Advertisement

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

11:19 AM Dec 18, 2024 | Team Udayavani |

ಬೆಂಗಳೂರು: ವಿದೇಶದಲ್ಲಿ ಕೂತು ಸ್ಟಾಕ್‌ ಇನ್ವೆಸ್ಟ್‌ಮೆಂಟ್‌ ಜಾಹೀರಾತು ನೀಡಿ ಲಕ್ಷಾಂತರ ರೂ. ವಂಚನೆ ಮಾಡುತ್ತಿದ್ದ ಜಾಲಕ್ಕೆ ಬ್ಯಾಂಕ್‌ ಖಾತೆಗಳ ಪೂರೈಕೆ ಮಾಡುತ್ತಿದ್ದ 10 ಮಂದಿಯನ್ನು ಉತ್ತರ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶ್ರೀನಿವಾಸರೆಡ್ಡಿ(43), ಆಕಾಶ್‌(27), ಪ್ರಕಾಶ್‌(43), ಸುನೀಲ್‌ ಕುಮಾರ್‌(45), ಸಾಯಿ ಪ್ರಜ್ವಲ್‌(38), ರವಿಶಂಕರ್‌(24), ಮಧುಸೂದನ್‌ ರೆಡ್ಡಿ(41), ಸುರೇಶ್‌(43), ಕಿಶೋರ್‌ ಕುಮಾರ್‌(29) ಮತ್ತು ಒಬುಲ್‌ ರೆಡ್ಡಿ (29) ಬಂಧಿತರು.

ಆರೋಪಿಗಳೆಲ್ಲರೂ ಬೆಂಗಳೂರು ನಿವಾಸಿಗಳಾಗಿದ್ದಾರೆ. ಸಾಫ್ಟ್ ವೇರ್‌ ಎಂಜಿನಿಯರ್‌ವೊಬ್ಬರಿಗೆ ಬರೋಬರಿ 88.83 ಲಕ್ಷ ರೂ. ವಂಚಿಸಿದ್ದಾರೆ. ಪ್ರಮುಖ ಆರೋಪಿಗಳು ದುಬೈನಲ್ಲಿದ್ದಾರೆ. ಬಂಧಿತರಿಂದ 51 ಮೊಬೈಲ್‌ಗ‌ಳು, 27 ಡೆಬಿಟ್‌ ಕಾರ್ಡ್‌ಗಳು, 108 ಬ್ಯಾಂಕ್‌ ಪಾಸ್‌ ಬುಕ್‌ ಮತ್ತು ಚೆಕ್‌ಗಳು, 480 ಸಿಮ್‌ ಕಾರ್ಡ್‌ ಗಳು, 2 ಲ್ಯಾಪ್‌ಟಾಪ್‌ಗ್ಳು, 2 ಸಿಪಿಯು, 48 ಅಕೌಂಟ್‌ ಕ್ಯೂಆರ್‌ ಕೋಡ್‌, 42 ರಬ್ಬರ್‌ ಸ್ಟಾಂಪ್‌ಗಳು, 103 ಉದ್ಯಮ್‌ ಮತ್ತು ಜಿಎಸ್‌ಟಿ ದಾಖಲೆಗಳು, 230 ಕರೆಂಟ್‌ ಅಕೌಂಟ್‌ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು.

ವಂಚನೆಗಾಗಿ ನಗರದಲ್ಲಿ 2 ಪ್ರತ್ಯೇಕ ಕಚೇರಿ: ದೂರುದಾರ ಟೆಕಿ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ ಪೇಜ್‌ವೊಂದರಲ್ಲಿ ಬಂದ ಸ್ಟಾಕ್‌ ಇನ್‌ವೆಸ್ಟ್‌ಮೆಂಟ್‌ ಜಾಹೀ ರಾತಿನ ಲಿಂಕ್‌ ಕ್ಲಿಕ್‌ ಮಾಡಿ 88.83 ಲಕ್ಷ ರೂ. ಕಳೆದುಕೊಂಡಿದ್ದರು. ಆರೋಪಿಗಳ ಪೈಕಿ ರವಿಶಂಕರ್‌ ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಕೆಲವು ಸೈಬರ್‌ ವಂಚಕರ ಪರಿಚಯವಾಗಿದೆ.

