Advertisement

ನೆಪ ಬಿಡಿ; ರಸ್ತೆ ಗುಂಡಿ ಮುಚ್ಚಿ

12:28 PM Oct 06, 2018 | |

ಬೆಂಗಳೂರು: “ಯಾವುದೇ ನೆಪ ಹುಡುಕದೇ, ಸಬೂಬು ಹೇಳದೇ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ’ ಎಂದು ಹೈಕೋರ್ಟ್‌ ಶುಕ್ರವಾರ ಬಿಬಿಎಂಪಿಗೆ ತಾಕೀತು ಮಾಡಿತು.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಂದುವರಿಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ನೆಪ, ಸಬೂಬು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮುಂದುವರಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ಸೂಚನೆ ನೀಡಿತು.

ವಿಚಾರಣೆ ವೇಳೆ “ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಹೇಗೆ ಸಾಗಿದೆ?, ಯಾವ ಕಾರ್ಯವಿಧಾನ ಅನುಸರಿಸುತ್ತಿದ್ದೀರಿ?, ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿದ್ದೀರಾ ಎಂದು ನಿಮ್ಮ ಮನಸ್ಸು ಮುಟ್ಟಿ ಹೇಳಿ ಎಂದು ಮುಖ್ಯ ನ್ಯಾಯಮೂರ್ತಿಗಳು, ಬಿಬಿಎಂಪಿ ಪರ ವಕೀಲರಿಗೆ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿದ್ದೇವೆ ಎಂದು ಹೇಳುವುದಿಲ್ಲ,

ಆದರೆ, ಆ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರು. ಆಗ “ಹೇಗಿದ್ರೂ ದಸರಾ ರಜೆಗಳು ಬರುತ್ತವೆ, ಆಗ ಸಂಚಾರ ದಟ್ಟಣೆ ಕಡಿಮೆ ಆಗಿರುತ್ತದೆ, ಆ ಸಂದರ್ಭದಲ್ಲಿ ಕಾಮಗಾರಿ ಮುಂದುವರಿಸಬಹುದು ಎಂದು ಕಾಯಬೇಡಿ, ಕೆಲಸ ನಿರಂತರವಾಗಿ ನಡೆಯಲಿ. ನೆಪ, ಸಬೂಬು ಬಿಟ್ಟು ಕೆಲಸ ಮಾಡಿ ಎಂದು ಮುಖ್ಯ ನ್ಯಾಯಮೂರ್ತಿಗಳು ಬಿಬಿಎಂಪಿ ಪರ ವಕೀಲರಿಗೆ ತಾಕೀತು ಮಾಡಿತು.

ಇದೇ ವೇಳೆ “ಫಿಕ್ಸ್‌ ಮೈ ಸ್ಟ್ರೀಟ್‌’ ಎಂಬ ಆ್ಯಪ್‌ ಆರಂಭಿಸಲಾಗಿದೆ. 2 ಹಾಟ್‌ ಮಿಕ್ಸ್‌ ಪ್ಲಾಂಟ್‌ ಆರಂಭಿಸಲು ಟೆಂಡರ್‌ ಕರೆಯಲಾಗಿದೆ. 5 ವರ್ಷ ಪಾಲಿಕೆಯೇ ರಸ್ತೆಗಳ ನಿರ್ವಹಣೆ ಮಾಡಲಿದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ನ್ಯಾಯಪೀಠ, ನಿಮ್ಮ ಆ್ಯಪ್‌ಗೆ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಿ. ಈವರೆಗೆ ಎಷ್ಟು ದೂರುಗಳು ಬಂದಿವೆ.

Advertisement

ಎಷ್ಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿ ಸಲ್ಲಿಸಿ. ರಸ್ತೆಗಳ ಸ್ಥಿತಿಗತಿಯ ಫೋಟೋ ಅಪ್‌ಲೋಡ್‌ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲು ಪೋರ್ಟಲ್‌ ತಯಾರಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಎಂದು ಸಲಹೆ ನೀಡಿ, ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತು.

ಜಲಮಂಡಳಿ ವರದಿ: ವಸ್ತುಸ್ಥಿತಿ ವರದಿ ಸಲ್ಲಿಸಿದ ಬೆಂಗಳೂರು ಜಲಮಂಡಳಿ, ನೀರು ಹಾಗೂ ಒಳಚರಂಡಿ ಸಂಪರ್ಕಕ್ಕೆ ರಸ್ತೆ ಅಗೆಯುವ ಮುನ್ನ ಸಾರ್ವನಿಕರು ಬಿಬಿಎಂಪಿಯಿಂದ ಅನುಮತಿ ಪಡೆಯುವುದು ಕಡ್ಡಾಯವೆಂದು ತಿಳಿಸಿತು. ನಗರದ ರಸ್ತೆಗಳ ನಿರ್ವಹಣೆ ಹಾಗೂ ಗುಂಡಿಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಗೆ ಎಲ್ಲ ರೀತಿಯ ಸಹಕಾರ ನೀಡಲು ಜಲಮಂಡಳಿ ಸಿದ್ಧವಿದೆ.

ರಸ್ತೆ ಅಗೆಯಲು ಪಾಲಿಕೆ ಅನುಮತಿ ನೀಡಿದರೆ ಮಾತ್ರ ಜಲಮಂಡಳಿಯು ಪ್ರಕ್ರಿಯೆಗೆ ಅನುಮೋದನೆ ನೀಡಲಿದೆ. ನೀರು ಹಾಗೂ ಒಳಚರಂಡಿ ಪೈಪ್‌ಲೈನ್‌ಗಳನ್ನು ಬದಲಿಸುವ ಸಂದರ್ಭದಲ್ಲಿ ರಸ್ತೆಗಳನ್ನು ಅಗೆಯಬೇಕಿದ್ದಲ್ಲಿ, ಪಾಲಿಕೆಯಿಂದ ಅನುಮತಿ ಪಡೆಯಲಾಗುತ್ತದೆ. ಕಾಮಗಾರಿಯ ಬಳಿಕ ಅಗೆದಿರುವ ರಸ್ತೆಗಳನ್ನು ಮತ್ತೆ ಮೊದಲಿನಂತೆ ಮಾಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಜಲಮಂಡಳಿಯೇ ಭರಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next