ಹುಣಸೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಡ್ಡಾಯವಾಗಿ ಔಷಧ ಸಿಂಪಡಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮನವಿ ಮಾಡಿದರು. ಹುಣಸೂರು ಉಪವಿಭಾಗದ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕರು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಿದರು
ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದು, ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಸೂಕ್ಷ್ಮ ಸಮಯ: ತಾಲೂಕಿನಲ್ಲಿ ಈಗಾಗಲೇ ಪ್ರವಾಹ ಇಳಿಮುಖವಾಗಿದೆ. ಆದರೆ, ಪ್ರವಾಹದಿಂದ ತೊಂದರೆಗೊಳಗಾದ ಗ್ರಾಮಗಳಲ್ಲಿ ಅಲ್ಲಲ್ಲಿ ನೀರು ನಿಂತಿದ್ದು, ಹೀಗಾಗಿ ಮಳೆಯೂ ಸುರಿಯುತ್ತಿದೆ. ಮುಂದಿನ ಒಂದು ತಿಂಗಳು ಅತ್ಯಂತ ಸೂಕ್ಷ್ಮ ಸಮಯವಾಗಿದ್ದು, ಸಾಂಕ್ರಾಮಿಕ ರೋಗಗಳು ಬೇಗ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಯಾವುದೇ ರೀತಿಯ ರೋಗವಾಹಕ ಆಶ್ರಿತ ರೋಗಗಳು (ಸಾಂಕ್ರಾಮಿಕ ರೋಗಗಳು)ಹರಡದಂತೆ ಸೂಕ್ತ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸ್ವಚ್ಛತೆಗೆ ಸೂಚನೆ: ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಔಷಧಗಳ ದಾಸ್ತಾನು ಇದೆ. ಸಮಸ್ಯೆ ಕಂಡುಬಂದ ರೋಗಿಗಳನ್ನು ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುವುದು. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜಾಗೃತಿ, ಪೋಸ್ಟರ್: ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ನಾಗರಿಕರಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸಲು ಇಲಾಖೆ ಜಾಗೃತಿ ಜಾಥಾ ಆಯೋಜಿಸಲಿದೆ. ಅಲ್ಲದೇ ಇಲಾಖೆ ಪ್ರಕಟಿಸಿರುವ ಪೋಸ್ಟರ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ಹುಣಸೂರು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೃಷ್ಣ ಹಾಂಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಬ್ಲಾಕ್ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವ್ ಇತರರು ಉಪಸ್ಥಿತರಿದ್ದರು.
ಕ್ಷಿಪ್ರ ಕಾರ್ಯಪಡೆ ರಚನೆ: ಜಿಲ್ಲಾ ಸವೇಕ್ಷಣ ಸಮಿತಿ ಮುಖ್ಯಸ್ಥ ಡಾ.ಶಿವಪ್ರಸಾದ್ ಮಾತನಾಡಿ, ನೆರೆಪೀಡಿತ ಪ್ರದೇಶಗಳ ಪರಿವೀಕ್ಷಣೆಗಾಗಿ ಜಿಲ್ಲಾಮಟ್ಟದ ಹಾಗೂ ಆಯಾ ತಾಲೂಕು ಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಈ ಪಡೆಯಲ್ಲಿ ವಿಷಯ ತಜ್ಞ ವೈದ್ಯರು ಮತ್ತು ಪ್ರಯೋಗಾಲಯದ ಅಧಿಕಾರಿಗಳು ಇರುತ್ತಾರೆ. ಪ್ರತಿ ತಾಲೂಕಿನಿಂದಲೂ ಮಾಹಿತಿ ಪಡೆದು ಸೂಕ್ತ ಸಲಹೆ ಸೂಚನೆ ನೀಡಲಿದ್ದಾರೆ. ಆರೋಗ್ಯ ರಕ್ಷಣೆಯಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು.
ಅಲ್ಲದೇ ಮನೆಗಳಲ್ಲಿ ನೀರು ಸಂಗ್ರಹ ತೊಟ್ಟಿಗಳ ಸ್ವಚ್ಛತೆ, ನೀರು ನಿಲ್ಲದಂತೆ ಕ್ರಮವಹಿಸುವುದು, ಶೌಚಗೃಹಗಳನ್ನು ಬಳಸಿದ ನಂತರ ಕೈಕಾಲು ತೊಳೆಯುವುದು, ಕ್ಲೋರಿನೇಟೆಡ್ ಹಾಗೂ ಬಿಸಿ ನೀರನ್ನೇ ಕುಡಿಯಬೇಕು. ಮುನ್ನೆಚ್ಚರಿಕಾ ಕ್ರಮ ಕೈಗೊಂಡಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಈ ಕುರಿತು ನಾಗರಿಕರು ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.