Advertisement

“ಸಂಪದ’ಯೋಜನೆಗೆ ಸದ್ಯದಲ್ಲೇ ಚಾಲನೆ

12:37 PM May 30, 2017 | Team Udayavani |

ಬೆಂಗಳೂರು: ಆಹಾರ ಬೆಳೆ, ಪದಾರ್ಥ ವ್ಯರ್ಥವಾಗುವುದನ್ನು ತಡೆಯಲು ಹಾಗೂ ಕೃಷಿಕರ ಆದಾಯ ದ್ವಿಗುಣಗೊಳಿಸುವ ಜತೆಗೆ ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೂಪುಗೊಂಡ “ಸಂಪದ’ ಯೋಜನೆ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹೇಳಿದರು.

Advertisement

ಅಸೋಚಾಮ್‌ ಸಂಸ್ಥೆಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಆಹಾರ ಸಂಸ್ಕರಣಾ ಕ್ಷೇತ್ರದ ಬಲವರ್ಧನೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿತ್ರಿಗಳ ಆಶಯ. ಆ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ.

ಮುಖ್ಯವಾಗಿ ಬೆಳೆ- ಆಹಾರ ನಷ್ಟ ಹಾಗೂ ವ್ಯರ್ಥವಾಗುವುದನ್ನು ತಗ್ಗಿಸಲು ಆದ್ಯತೆ ನೀಡಬೇಕಿದೆ. ಆಹಾರ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ, ಸಂಸ್ಕರಿಸದಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಸಲು, ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.

ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ವ್ಯವಸ್ಥೆ ಕಲ್ಪಿಸುವತ್ತ ಚಿಂತನೆ ನಡೆದಿದ್ದು, ಕೆಲವೆಡೆ ಅಪಸ್ವರ ಕೇಳಿಬಂದಿದೆ. ಆದರೆ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ನೇರ ಬಂಡವಾಳ ಹೂಡಿಕೆಯಿಂದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಬಂದರೆ ಅದರ ಲಾಭ ಕೃಷಿಕರಿಗೆ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಇನ್ನೂ ನಾಲ್ಕು ಫ‌ುಡ್‌ಪಾರ್ಕ್‌ ನಿರ್ಮಾಣ: ಈ ಹಿಂದೆ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಆಹಾರ ಧಾನ್ಯ ಶೇಖರಿಸಿಡಲು ಅಗತ್ಯವಾದಷ್ಟು ಮೆಗಾ ಫ‌ುಡ್‌ ಪಾರ್ಕ್‌ಗಳಿರಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಆರು ಫ‌ುಡ್‌ಪಾರ್ಕ್‌ಗಳು ನಿರ್ಮಾಣವಾಗಿದ್ದು, ಇನ್ನೂ ನಾಲ್ಕು ಫ‌ುಡ್‌ಪಾರ್ಕ್‌ಗಳು ತಲೆಯೆತ್ತಲಿವೆ. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಬೇಕಾದರೆ ಕೇಂದ್ರದೊಂದಿಗೆ ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು ಎಂದರು.

Advertisement

ಅಸೋಚಾಮ್‌ ಕರ್ನಾಟಕ ಶಾಖೆ ಅಧ್ಯಕ್ಷ ಆರ್‌.ಶಿವಕುಮಾರ್‌, “ರೈತರು ತಮ್ಮ ಬೆಳೆಗಳನ್ನು ಸೂಕ್ತ ಕಾಲದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುಂತೆ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಕೃಷಿಯಿಂದ ಮಾರುಕಟ್ಟೆಗೆ ಉತ್ಪನ್ನವನ್ನು ತಲುಪಿಸಿ ಲಾಭದಾಯಕ ಬೆಲೆಯಲ್ಲಿ ಮಾರಾಟ ಮಾಡಲು ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಬೇಕು. ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಲ್ಲಿ ಆಹಾರ ಸಂಸ್ಕರಣೆ ಮಹತ್ವದ ಬಗ್ಗೆ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಕೃಷಿ ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಶೋಕ್‌ ದಳವಾಯಿ, ಉದ್ಯಮಿ ಸದಾನಂದ ಮಯ್ಯ, ಅಸೋಚಾಮ್‌ ಕರ್ನಾಟಕ ಶಾಖೆಯ ಸಲಹೆಗಾರರಾದ ಡಾ.ವಸಂತಕುಮಾರ್‌, ಕಿಶೋರ್‌ ಜಾಗಿರ್‌ದಾರ್‌, ಎಸ್‌ಐಡಿಬಿಐಯ ಆನಂದಿ ಚರಣ್‌ ಸಾಹು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next