ಅರಬ್ ಸಂಯುಕ್ತ ಸಂಸ್ಥಾನದ ಶೇಖ್ ದೊರೆ ಮನೆತನದ ವೈಭವಗಳಲ್ಲಿ ಅರಬ್ ಕುದುರೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ರಾಜಮನೆತನದ ವೈಭೋಗದಂತೆ ತಾವು ಸಾಕುವ ಕುದುರೆಗಳಿಗೆ ಸಹ ರಾಜಾಥಿತ್ಯ, ಹವಾ ನಿಯಂತ್ರಿತ ಕುದುರೆ ಲಾಯಗಳು, ಸ್ವಚ್ಛಂದವಾಗಿ ಕುಣಿದು ಕುಪ್ಪಳಿಸಿ ಓಡಾಡಲು ಹಚ್ಚ ಹಸುರಿನ ವಿಶಾಲ ಮೈದಾನಗಳು, ವಿಶೇಷ ಪಾಕಶಾಲೆಗಳು, ಸ್ನಾನಗೃಹಗಳು, ವೈದ್ಯಕೀಯ ತಪಾಸಣ ಕೇಂದ್ರ, ದೂರ ದೂರದ ಊರಿಗೆ ಪ್ರಯಾಣ ಮಾಡಲು ಹವಾನಿಯಂತ್ರಿತ ಭಾರೀ ಗಾತ್ರದ ಕಂಟೈನರ್ ವಾಹನಗಳು ಅರಬ್ ಕುದುರೆಗಳಿಗೆ ಇರುವ ಶ್ರೀಮಂತ ಸೌಲಭ್ಯಗಳು.
ಪಾಲನೆ ಪೋಷಣೆಗೆ ನುರಿತ ಸಿಬಂದಿ ವರ್ಗ, ಪಶು ವೈದ್ಯರು, ಅತ್ಯಂತ ಪ್ರೀತಿಯಿಂದ ಕುದುರೆಯ ಒಡನಾಡಿ ಜಾಕಿ ಕುದುರೆಗೆ ಅತ್ಯಂತ ಆತ್ಮೀಯನಾಗಿರುತ್ತಾನೆ. ಕುದುರೆ ಲಾಯದಲ್ಲಿರುವ ಕುದುರೆಗಳಲ್ಲಿ ಹೆಣ್ಣು ಕುದುರೆಗಳನ್ನು ರೇಸ್‌ಗೆ ಬಳಸುವುದಿಲ್ಲ, ಗಂಡು ಕುದುರೆಗಳಲ್ಲಿ ರೇಸ್‌ಗೆ ಆಯ್ಕೆ ಮಾಡಲಾಗಿರುವ ಕುದುರೆಗಳನ್ನು ತುಂಬಾ ಜಾಗ್ರತೆಯಾಗಿ ಪಾಲನೆ ಪೋಷಣೆ ಮಾಡಲಾಗುತ್ತದೆ. ಎಲ್ಲ ಕುದುರೆಗಳಿಗೆ ಹೆಚ್ಚಿನ ಸೆಕ್ಯೂರಿಟಿಯನ್ನು ನೀಡಲಾಗುತ್ತದೆ. ಕುದುರೆಯ ಬಳಿ ಹೋಗಲು ಯಾರಿಗೂ ಅವಕಾಶ ಇರುವುದಿಲ್ಲ. ಸಾರ್ವಜನಿಕವಾಗಿ ರೇಸ್‌ನಲ್ಲಿ ಮಾತ್ರ ವೀಕ್ಷಿಸುವ ಅವಕಾಶ ದೊರೆಯುತ್ತದೆ.
ಅರಬ್ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷರು, ಪ್ರಧಾನ ಮಂತ್ರಿಗಳು, ದುಬೈಯ ಆಡಳಿತ ದೊರೆ ಶೇಖ್ ಮಹ್ಮದ್ ಬಿನ್ ರಾಶೀದ್ ಅಲ್ ಮಕ್ದೂಮ್ 1996ರಲ್ಲಿ ದುಬೈ ವರ್ಲ್ಡ್ ಕಪ್ ಕುದುರೆ ರೇಸ್‌ಗೆ ಚಾಲನೆ ನೀಡಿದ್ದರು. ದುಬೈಯ ಹೃದಯ ಭಾಗದಲ್ಲಿ ನಾದ ಅಲ್ ಶಿಬಾ ರೇಸ್ ಕೋರ್ಸ್‌ನ್ನು ನವೀಕರಿಸಿ ಮೈದಾನ್ ರೇಸ್ ಕೋರ್ಸ್ ಎಂದು ಮರು ನಾಮಕರಣ ಮಾಡಲಾಗಿತ್ತು. 2016ರಲ್ಲಿ ಮೈದಾನ್ ರೇಸ್ ಕೋರ್ಸ್ ವಿಶ್ವದ ಕ್ರೀಡಾ ಕ್ಷೇತ್ರದ ಪ್ರಥಮ ಹಾಗೂ ಉನ್ನತ ಮಟ್ಟದ ರೇಸ್ ಕೋರ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ದುಬೈ ವರ್ಲ್ಡ್ ಕಪ್ 2024ರ ಪೂರ್ವ ತಯಾರಿಯಲ್ಲಿರುವ ಪ್ರಮುಖ ಅಂಶಗಳು ರೇಸ್‌ನಲ್ಲಿ ನೂರ ಐವತ್ತು ಕುದುರೆಗಳು ಭಾಗವಹಿಸಿದ್ದವು. ಯು.ಎಸ್.ಎ., ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್, ಗ್ರೇಟ್ ಬ್ರಿಟನ್, ಉರುಗ್ವೆ, ಅರ್ಜೈಂಟಿನಾ, ಜರ್ಮನಿ, ಐರ್ಲೆಂಡ್, ಒಂಬತ್ತು ದೇಶಗಳು ಮತ್ತು ಅತಿಥಿಯಾಗಿ ಅರಬ್ ಸಂಯುಕ್ತ ಸಂಸ್ಥಾನ ಪಾಲ್ಗೊಂಡಿದ್ದವು.
