Advertisement

31 ರಂದು ಬೂತ್ ವಿಜಯ ಅಭಿಯಾನಕ್ಕೆ ಶಾ ಅವರಿಂದ ಚಾಲನೆ: ಡಿವಿಎಸ್

04:09 PM Dec 29, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸುಶಾಸನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೀಡುವ ಬಿಜೆಪಿ ಸರಕಾರ ಮುಂದುವರೆಯಬೇಕು ಎಂಬ ದೃಷ್ಟಿಯಿಂದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ಅವರ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದಗೌಡ ಅವರು ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಳಿಕ ಭವಿಷ್ಯದ ಯೋಜನೆಗೆ ಜನಮತ ಲಭಿಸಿದೆ. ಮಂಡ್ಯದಲ್ಲಿ ಅಮಿತ್ ಶಾ ಅವರು ಈ ಕೆಲಸವನ್ನು ಮಾಡಲಿದ್ದಾರೆ. 1 ಲಕ್ಷ ಜನರು ಸೇರುವ ಸಮಾವೇಶ ಇದಾಗಲಿದೆ ಎಂದರು.

ನಮ್ಮ ಪಕ್ಷಕ್ಕೆ ಇವೆರಡು ದಿನಗಳು ಮಹತ್ವದ್ದು. ಪಕ್ಷವು ಚುನಾವಣೆ ಕೆಲಸಕ್ಕೆ ವೇಗ ನೀಡಲು ಈಗಾಗಲೇ ಜನಸಂಕಲ್ಪ ಸಭೆಗಳನ್ನು ನಡೆಸಿದೆ. ಜನವರಿ 2ರಿಂದ 15ರವರೆಗೆ ಬಿಜೆಪಿ ‘ಬೂತ್ ವಿಜಯ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಅದನ್ನು ನಾಳೆ (ಡಿ.31) ಬೆಂಗಳೂರಿನಲ್ಲಿ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ವಿವರಿಸಿದರು. ಅಮಿತ್ ಶಾ ಅವರು ನಾಳೆ (ಡಿ.30) ಮತ್ತು ನಾಡಿದ್ದು ರಾಜ್ಯ ಪ್ರವಾಸ ಮಾಡಲಿದ್ದಾರೆ. ದೇಶದ ಎಲ್ಲ ಕೆಲಸ ಕಾರ್ಯಗಳು, ಪಕ್ಷದ ಕಾರ್ಯ (ಸ್ವಾಮಿ ಕಾರ್ಯ- ಸ್ವಕಾರ್ಯ) ಇದರಿಂದ ಆಗಲಿದೆ ಎಂದರು.

ಪಕ್ಷದ ನೂತನ ಕ್ರಿಯಾಯೋಜನೆಗಳ ಕುರಿತು ಅಮಿತ್ ಶಾ ಅವರು ಮಾರ್ಗದರ್ಶನ ನೀಡುವರು. ಬೆಂಗಳೂರಿನ ಮೂರು ಸಂಘಟನಾ ಜಿಲ್ಲೆಗಳಲ್ಲಿ 8,200 ಬೂತ್‍ಗಳಿವೆ. ನಗರ ಜಿಲ್ಲೆಗಳ ಅಧ್ಯಕ್ಷರಾದ ಬಿ. ನಾರಾಯಣಗೌಡ, ಎನ್.ಆರ್. ರಮೇಶ್, ಜಿ. ಮಂಜುನಾಥ್ ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಕರ್ತರನ್ನು ಚುರುಕುಗೊಳಿಸಿ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಶೇ 100 ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ನಡೆಯಲಿದೆ. 20 ಲಕ್ಷ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದರು. ‘ಮನ್ ಕಿ ಬಾತ್’ ಗೆ 60 ಸಾವಿರ ವೆಬ್ ಲಿಂಕ್ ಡೌನ್‍ಲೋಡ್ ಆ ಅವಧಿಯಲ್ಲಿ ಆಗಬೇಕೆಂಬ ಪ್ರಯತ್ನ ನಡೆಯಲಿದೆ. ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತದೆ ಎಂದು ವಿವರ ನೀಡಿದರು.