ಬಳಿಕ ಬೆಂಗಳೂರಿಗೆ ಬಂದು ಇತರೆ ಆರೋಪಿಗಳ ಜತೆ ಸೇರಿಕೊಂಡು ಅಮಾಯಕ ವ್ಯಕ್ತಿಗಳಿಗೆ ಕಮಿಷನ್‌ ಆಮಿಷವೊಡ್ಡಿ ಅವರ ಆಧಾರ್‌, ಪಾನ್‌ ಕಾರ್ಡ್‌ ಪಡೆದು ಬ್ಯಾಂಕ್‌ ಖಾತೆ ಗಳನ್ನು ತೆರೆದು ದುಬೈನಲ್ಲಿರುವ ವಂಚಕರಿಗೆ ಮಾರಾಟ ಮಾಡುತ್ತಿದ್ದರು. ಬಳಿಕ ಸಾಮಾ ಜಿಕ ಜಾಲತಾಣಗಳಲ್ಲಿ ಇನ್‌ವೆಸ್ಟ್‌ಮೆಂಟ್‌ ಲಿಂಕ್‌ ಕಳುಹಿಸುತ್ತಿದ್ದರು. ಬಳಿಕ ಆ ಲಿಂಕ್‌ ಕ್ಲಿಕ್‌ ಮಾಡಿದ ವ್ಯಕ್ತಿಗಳಿಗೆ ಹೂಡಿಕೆ ಹಣ ಡಬಲ್‌ ಆಗುತ್ತದೆ ಎಂದು ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು. ಅದಕ್ಕಾಗಿ ಬಂಧಿತರು ತ್ಯಾಗರಾಜನಗರ ಮತ್ತು ಸದಾಶಿವನಗರದಲ್ಲಿ ಎರಡು ಪ್ರತ್ಯೇಕ ಕಚೇರಿಗಳನ್ನು ತೆರೆದಿದ್ದರು.

Advertisement

1 ಕೋಟಿ ರೂ. ವರ್ಗಾವಣೆಗೆ 1 ಲಕ ರೂ. ಕಮಿಷನ್‌: ಬಂಧಿತ ಆರೋಪಿಗಳಿಗೆ ದುಬೈನಲ್ಲಿರುವ ವಂಚಕರು ಒಂದು ಕೋಟಿ ರೂ. ವರ್ಗಾವಣೆಯಾದರೆ 1 ಲಕ್ಷ ರೂ. ಕಮಿಷನ್‌ ನೀಡುತ್ತಿದ್ದರು. ಹೀಗೆ 2-3 ವರ್ಷಗಳಿಂದ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಂಚನೆ ಕೃತ್ಯಕ್ಕೆ ಆರೋಪಿಗಳು ಬಳಸುತ್ತಿದ್ದ ಬ್ಯಾಂಕ್‌ ಖಾತೆಗಳ ವಿರುದ್ಧ ದೇಶಾದ್ಯಂತ 1467 ಎನ್‌ಸಿಆರ್‌ಪಿ ದೂರುಗಳು ದಾಖಲಾಗಿವೆ ಎಂಬುದು ಗೊತ್ತಾಗಿದೆ.

ಈ ಪೈಕಿ ಉತ್ತರ ವಿಭಾಗದ ಸೆನ್‌ ಠಾಣೆಯ 15 ಎನ್‌ಸಿಪಿಆರ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಸತೀಶ್‌ ಕುಮಾರ್‌, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ, ಡಿಸಿಪಿ ಸೈದುಲ್ಲಾ ಅಡಾವತ್‌, ಎಸಿಪಿ ಎನ್‌.ಪವನ್‌, ಪಿಎಸ್‌ಐ ರಾಜು, ಇತರೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next