Advertisement

Drought:ರಾಜ್ಯದ ಅರ್ಧದಷ್ಟು ಬೆಳೆ ಹಾನಿ- ಜಿಡಿಪಿ ಬೆಳವಣಿಗೆ ಮೇಲೆ ದುಷ್ಪರಿಣಾಮ:ಸಿದ್ದರಾಮಯ್ಯ

09:20 PM Sep 29, 2023 | Team Udayavani |

ಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ತೀವ್ರ ಬರದಿಂದಾಗಿ ಈ ವರ್ಷ ರಾಜ್ಯದ ಅರ್ಧದಷ್ಟು ಕೃಷಿ ಬೆಳೆ ಹಾನಿಯಾಗಿದೆ. ಒಟ್ಟು ಒಂದು ಕೋಟಿ ಎಕರೆ ಬೆಳೆ ನಷ್ಟವಾಗಿದ್ದು ರಾಜ್ಯದ ಜಿಡಿಪಿ ಬೆಳವಣಿಗೆಯ ಮೇಲೆ ಇದು ದುಷ್ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅರಣ್ಯ ಇಲಾಖೆಯು 2020-21ರ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ 50 ಅರಣ್ಯ ಸಿಬ್ಬಂದಿಗೆ “ಮುಖ್ಯಮಂತ್ರಿಗಳ ಪದಕ ಪ್ರದಾನ’ ಮಾಡಿ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಬರ ಬಾಧಿಸುತ್ತಿದೆ. ಈ ವರ್ಷ ಮಳೆಯಿಲ್ಲದೆ ಕೃಷಿ ಹಾನಿ ವಿಪರೀತವಾಗಿದ್ದು ರಾಜ್ಯದ ತಲಾ ಆದಾಯ ಕುಸಿಯಲಿದೆ. ಮಳೆ ಇಲ್ಲದೆ ಹೋದರೆ ಕಷ್ಟವಾಗಲಿದೆ ಎಂದು ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿದರು.

ಹವಾಮಾನ ವೈಪರಿತ್ಯದಿಂದ ಬರ ಪರಿಸ್ಥಿತಿ ಸೃಷ್ಟಿಯಾಗಲು ಅರಣ್ಯ ನಾಶವೇ ಕಾರಣ. ನಮ್ಮ ರಾಜ್ಯದ ಶೇ.33ರಷ್ಟು ಅರಣ್ಯ ಇರಬೇಕಿತ್ತು. ಆದರೆ ಈಗ ಶೇ.20ರಷ್ಟು ಮಾತ್ರ ಅರಣ್ಯವಿದೆ. ನಾವು ವನಮಹೋತ್ಸವ ಸೇರಿ ಹಲವು ಕಾರ್ಯಕ್ರಮಗಳ ಹೆಸರಿನಲ್ಲಿ ಪ್ರತಿ ವರ್ಷ ಕೋಟಿಗಟ್ಟಲೆ ಗಿಡ ನೆಡುತ್ತಿದ್ದೇವೆ. ಆದರೆ ಅರಣ್ಯ ವಿಸ್ತಾರಗೊಳ್ಳುತ್ತಿಲ್ಲ. ಇನ್ನಾದರೂ ಶೇ.1ರಷ್ಟಾದರೂ ಅರಣ್ಯ ವಿಸ್ತಾರಗೊಳಿಸಲು ಶ್ರಮಿಸೋಣ ಎಂದರು.

ದೊಡ್ಡ ಒತ್ತುವರಿದಾರರ ತೆರವು: ರಾಜ್ಯದಲ್ಲಿ ಅರಣ್ಯ ಭೂಮಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿದ್ದು ಆ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Advertisement

ಮೂರು ತಲೆಮಾರಿನಿಂದ 1978ಕ್ಕೆ ಮುನ್ನ ಅರಣ್ಯದಲ್ಲಿರುವ ಮತ್ತು ಗಡುವಿನೊಳಗೆ ಅರ್ಜಿ ಸಲ್ಲಿಸಿರುವ ಬಡವರಿಗೆ ಹಕ್ಕುಪತ್ರಗಳನ್ನು 3 ತಿಂಗಳೊಳಗೆ ಕೊಡಿಸಲು ಶ್ರಮಿಸಬೇಕು. ಅದೇ ರೀತಿ ಹೆಚ್ಚು ಅರಣ್ಯ ಭೂಮಿ ಕಬಳಿಸಿರುವವರ ವಿರುದ್ಧ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಿಸಬೇಕೆಂದು ಸಚಿವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಅರಣ್ಯ ಪಡೆ ಮುಖ್ಯಸ್ಥ ರಾಜೀವ್‌ ರಂಜನ್‌ ಮತ್ತಿತರರು ಪಾಲ್ಗೊಂಡಿದ್ದರು.

50 ಮಂದಿ ಅರಣ್ಯ ಇಲಾಖೆ ಸಿಬ್ಬಂದಿಗೆ ಪದಕ ಪ್ರದಾನ
2020-21 ಮತ್ತು 2021-22ರ ಸಾಲಿನಲ್ಲಿ ವನ್ಯಜೀವಿ ಸಂರಕ್ಷಣೆ, ಶೌರ್ಯ ಮತ್ತು ದಿಟ್ಟತನ, ಅಭಿವೃದ್ಧಿ, ಅರಣ್ಯ ಸಂರಕ್ಷಣೆ, ಕಾರ್ಯಯೋಜನೆ, ತರಬೇತಿ, ಸಂಶೋಧನೆ, ಮಾನವ – ಪ್ರಾಣಿ ಸಂಘರ್ಷ, ನವೀನತೆ, ವನ್ಯ ಜೀವಿ ಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅರಣ್ಯ ಇಲಾಖೆಯ 50 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯ ಮಂತ್ರಿ ಪದಕ ಪ್ರದಾನ ಮಾಡಲಾಯಿತು.

