Advertisement

ಕೃಷಿ ಸಚಿವರ ಕ್ಷೇತ್ರದಲ್ಲಿ ನೀರಿಗೆ ಬರ

12:15 PM Apr 08, 2018 | Team Udayavani |

ಬೆಂಗಳೂರು: ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂಳಗೊಂಡ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಣುವುದು ಕುಡಿಯುವ ನೀರಿನ ಸಮಸ್ಯೆ. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಕಾವೇರಿ ನೀರು ಪೂರೈಕೆಯಾಗುತ್ತಿದೆ.

Advertisement

ಕ್ಷೇತ್ರದ ಪ್ರಮುಖ ರಸ್ತೆಗಳ ಡಾಂಬರೀಕರಣವಾಗಿದ್ದರೂ ಅನಿಲ ಕೊಳವೆ ಮಾರ್ಗಕ್ಕಾಗಿ ಸಹಕಾರ ನಗರದ 60 ಅಡಿ ರಸ್ತೆಯನ್ನು ನಿರಂತರವಾಗಿ ಅಗೆಯುವುದು, ರಸ್ತೆಯ ಎರಡೂ ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವುದಕ್ಕೆ ಸ್ಥಳೀಯರ ಆಕ್ಷೇಪವಿದೆ.

ಈ ಕ್ಷೇತ್ರ ಪ್ರತಿನಿಧಿಸುವ ಕೃಷ್ಣ ಭೈರೇಗೌಡ ರಾಜ್ಯದ ಕೃಷಿ ಸಚಿವರೂ ಹೌದು. ಅದರ ಪ್ರಭಾವ ಎಂಬಂತೆ ಕ್ಷೇತ್ರದಲ್ಲಿ ಸಿರಿಧಾನ್ಯ ಮೇಳ ಆಯೋಜನೆ, ಸಾರ್ವಜನಿಕರು ತಮ್ಮ ಮನೆಗಳ ತಾರಸಿ ಮೇಲೆ ಕೈ ತೋಟ ಮಾಡಿಕೊಳ್ಳಲು ತರಬೇತಿ, ಸ್ಥಳೀಯವಾಗಿ ಕಸ ಸಂಸ್ಕರಣೆಯ ಜತೆಗೆ ತರಕಾರಿ ಬೆಳೆಯುವ ಬಗ್ಗೆ ತರಬೇತಿ ನೀಡಿರುವುದು ಜನತೆಯ ಮೆಚ್ಚುಗೆ ಗಳಿಸಿದೆ.

ಅಲ್ಪಸಂಖ್ಯಾತರು ಹೆಚ್ಚಾಗಿರುವ ಥಣಿಸಂದ್ರ, ಸಾರಾಯಿಪಾಳ್ಯ, ರಾಮಕೃಷ್ಣ ಹೆಗಡೆ ನಗರ ಹಾಗೂ ನಾಗವಾರದಲ್ಲಿ ಕಿರಿದಾದ ರಸ್ತೆಗಳಿಂದ ಸಂಚಾರದಟ್ಟಣೆ ತೀವ್ರವಾಗಿದೆ. ನಾಗವಾರದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದ್ದರೂ ವಾಹನ ಸವಾರರ ಪರದಾಟ ತಪ್ಪಿಲ್ಲ. ಮಾನ್ಯತಾ ಟೆಕ್‌ಪಾರ್ಕ್‌ನಿಂದಾಗಿ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಿದೆ ಎಂಬ ಆರೋಪವಿದೆ.

ಕ್ಷೇತ್ರದ ವ್ಯಾಪ್ತಿಯ ಏಳು ವಾರ್ಡ್‌ಗಳಲ್ಲಿ ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೆಹಳ್ಳಿ ಹಾಗೂ ಕುವೆಂಪುನಗರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಪಾಲಿಕೆ ಸದಸ್ಯರಿದ್ದು, ಮೂರು ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ. 10 ಗ್ರಾ.ಪಂ ಮತ್ತು 5 ಜಿ.ಪಂ ಒಳಗೊಂಡಿರುವ ಜಾಲ ಹೋಬಳಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಬೇಕಿದೆ.