ಯು.ಎ.ಇ.ಯ ಬೃಹತ್ ಸಂಸ್ಥೆಗಳಾದ ಇಮ್ಮಾರ್, ಅಝಿಝಿ, ನಖೀಲ್, ಡಿಪಿ ವರ್ಲ್ಡ್, ಲಾಂಗಿನ್ಸ್ ಮತ್ತು ಏಮಿರೇಟ್ಸ್ ಒಟ್ಟು ಒಂಬತ್ತು ಪ್ರಾಯೋಜಕರುಗಳು ಸೇರಿ ಒಂಬತ್ತು ರೇಸ್‌ಗಳನ್ನು ಆಯೋಜಿಸಲಾಗಿತ್ತು. ದುಬೈಯ ಶೇಖ್ ಮನೆತನದ ಕುದುರೆಗಳು ಸೇರಿ ಹತ್ತು ಮಂದಿ ಕುದುರೆ ಮಾಲಕರು, ವಿಶ್ವದ ಹತ್ತು ಮೇಲ್ದರ್ಜೆಯ ತರಬೇತುದಾರರು, ರೇಸ್‌ನಲ್ಲಿ ಕುದುರೆಗಳನ್ನು ಲಗಾಮು ಹಿಡಿದು ಸವಾರಿ ಮಾಡುವ ನುರಿತ ಹತ್ತು ಜಾಕಿಗಳು ದುಬೈಯ ವರ್ಲ್ಡ್ ಕಪ್ 2024ರ ಹಿಂದಿರುವ ಬೃಹತ್ ಶಕ್ತಿಗಳು.
ದುಬೈ ವರ್ಲ್ಡ್ ಕಪ್ 2024ರಲ್ಲಿ ಒಂಬತ್ತು ರೇಸ್‌ಗಳು ನಡೆದಿದ್ದು, ಕೊನೆಯಲ್ಲಿ ಎಮಿರೇಟ್ಸ್ ಪ್ರಾಯೊಜಕತ್ವದ ಏಳು ಸಂಖ್ಯೆಯ ಕುದುರೆ ಗುರಿಯನ್ನು ಮುಟ್ಟಿದ್ದು ಲಾರೆಲ್ ರಿವರ್ ಜಾಕಿಯಾಗಿದ್ದು ದುಬೈ ವರ್ಲ್ಡ್ ಕಪ್ 2024ನ್ನು ತನ್ನದಾಗಿಸಿಕೊಡಿದ್ದಾರೆ. ಬಹುಮಾನದ ಮೊತ್ತ ಹನ್ನೆರಡು ಮಿಲಿಯನ್ ಡಾಲರ್ ಆಗಿತ್ತು! ಸಮಾರಂಭದಲ್ಲಿ ಗಿನ್ನೆಸ್ ದಾಖಲೆಯ ನಾಲ್ಕು ಸಾವಿರ ಡ್ರೋನ್‌ಗಳ ವೈವಿಧ್ಯಮಯ ಡ್ರೋನ್ ಶೋ, ಲೇಸರ್ ಲೈಟ್ ಮತ್ತು ಸಿಡಿ ಮದ್ದುಗಳ ಬಾನಂಗಳದಲ್ಲಿ ಮೂಡಿಸಿರುವ ತ್ರೀ ಡಿ ಚಿತ್ತಾರಗಳನ್ನು ವೀಕ್ಷಿಸಿ ಪ್ರೇಕ್ಷಕರು ಸಂಭ್ರಮಿಸಿದರು. ಇದು ಅತ್ಯಂತ ಆಕರ್ಷಕ ಮುಕ್ತಾಯವಾಗಿತ್ತು.
ಗ್ಯಾಲರಿಯಲ್ಲಿ ಅರುವತ್ತು ಸಾವಿರ ಪ್ರೇಕ್ಷಕರು ಕುಳಿತು ವೀಕ್ಷಿಸುವ ವ್ಯವಸ್ಥೆ ಹಾಗೂ ಎಂಟು ಸಾವಿರಕ್ಕು ಅಧಿಕ ಕಾರ್ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಯು.ಎ.ಇ.ಯಲ್ಲಿ ನೆಲೆಸಿರುವ ನೂರ ಐವತ್ತು ರಾಷ್ಟ್ರಗಳ ಅನಿವಾಸಿ ಪ್ರಜೆಗಳು ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಲವಾರು ದಾಖಲೆಗಳನ್ನು ಸೃಷ್ಟಿಸಿರುವ ದುಬೈ ಮತ್ತೊಮ್ಮೆ ವಿಶ್ವ ದಾಖಲೆಯನ್ನು ಮಾಡಿತ್ತು.
*ಬಿ. ಕೆ. ಗಣೇಶ್ ರೈ, ದುಬೈ