Advertisement
ಅಗತ್ಯ ಸಂದರ್ಭದಲ್ಲೇ ಕೈಕೊಟ್ಟ ಮಳೆ ನಾಟಿ ಮಾಡಿ 45ರಿಂದ 60ದಿನಕ್ಕೆ ಭತ್ತದ ತೆನೆ (ಹೊಡೆ) ಹೊರಮೂಡುತ್ತದೆ. ಉತ್ತಮ ಫಸಲು ಬರಬೇಕಾದರೆ ಈ ಸಂದರ್ಭ ಹೇರಳ ಪ್ರಮಾಣದ ನೀರು, ಒಳ್ಳೆಯ ವಾತಾವರಣ ಅಗತ್ಯ. ಆದರೆ ಈ ಬಾರಿ ನಾಟಿ ಮಾಡಿ 40-45ದಿನಕ್ಕೆ ಮಳೆ ಕೈ ಕೊಟ್ಟಿದೆ. ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಎಂ.ಒ.4 ಮುಂತಾದ ತಳಿಗಳು ಉತ್ತಮ ಫಸಲು ನೀಡಬೇಕಾದರೆ ತೆನೆ ಕಟ್ಟುವ ಸಂದರ್ಭದಲ್ಲಿ ತಂಪಾದ ವಾತಾವರಣ, ಬುಡದಲ್ಲಿ ತಂಪಗಿನ ನೀರು ಅತೀ ಅಗತ್ಯ. ಆದರೆ ಇದೀಗ ವಾತಾವರಣ, ಗದ್ದೆಯ ನೀರೂ ಬಿಸಿಯಾಗಿದೆ. ಹೀಗಾಗಿ ಇಳುವರಿಯ ಮೇಲೆ ಇದು ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಗದ್ದೆಯಲ್ಲಿ ನೀರು ಸಂಗ್ರಹಿಸುವ ಸಲುವಾಗಿ ಇದೀಗ ರೈತರು ಪಂಪ್‌ಸೆಟ್‌ಗಳ ಮೊರೆ ಹೋಗಿದ್ದಾರೆ. ಬಾವಿ, ಕೆರೆಗಳ ಮೂಲಕ ನೀರು ಹಾಯಿಸಿ ಇಳುವರಿ ಸಂಪೂರ್ಣ ಕುಸಿತವಾಗುವುದನ್ನು ತಪ್ಪಿಸಲು ಹೋರಾಟ ನಡೆಸುತ್ತಿದ್ದಾರೆ. ರೋಗ ಬಾಧೆ
ಬಿಸಿಲ ತಾಪ ಹೆಚ್ಚಾಗಿದ್ದರಿಂದ ಬೆಂಕಿ ರೋಗ, ಸುಳಿಗೆ ಹಾನಿ, ಸಸಿಗೆ ಹಾನಿ ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ. ಮಳೆ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ರೋಗಗಳು ಹತೋಟಿಗೆ ಬರುತ್ತಿತ್ತು. ಆದರೆ ಮಳೆ ಲಕ್ಷಣ ಕ್ಷೀಣಿಸಿದ್ದರಿಂದ ರೋಗ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.
Related Articles
ಅಗತ್ಯ ಸಂದರ್ಭದಲ್ಲೇ ಈ ರೀತಿ ಅನಾವೃಷ್ಠಿ ಎದುರಾಗಿರುವುದರಿಂದ ಭತ್ತದ ಬೆಳೆ ಸಮೃದ್ಧಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಇದೇ ರೀತಿ ವಾತಾವರಣವಿದ್ದಾಗ ಒಟ್ಟು ಇಳುವರಿಯಲ್ಲಿ ಶೇ. 30ರಿಂದ 40ರಷ್ಟು ಕುಸಿತಗೊಂಡ ಉದಾಹರಣೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Advertisement
ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯಮಳೆ ಪ್ರಮಾಣ ದಿಢೀರ್ ಕಡಿಮೆಯಾದ್ದರಿಂದ ಎಳೆ ಮಡಚುವುದು, ಸುಳಿ ಕೆಂಪಾಗುವುದು, ಹುಳು ಬಾಧೆ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭ ಬೆಳೆಯ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು. ಸಸಿಯ ಎಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.ತೆನೆ ಹೊರಮೂಡುವಾಗ ಹೆಚ್ಚಿನ ಪೋಷಕಾಂಶದ ಅಗತ್ಯವಿದ್ದು ಒಂದು ಎಕ್ರೆಗೆ 15ಕೆ.ಜಿ. ಪೊಟ್ಯಾಷ್, 10 ಕೆ.ಜಿ. ಯೂರಿಯ ನೀಡಿದರೆ ಉತ್ತಮ. ಕನಿಷ್ಠ ಎರಡು-ಮೂರು ದಿನಗಳಿಗೊಮ್ಮೆ ಗದ್ದೆಯ ನೀರನ್ನು ಬದಲಿಸಬೇಕು. ಯಾವುದೇ ಮಾಹಿತಿಗಾಗಿ ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
– ಡಾ| ಎಸ್.ವಿ.ಪಾಟೀಲ್, ಸಹ ಸಂಶೋಧನ ನಿರ್ದೇಶಕ, ಕೆ.ವಿ.ಕೆ. ಬ್ರಹ್ಮಾವರ
ಇಳುವರಿಯ ಕುರಿತು ಆತಂಕವಿದೆ
ಈ ಬಾರಿ ಭತ್ತದ ಬೆಳೆಗೆ ಅಗತ್ಯ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೆಳೆ ಹಾನಿ ಆರಂಭವಾಗಿದೆ. ಇಳುವರಿಯಲ್ಲಿ ಶೇ. 40ರ ವರೆಗೆ ಕುಂಠಿತವಾಗುವ ಆತಂಕವಿದೆ.
– ಜಯರಾಮ್ ಶೆಟ್ಟಿ ಮಣೂರು, ಪ್ರಗತಿಪರ ಕೃಷಿಕರು ಕೋಟ