Advertisement

ನೀರು ಸಂಸ್ಕರಣೆ ಘಟಕದ ಮೂಲಕ ಜಾಲ ಹೋಬಳಿಯ ಕೆರೆಗಳನ್ನು ತುಂಬಿಸುವ ಕೆಲಸ ನಡೆದಿದ್ದು, ಈಗಾಗಲೇ ನೀರು ಸಂಸ್ಕರಿಸಿ ಬಾಗಲೂರು ಕೆರೆ ತುಂಬಿಸಲಾಗುತ್ತಿದೆ. ಆದರೆ, ಕೆರೆಗೆ ಕೊಳಚೆ ನೀರು ತುಂಬಿಸಲಾಗುತ್ತಿದೆ ಎಂಬ ಆಕ್ಷೇಪ ಜನರದ್ದು.

ರಾಜಕೀಯವಾಗಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದ್ದಂತೆ ಕಂಡು ಬಂದರೂ ಜೆಡಿಎಸ್‌ ಬಲ ನಿರ್ಲಕ್ಷಿಸುವಂತಿಲ್ಲ. ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಸಂಬಂಧಿ ಎ.ರವಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಮುಸ್ಲಿಂ ಮತದಾರರು ನಿಣಾರ್ಯಕ. 

ಕ್ಷೇತ್ರ ಮಹಿಮೆ: ಬಿಇಎಲ್‌ ಕಾರ್ಖಾನೆ, ಮಾನ್ಯತಾ ಟೆಕ್‌ ಪಾರ್ಕ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಈ ಕ್ಷೇತ್ರದಲ್ಲಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸನಿಹ ಇರುವುದರಿಂದ ರಿಯಲ್‌ ಎಸ್ಟೇಟ್‌ ವಹಿವಾಟು ಜೋರಾಗಿದೆ. ಜತೆಗೆ ರಾಷ್ಟ್ರೋತ್ಥಾನ ಶಾಲೆ ಸೇರಿ ಖ್ಯಾತ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಬಿಡಿಎ ಅರ್ಕಾವತಿ ಬಡಾವಣೆಯೂ ಇದೇ ಕ್ಷೇತ್ರಕ್ಕೆ ಸೇರಲಿದೆ.

ಕ್ಷೇತ್ರದ ಬೆಸ್ಟ್‌ ಏನು?: ವಿದ್ಯಾರಣ್ಯಪುರ, ಸಹಕಾರನಗರ, ಕಾಫಿಬೋರ್ಡ್‌ ನಗರದಲ್ಲಿ ಇಂಡೋರ್‌ ಸ್ಟೇಡಿಯಂ ನಿರ್ಮಿಸಿದ್ದು, ರಾಷ್ಟ್ರೋತ್ಥಾನ ಶಾಲೆ ಬಳಿ ಮೇಲ್ಸೇತುವೆಗೆ ಅನುಮತಿ ದೊರೆತಿದೆೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಿಂಕ್‌ ರೋಡ್‌ ಕಲ್ಪಿಸಲಾಗಿದ್ದು, ಎರಡನೇ ಹಂತದ ಮೆಟ್ರೋ ಲೈನ್‌ ನಾಗವಾರ, ಥಣಿಸಂದ್ರದ ಮೂಲಕ ವಿಮಾನ ನಿಲ್ದಾಣಕ್ಕೆ ಮೆಟ್ರೋ ಯೋಜನೆಗೆ ಅನುಮತಿ ದೊರೆತಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?: ಕಾಲೇಜುಗಳಲ್ಲಿ ಗಾಂಜಾ, ಡ್ರಗ್ಸ್‌ ಮಾರಾಟ, ಅಪಾರ್ಟ್‌ಮೆಂಟ್‌ಗಳ ಕಸ ವಿಲೇವಾರಿ ಸಮರ್ಪಕವಾಗಿಲ್ಲದಿರುವುದು. ಗ್ರಾಮೀಣ ಪ್ರದೇಶಗಳಿಗೆ ಕಾವೇರಿ ನೀರು ಬರದಿರುವುದು. ಕೆರೆಗಳ ಹೂಳೆತ್ತಿ ನೀರು ತುಂಬಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿರುವುದು.

