ ಗೆ ಕಾಂಕ್ರೀಟ್‌ ಕಾಮಗಾರಿ ಅಗತ್ಯವಾಗಿದೆ. ಪ್ರತೀ ಬಾರಿ ಮಳೆಗಾಲ ಈ ಪ್ರದೇಶದಲ್ಲಿ ರಸ್ತೆ ತೀರಾ ಹದಗೆಡುತ್ತದೆ, ಹೀಗಾಗಿ ಅಗೆದು ಹಾಕಿದ ಭಾಗದಲ್ಲಿ ಕಾಂಕ್ರೀಟು ರಸ್ತೆ ಮಾಡಬೇಕೆಂದು ಜನತೆ ಒತ್ತಾಯಿಸಿದ್ದರು. ನಬಾರ್ಡ್‌ ಅನುದಾನದಲ್ಲಿ ಇದೆಲ್ಲ ಪೂರ್ತಿಯಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಕಳೆದ 10 ವರ್ಷದಲ್ಲಿ ನಡೆಯದ ಕಾಮಗಾರಿಗಳು ಈಗ ನಬಾರ್ಡ್‌ ಮೂಲಕ ನಡೆಯುತ್ತವೆಯೇ ಎಂಬ ಸಂಶಯ ಸ್ಥಳಿಯರಲ್ಲಿದೆ.

ಈಗ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಿ ಕಾಮಗಾರಿ ನಡೆಯುತ್ತಿದೆ. ಕಳೆದ ಬಾರಿ ಡಾಮರು ಹಾಕುವ ಕಾಮಗಾರಿಯನ್ನು ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಿಯೇ ನಡೆಸಲಾಗಿತ್ತು. ಈಗ ರಸ್ತೆ ಸಂಚಾರ ಬಂದ್‌ ಮಾಡಿರುವ ಸಂದರ್ಭದಲ್ಲೇ ಅಗೆದು ಹಾಕಿರುವ ರಸ್ತೆಗೆ ಕಾಂಕ್ರೀಟೀಕರಣ ಅಥವಾ ವ್ಯವಸ್ಥಿತ ರೀತಿಯ ಕಾಮಗಾರಿ ನಡೆಸಬೇಕು. ಮುಂದೆ ಈ 40 ಮೀಟರ್‌ ಕಾಮಗಾರಿಗೆ ಇಡೀ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡುವುದು ಸರಿಯಲ್ಲ. ಕಮಿಲ – ಬಳ್ಪ ರಸ್ತೆಯಲ್ಲಿ ದೇವಸ್ಯದಿಂದ ಮುಂದೆ ಗುತ್ತಿಗಾರುವರಗೆ 2 ಕಿ.ಮೀ. ರಸ್ತೆ ಹದಗೆಟ್ಟಿದೆ, ಅಲ್ಲಲ್ಲಿ ರಸ್ತೆ ಹೊಂಡ ಬಿದ್ದಿದೆ. ಇದಕ್ಕೆ ತೇಪೆ ಕಾರ್ಯ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

Advertisement

ತೋಚಿದಲ್ಲಿ ಕೆಲಸ
ಕಮಿಲದಿಂದ 1.5 ಕಿ.ಮೀ. ದೂರದ ರಸ್ತೆಯ ಕಾಮಗಾರಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಅಡಿ ಈಗ ಆರಂಭಗೊಂಡಿದೆ. ಇಲ್ಲಿಯೂ ಕಾಮಗಾರಿ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿಯಲ್ಲಿ 1
ಕಿ.ಮೀ. ಡಾಮರೀಕರಣ ಹಾಗೂ ಉಳಿದ 500 ಮೀಟರ್‌ ಕಾಂಕ್ರೀಟೀಕರಣ ಎಂದು ಅಧಿಕಾರಿಗಳು ಅಂದಾಜುಪಟ್ಟಿ ತಯಾರಿಸಿ ಕೆಲಸ ಆರಂಭಿಸಿದ್ದರು. ಆದರೆ ಕಾಂಕ್ರೀಟು ಎಲ್ಲಿ ಬೇಕಾಗಿತ್ತೋ ಅಲ್ಲಿ ಮಾಡದೆ ಅಧಿಕಾರಿಗಳಿಗೆ ತೋಚಿದ ಕಡೆ ಮಾಡುತ್ತಿದ್ದಾರೆ ಎಂದು ಜನರು ಜಿಲ್ಲಾಧಿಕಾರಿಗಳ ಸಹಿತ ಮುಖ್ಯಮಂತ್ರಿ ಕಚೇರಿ ವರೆಗೆ ದೂರು ನೀಡಿದ್ದಾರೆ.

ತತ್‌ಕ್ಷಣ ದುರಸ್ತಿಯಾಗಲಿ
ಗುತ್ತಿಗಾರು – ಕಮಿಲ – ಬಳ್ಪ ರಸ್ತೆ ತೀರಾ ಹದಗೆಟ್ಟಿದೆ. ಈಗ ತೇಪೆ ಕಾರ್ಯ ಕೂಡ ಸರಿಯಾಗಿ ನಡೆದಿಲ್ಲ, ಇಡೀ ರಸ್ತೆಯ ಅಲ್ಲಲ್ಲಿ ಗುಂಡಿಗಳು ಇವೆ. ಇದು ಕೂಡಾ ತತ್‌ಕ್ಷಣವೇ ದುರಸ್ತಿಯಾಗಬೇಕಿದೆ.
– –ಸೂರ್ಯನಾರಾಯಣ ಕಮಿಲ
   ಸ್ಥಳೀಯ ನಿವಾಸಿ

ಬೇಕಾದಲ್ಲಿ ಕಾಂಕ್ರೀಟ್‌ ಹಾಕಿಲ್ಲ
ಅನೇಕ ವರ್ಷಗಳಿಂದ ಕಮಿಲದಿಂದ ಮುಂದೆ ಮಳೆಗಾಲದಲ್ಲಿ ರಸ್ತೆ ಹದಗೆಡುತ್ತದೆ. ಇಲ್ಲಿ ಕಾಂಕ್ರೀಟ್‌ ರಸ್ತೆ ಈಗ ಆಗಬೇಕಿತ್ತು. ಆದರೆ ಆವಶ್ಯಕವಿರುವ ಸ್ಥಳ ಬಿಟ್ಟು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
 – ಶೂರಪ್ಪ ಕಮಿಲ
   ರಸ್ತೆ ಫ‌ಲಾನುಭವಿ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next