2020ನೇ ಸಾಲಿನ ಮುಖ್ಯ ಮಂತ್ರಿ ಪದಕವನ್ನು ವಲಯ ಅರಣ್ಯಾಧಿಕಾರಿಗಳಾದ ವಿ.ಗಣೇಶ್‌, ಮಹೇಶ್‌ ಕೆ., ವಿವೇಕ್‌ ಎಸ್‌., ಎಸ್‌.ಡಿ. ಬಬಲಾದಿ, ಸುನೀತ, ಪ್ರಿಯದರ್ಶಿನಿ ಎಚ್‌.ಸಿ., ಶ್ರೀನಿವಾಸ್‌ ನಾಯಕ್‌. ಉಪವಲಯ ಅರಣ್ಯಾಧಿಕಾರಿಗಳಾದ ಕಾಂತರಾಜು, ಅಂತೋಣಿ ಲಾರೆನ್ಸ್‌ ಸಿ., ಜಿ. ಬಾಲಕೃಷ್ಣ, ಮೋಹನ್‌ ಎಸ್‌.ನಾಯ್ಕ, ವೆಂಕಟೇಶ್‌ ನಾಯ್ಕ ಎಚ್‌., ಅಮೃತ್‌ ದೇಸಾಯಿ, ಅರಣ್ಯ ರಕ್ಷಕರಾದ ಸಂತೋಷ್‌ ಕುಮಾರ್‌ ಎಂ., ರಾಜುಚಂದ್ರ, ರವಿನಂದನ್‌ ಎಲ್‌., ನಾಗಪ್ಪ ಎಸ್‌ ಸಿದ್ಧರ್‌, ಎಚ್‌. ದೇವರಾಜ ಪಾಣ, ಪರಮೇಶ್‌, ಕೆ. ರಾಮಚಂದ್ರನ್‌, ಎಂ.ಡಿ ಅಯ್ಯಪ್ಪ, ಅರಣ್ಯ ವೀಕ್ಷಕ ಮೋಹನ್‌ ಕುಮಾರ್‌ ಕೆ.ಚಿ., ಕ್ಷೇಮಾಭಿವೃದ್ಧಿ ಅತ್ಯಬೋಧ ಪುರೋಹಿತ್‌, ವಾಹನ ಚಾಲಕ ಅನ್ನರ್‌, ಎಂ.ರಾಮಚಂದ್ರ ಪಡೆದುಕೊಂಡರು.

2021ನೇ ಸಾಲಿನಲ್ಲಿ ವಲಯ ಅರಣ್ಯಾಧಿಕಾರಿಗಳಾದ ರೇಣುಕಮ್ಮ ವಿ., ವಿನಯ್‌ ಕೆ.ಸಿ., ರಾಘವೇಂದ್ರ ಎಂ.ನಾಯ್ಕ, ಬ್ರಿಜೇಶ್‌ ವಿನಯ ಕುಮಾರ, ಪಿ.ಶ್ರೀಧರ್‌, ಉಪ ವಲಯ ಅರಣ್ಯ ಅಧಿಕಾರಿ ಹಾಗೂ ಮೋಜಣಿದಾರರಾದ ಸಿದ್ದರಾಜು ಟಿ., ಚಿದಾನಂದ ಎಲ್‌. ಬಡಗೇರ್‌, ಎಚ್‌.ರಾಮ, ಸಚಿನ್‌ ಈ ಬಿಸನಳ್ಳಿ, ಅಬ್ದುಲ್‌ ಖಯ್ಯುಮ್‌, ಮಂಜುನಾಥ್‌ ಪಿ.ಅಗೇರ, ಸಂತೋಷ್‌ ಶಿವಪ್ಪ ದಮ್ಮಸೂರು, ರಾಜೇಂದ್ರ ಜಿ.ಡಿ., ರಾಘವೇಂದ್ರ ಕೋಡಗಲ್‌, ಅರಣ್ಯ ರಕ್ಷಕರಾದ ಅಂದಾನಪ್ಪ ಈರಪ್ಪ ಹಣಸಿ, ಗುಂಡಪ್ಪ ಶಾಮರಾಯ, ಮೋಹ್ನೀನ್‌ ಬೇಜಾದ್‌, ಗೋಪಾಲ ಡಿ. ನಾಯ್ಕ, ರಮೇಶ್‌ ಕೆ. ಬಡಿಗೇರ, ಪರಸಪ್ಪ ಜಾಜಪ್ಪಗೋಳ, ರಾಮಾ ಬಿಳಿಯಾ ನಾಯ್ಕ, ರವಿ ಎಂ.ವಡ್ಡರಕಲ್ಲು, ವಾಹನ ಚಾಲಕರಾದ ಮಹಮ್ಮದ್‌ ಫ‌ಯಾಜ್‌, ಕ್ಷೇಮಾಭಿವೃದ್ಧಿ ನೌಕರರಾದ ಸಿದ್ದರಾಮ, ಮಹ್ಮದ್‌ ಇಸಾಕ್‌ ಇಸ್ಮಾಯಿಲ್‌ ಕೂಸನೂರು ಅವರು ಮುಖ್ಯ ಮಂತ್ರಿ ಪದಕ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next