Advertisement

Kinnigoli: ಮಳೆ; ಕೊಳೆಯುವ ಭೀತಿಯಲ್ಲಿ ಭತ್ತದ ಬೆಳೆ

02:29 PM Oct 16, 2024 | Team Udayavani |

ಕಿನ್ನಿಗೋಳಿ: ಕರಾವಳಿಯಲ್ಲಿ ಈಗ ಪ್ರತಿ ದಿನವೂ ಮಳೆ ಸುರಿಯುತ್ತಿದೆ. ಮಳೆ ಸುರಿದಾಗ ವಾತಾವರಣ ತಂಪಾದರೂ ಉಳಿದ ಹೊತ್ತಿನಲ್ಲಿ ಬಿಸಿಲು ವಿಪರೀತ ಸುಡುತ್ತದೆ. ಈ ರೀತಿಯ ಮಳೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜತೆಗೆ ಭತ್ತದ ಬೆಳೆಗೆ ಅಪಾಯಕಾರಿಯಾಗಿದೆ.

Advertisement

ಭತ್ತದ ಬೆಳೆಯಲ್ಲಿ ಬಹುತೇಕ ಈಗ ಕಟಾವಿಗೆ ಬಂದಿವೆ. ಆದರೆ, ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಈಗ ಕಟಾವು ಯಂತ್ರದ ಮೂಲಕವೇ ನಡೆಯುತ್ತದೆಯಾದರೂ ಯಂತ್ರಗಳನ್ನು ಗದ್ದೆಗೆ ಇಳಿಸುವ ಸ್ಥಿತಿ ಇಲ್ಲ. ಹೆಚ್ಚಿನ ಕಡೆ ದಿನದ ಒಂದೆರಡು ಹೊತ್ತು ಖಾಯಂ ಮಳೆ ಸುರಿಯುವುದರಿಂದ ಬೈಲು ಗದ್ದೆಗಳಲ್ಲಿ ನೀರು ನಿಂತಿದೆ. ಹೀಗಾಗಿ ಯಂತ್ರಗಳನ್ನು ಇಳಿಸುತ್ತಿಲ್ಲ.

ಮೂಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ನಡುಗೋಡು, ಪಂಜ, ಅತ್ತೂರು, ಕವತ್ತಾರು, ಬಳ್ಕುಂಜೆ, ಉಳೆಪಾಡಿ, ಏಲಿಂಜೆ, ಕೆಂಚನಕೆರೆ, ಪುನರೂರು, ಎಳತ್ತೂರು ಪ್ರದೇಶದಲ್ಲಿ ಹೆಚ್ಚಿನ ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿ ಈಗ ಬಹುತೇಕ ಗದ್ದೆಗಳಲ್ಲಿ ಪೈರು ಬೆಳೆದು ನಿಂತಿದೆ. ಉಳಿದವು ಮುಂದಿನ ವಾರದೊಳಗೆ ಕಟಾವಿಗೆ ಸಿದ್ಧವಾಗುತ್ತಿವೆ. ಆದರೆ, ನಿತ್ಯ ಮಳೆಯಿಂದಾಗಿ ಕಟಾವಿಗೆ ಸಾಧ್ಯಾಗುತ್ತಿಲ್ಲ.

ಕಟಾವಿಗೆ ಸಿದ್ಧವಾಗಿರುವ ಪೈರನ್ನು ಕಟಾವು ಮಾಡಲು ಆಗದೆ ಇದ್ದರಿಂದ ಭಾರಿ ಸಮಸ್ಯೆಗಳು ಎದುರಾಗುತ್ತಿವೆ. ಭತ್ತದ ಬೆಳೆಗೆ ಹಾನಿಯಾಗುತ್ತದೆ ಹಾಗೂ ಮೇವಿನ ಹುಲ್ಲು ಕೊಳೆಯವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಈಗ ಕನಿಷ್ಠ ಒಂದು ಮೂರ್ನಾಲ್ಕು ದಿನವಾದರೂ ಚೆನ್ನಾಗಿ ಬಿಸಿಲು ಕಾದರೆ ಮಾತ್ರ ಕಟಾವು ಮಾಡಬಹುದು ಎಂಬ ಪರಿಸ್ಥಿತಿ ಇದೆ.

Advertisement

ಭತ್ತದ ಬೆಳೆ ಬೆಳೆಯುವವರೇ ವಿರಳ
ಕರಾವಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆ ಬೆಳೆಯುವವರೇ ವಿರಳ ಆಗುತ್ತಿ¨ªಾರೆ. ಅಂಥ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆದ ಬೆಳೆಯೂ ನಾಶವಾಗುತ್ತಿರುವುದು ಆತಂಕ ಉಂಟು ಮಾಡಿದೆ. ಕೆಲವೊಂದು ಕಡೆ ಕೇವಲ ಒಂದೆರಡು ಬೆಳೆಗೆ ವ್ಯವಸಾಯ ಸೀಮಿತವಾಗಿದೆ.