Advertisement

ಶೇ 50ಕ್ಕೂ ಹೆಚ್ಚು ಕಡೆ ಪೇಜ್ ಪ್ರಮುಖರನ್ನೂ ನಿಯೋಜಿಸಲಾಗಿದೆ. ಸಕ್ರಿಯರಾಗಿ ಇರುವ ಕಾರ್ಯಕರ್ತರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬದ್ಧತೆಯ ರಾಜಕಾರಣಿಯಾಗಿದ್ದು, ಕೇಂದ್ರ ಸಹಕಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕಾರಣದಲ್ಲಿ ಸೇವೆಗೆ ಒತ್ತು ಕೊಡುವ ವ್ಯಕ್ತಿ ಅವರಾಗಿದ್ದಾರೆ. ಪಕ್ಷದ ರಾಜಕೀಯ ನಿರ್ವಹಣೆಯಲ್ಲೂ ಅವರು ‘ರಾಜಕಾರಣದ ಚಾಣಕ್ಯ’ ಎನಿಸಿದ್ದಾರೆ ಎಂದರು.

ರೈತರಿಗೆ ಬಿತ್ತನೆ ಬೀಜ ನೀಡುವುದು ಸೇರಿದಂತೆ ಅವರ ಉತ್ಪನ್ನಗಳ ಮಾರಾಟದ ವರೆಗೆ ಕೆಲಸ ಕಾರ್ಯಗಳನ್ನು ಸಹಕಾರಿ ರಂಗ ನಿರ್ವಹಿಸುತ್ತಿದೆ. ಹಾಲಿನ ಯೂನಿಯನ್ ವಿಚಾರದಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ವಿವರಿಸಿದರು.

ಚುನಾವಣೆಗೆ ನಾವು ಸದಾ ಸನ್ನದ್ಧ
ಚುನಾವಣೆಗೆ ನಾವು ಸದಾ ಸನ್ನದ್ಧರಾಗಿ ಇರುತ್ತೇವೆ. ನಮ್ಮಲ್ಲಿ ಎಲ್ಲ ಲೈಟಿಂಗ್ ವ್ಯವಸ್ಥೆ ರೆಡಿ ಇದೆ. ಮೈನ್ ಸ್ವಿಚ್ ಆನ್ ಮಾಡಿದರೆ ಆಯ್ತು. ಎಲ್ಲ ಕಡೆ ಲೈಟ್‍ಗಳು ಆನ್ ಆಗುತ್ತವೆ. ಅಮಿತ್ ಶಾ ಅವರು ಕೊಡುವ ಮಾರ್ಗದರ್ಶನ ನಮಗೆ ಸಿಗಲಿದೆ ಎಂದು ಸದಾನಂದ ಗೌಡ ಅವರು ತಿಳಿಸಿದರು.
ನಾವು ಅತ್ಯಂತ ಸಂಘಟಿತರಾಗಿದ್ದೇವೆ. ಪಕ್ಷವು ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದೆ ಎಂದರು.

ಮೀಸಲಾತಿಗೆ ನಾವು ಆದ್ಯತೆ ಕೊಟ್ಟಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೂ ನ್ಯಾಯ ನೀಡಲು ಮುಂದಾಗಿದ್ದೇವೆ ಎಂದ ಅವರು, ಹಿಂದೆ ಹಳೆ ಮೈಸೂರು ಭಾಗದಲ್ಲಿ ನಮಗೆ ಕಡಿಮೆ ಬೆಂಬಲ ಇತ್ತು. ಈಗ ‘ಮಿಷನ್ 150’ ಅಡಿಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಲವರ್ಧನೆ ಆಗಿದೆ. ಅಲ್ಲಿನ 89 ಕ್ಷೇತ್ರಗಳಲ್ಲಿ ಶೇ 50ರಷ್ಟು ಶಾಸಕ ಸ್ಥಾನ ಗೆಲ್ಲಲು ಗುರಿ ಇಟ್ಟುಕೊಂಡಿದ್ದೇವೆ. ಇದನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ. ದಿನನಿತ್ಯ ಬೇರೆಬೇರೆ ಕಡೆಯಿಂದ ಬಿಜೆಪಿಯತ್ತ ಮುಖಂಡರು ಸೇರುವುದನ್ನು ನೀವೂ ಕಂಡಿದ್ದೀರಿ. ಇವತ್ತು ನಮ್ಮ ವಿಚಾರ- ಗುರಿಗೆ ವೇಗ ಸಿಕ್ಕಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಅಧಿಕಾರಕ್ಕೆ ಬಂದಾಗ ಎಲ್ಲರನ್ನು ಸಮಾನವಾಗಿ ನಾವು ನೋಡಿದ್ದೇವೆ. ಬೆಂಗಳೂರು- ಮೈಸೂರು ಹೈವೇ, ಹೈಸ್ಪೀಡ್ ರೈಲು, ಮೆಟ್ರೋ ವಿಸ್ತರಣೆ ವಿಚಾರದಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next