ಆಕಾಂಕ್ಷಿಗಳು
-ಕಾಂಗ್ರೆಸ್‌- ಕೃಷ್ಣ ಬೈರೇಗೌಡ
-ಬಿಜೆಪಿ- ಎ.ರವಿ, ಮುನೀಂದ್ರ ಕುಮಾರ್‌, ರಾಜಗೋಪಾಲ್‌
-ಜೆಡಿಎಸ್‌- ತಿಂಡ್ಲು ಮಂಜು

ಎರಡು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಂತ ಹಂತವಾಗಿ ಒಳಚರಂಡಿ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸಚಿವನಾಗಿದ್ದರೂ ಸರ್ಕಾರಿ ಬಂಗಲೆಗೆ ಹೋಗದೇ ಕ್ಷೇತ್ರದಲ್ಲಿಯೇ ಬಾಡಿಗೆ ಮನೆಯಲ್ಲಿದ್ದು, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರಾಮಾಣಿಕ ಸೇವೆಯನ್ನು ಕ್ಷೇತ್ರದ ಜನತೆ ಗುರುತಿಸುತ್ತಾರೆ ಎಂದು ನಂಬಿದ್ದೇನೆ.
-ಕೃಷ್ಣ ಬೈರೇಗೌಡ

ಹಿಂದಿನ ಫ‌ಲಿತಾಂಶ
-ಕೃಷ್ಣಬೈರೇಗೌಡ- ಕಾಂಗ್ರೆಸ್‌ 96,125
-ಎ.ರವಿ- ಬಿಜೆಪಿ 63,725
-ಹನುಮಂತೇಗೌಡ-ಜೆಡಿಎಸ್‌ 41,360

ಜನ ದನಿ
ಶಾಸಕರಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಸಹಕಾರ ನಗರ ಮುಖ್ಯ ರಸ್ತೆಯ ಎರಡೂ ಬದಿ ಪಾರ್ಕಿಂಗ್‌ ವ್ಯವಸ್ಥೆ, ಬೇಕಾಬಿಟ್ಟಿ ರಸ್ತೆ ಅಗೆಯುವುದು ನಿರಂತರ ನಡೆಯುತ್ತಿದೆ. ಅದನ್ನು ತಡೆಯುವ ಕೆಲಸ ಶಾಸಕರಿಂದ ಆಗಿಲ್ಲ.
-ಸುಮಾ ಕೃಷ್ಣ

ಸರ್ಕಾರ ಜನರಿಗೆ ಭಾಗ್ಯಗಳನ್ನು ಕೊಡುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸಬೇಕಿತ್ತು. ಅಭಿವೃದ್ಧಿ ಹೆಸರಲ್ಲಿ ಕೆರೆಗೆ ಕೊಳಚೆ ನೀರು ಬಿಟ್ಟರೆ ಏನ್‌ ಪ್ರಯೋಜನ ಬಂತು.
-ನವೀನ್‌ಕುಮಾರ್‌

ವಿದ್ಯಾರಣ್ಯಪುರದಲ್ಲಿ ಒಳಾಂಗಣ ಕ್ರೀಡಾಂಗಣ ಉತ್ತಮವಾಗಿದೆ. ಕಾಲೇಜುಗಳಲ್ಲಿ ಮುಕ್ತವಾಗಿಯೇ ಗಾಂಜಾ, ಡ್ರಗ್ಸ್‌ ಮಾರಲಾಗುತ್ತದೆ. ವೇಶ್ಯಾವಾಟಿಕೆಗೆ ಕಡಿವಾಣವಿಲ್ಲ. ವ್ಯಕ್ತಿ ಒಳ್ಳೆಯವರು, ಆದರೆ, ಅಕ್ರಮ ತಡೆಯದಿದ್ದರೆ ಏನ್‌ ಪ್ರಯೋಜನ?
-ಪೃಥ್ವಿ

ಟೆಲಿಕಾಂ ಲೇಔಟ್‌ನಲ್ಲಿ ರಸ್ತೆ ಮಾಡಲು ಯೋಜನೆ ರೂಪಿಸಿದರು. ಈಗ ಕಾವೇರಿ ನೀರು ಬರುತ್ತಿದೆ. ಬಸ್‌ ಸೌಕರ್ಯ ಇಲ್ಲ. ಹಾಪ್‌ಕಾಮ್ಸ್‌, ನಂದಿನಿ ಪಾರ್ಲರ್‌, ಇಂದಿರಾ ಕ್ಯಾಂಟೀನ್‌ ಆಗಬೇಕು. ಅಪರಾಧ ಪ್ರಕರಣ ನಿಯಂತ್ರಣದಲ್ಲಿವೆ.
-ಪರಮೇಶ್ವರ್‌

* ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next