ಭತ್ತಕ್ಕೆ ಬೆಲೆಯೂ ಸಿಗುವುದಿಲ್ಲ
ಈ ಬಾರಿ ಭತ್ತಕ್ಕೆ ಬೆಲೆಯೂ ಇಲ್ಲ. ಕಳೆದ ವರ್ಷ ಕಜೆ ಜಯ ಮುಂತಾದ ಭತ್ತಕ್ಕೆ ಕೆಜಿಗೆ 28 ರೂ. ತನಕ ಇತ್ತು. ಈ ಬಾರಿ 21 ರೂ. ಮಾತ್ರ ಇದೆ. ಸರಕಾರ ಇನ್ನೂ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಸರಕಾರ ತತ್‌ಕ್ಷಣ ಬೆಲೆ ನಿಗದಿ ಮಾಡದೆ ಹೋದರೆ ರೈತರಿಗೆ ನಷ್ಟ ಉಂಟಾಗುತ್ತದೆ ಎಂದು ಎನ್ನುತ್ತಾರೆ ಮೂಲ್ಕಿ ತಾಲೂಕು ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ್‌.

ಪೈರು ಉದುರಿ ಬೀಳುವ ಭಯ
ಪಂಜ, ಉಲ್ಯ ಅತ್ತೂರು ಪ್ರದೇಶದಲ್ಲಿ ಭತ್ತದ ಬೆಳೆದು ನಿಂತಿದೆ. ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವಿನ ಸ್ಥಿತಿಗೆ ಬಂದಿದೆ. ಇನ್ನು ಕಟಾವು ಮಾಡದ್ದಿರೆ ಗದ್ದೆಯಲ್ಲಿ ಪೈರು ಉದುರಿ ಬಿಳುವ ಅತಂಕವಿದೆ ಎನ್ನುವುದು ರೈತ ಬೈಲಗುತ್ತು ಸತೀಶ್‌ ಶೆಟ್ಟಿ ಅವರ ಆತಂಕ.

ಕಟಾವು ಮಾಡದಿದ್ದರೆ ಹಲವು ಸಮಸ್ಯೆ

  • ಪಂಜ, ಉಳಿಯ ಸೇರಿದಂತೆ ನದಿ ನೀರಿನ ಆಶ್ರಯವಿದ್ದ ಜಾಗದಲ್ಲಿ ಬೇಗನೆ ಬಿತ್ತನೆ ಮತ್ತು ನಾಟಿ ಮಾಡಲಾಗಿತ್ತು. 110 ದಿನಗಳಲ್ಲಿ ಭತ್ತ ಪೈರಾಗಿ ಬೆಳೆದಿದೆ. ಈಗ ಕಟಾವು ಮಾಡದೆ ಹೋದರೆ ಭತ್ತ ಉದುರಿ ಬೀಳುತ್ತದೆ. ನೀರಿನಲ್ಲಿ ಮೊಳಕೆಯೊಡೆಯುತ್ತದೆ.
  • ಬೆಳೆದ ಹುಲ್ಲು ಕೂಡ ನೀರು ಬಿದ್ದಾಗ ಕೊಳೆಯಲು ಆರಂಭಿಸುತ್ತದೆ. ಮುಂದೆ ಅದನ್ನು ಯಾವುದಕ್ಕೂ ಬಳಸಲಾಗದು.
  • ಉದ್ದಕ್ಕೆ ಬೆಳೆಯುವ ಭತ್ತದ ತಳಿಗಳ ಹುಲ್ಲು ಪೈರಿನ ಭಾರಕ್ಕೆ ಬಾಗಿ ನೆಲಕ್ಕೆ ಬೀಳುವ ಅಪಾಯ ಜಾಸ್ತಿ.
  • ಮಳೆಯಿಂದ ಗದ್ದೆ ನೀರಾಗಿದ್ದರೆ ಯಂತ್ರಗಳ ಮೂಲಕ ಕಟಾವು ಮಾಡುವುದು ಕೂಡ ಕಷ್ಟ. ಹೂತು ಹೋಗುತ್ತದೆ ಎಂಬ ಕಾರಣಕ್ಕೆ ಇಳಿಸುವುದೂ ಇಲ್ಲ.
  • ಒಂದೊಮ್ಮೆ ಹಠದಿಂದ ಯಂತ್ರಗಳನ್ನು ಗದ್ದೆಗಿಳಿಸಿದರೂ ನೆಲಕ್ಕೊರಗಿದ ಹುಲ್ಲು ಎಲ್ಲವೂ ನಾಶವಾಗುತ್ತದೆ.

ಹಸಿ ಭತ್ತವನ್ನೇ ಕೊಡಬೇಕು
ಈಗ ಮಳೆಯ ನಡುವೆ ಕಷ್ಟಪಟ್ಟು ಕಟಾವು ಮಾಡಿದರೂ ಅದನ್ನು ಮಿಲ್‌ಗೆ ಕೊಟ್ಟಾಗ ಕಡಿಮೆ ರೇಟು ಸಿಗುತ್ತದೆ. ಒಣಗಿದ ಭತ್ತಕ್ಕಿಂತ ಹಸಿ ಭತ್ತಕ್ಕೆ ಧಾರಣೆ ಕಡಿಮೆ. ಇನ್ನು ಕೆಲವರು ಯಂತ್ರದಲ್ಲಿ ಕಟಾವು ಮಾಡಿದ ಬಳಿಕ ಗಾಳಿಗೆ ಹಿಡಿದು ಕಾಳು, ಜೊಳ್ಳು ಪ್ರತ್ಯೇಕ ಮಾಡುತ್ತಾರೆ. ಆದರೆ, ಮಳೆ ಬಂದರೆ ಅದಕ್ಕೂ ಅವಕಾಶವಿಲ್ಲದೆ ನೇರ ಮಿಲ್‌ಗೆ ಕೊಡುವಂತಾಗುತ್ತದೆ. ಆಗ ಧಾರಣೆ ಇನ್ನಷ್ಟು ಕಡಿಮೆಯಾಗುತ್ತದೆ.

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next