Advertisement
ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇರುವುದರಿಂದ ಮಳೆಗಾಲ ಆರಂಭವಾಗುವವರೆಗೆ ನಗರಕ್ಕೆ ನೀರು ಪೂರೈಸುವ ಸಲುವಾಗಿ ನಗರಸಭೆಯು ಪ್ರತಿ ವಾರ್ಡ್‌ಗಳಿಗೆ 4 ದಿನಕ್ಕೊಮ್ಮೆ ನೀರು ಪೂರೈಸುವ ಕಠಿನ ನಿರ್ಣಯ ಕೈಗೊಂಡಿದೆ. ಇಷ್ಟು ದಿನ ಮನೆ, ಅಪಾರ್ಟ್‌ಮೆಂಟ್, ಹೋಟೆಲ್, ಕಚೇರಿಗಳಿಗೆ ಮಾತ್ರ ನೀರಿನ ಅಗತ್ಯವಿತ್ತು. ಆದರೆ ಮುಂದಿನ ವಾರದಿಂದ ಬೇಸಿಗೆ ರಜೆ ಮುಕ್ತಾಯಗೊಳ್ಳಲಿದ್ದು, ಮೇ 29 ರಿಂದ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು, ಅಂಗನವಾಡಿಗಳು ಪ್ರಾರಂಭಗೊಳ್ಳಲಿವೆ. ಶಾಲೆ, ಅಂಗನವಾಡಿಗಳಲ್ಲಿ ಬಿಸಿಯೂಟ, ಕುಡಿಯಲು, ಶೌಚಾಲಯಗಳಿಗೆಲ್ಲ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಗತ್ಯವಿದ್ದು, ಮಳೆ ಬಾರದಿದ್ದರೆ ಸಮಸ್ಯೆ ಉಂಟಾಗಲಿದೆ.
ಎ. 10 ರಿಂದ ಶಾಲೆಗಳಿಗೆ ರಜೆ ನೀಡಲಾಗಿದ್ದು, ಮೇ 29 ಅಂದರೆ ಸುಮಾರು 1 ತಿಂಗಳು 20 ದಿನಗಳ ಬಳಿಕ ಮತ್ತೆ ಆರಂಭವಾಗುತ್ತಿರುವುದರಿಂದ ಬಾವಿ ಅಥವಾ ಬೋರ್‌ವೆಲ್‌ಗಳಿಂದ ತೆಗೆಯುವ ನೀರು ಎಷ್ಟು ಸುರಕ್ಷಿತ ಅನ್ನುವುದನ್ನು ಪರೀಕ್ಷಿಸುವುದು ಒಳ್ಳೆಯದು. ಹೆಚ್ಚಿನ ಬಾವಿಗಳ ನೀರು ತಳಮಟ್ಟಕ್ಕಿಳಿದಿರುವುದರಿಂದ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದರಿಂದ ಶಾಲೆ ಹಾಗೂ ಕಾಲೇಜುಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಿ ನೀರು ಬಳಸುವುದು ಉತ್ತಮ.
Related Articles
ಈಗಾಗಲೇ ಜಿಲ್ಲೆಯ ಹಲವೆಡೆ ಅಲ್ಪ- ಸ್ವಲ್ಪ ಮಳೆಯಾಗಿದ್ದು, ಎಲ್ಲರೂ ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ವರ್ಷಗಳಲ್ಲಿ ಎಪ್ರಿಲ್- ಮೇ ತಿಂಗಳಲ್ಲಿ ಸಾಧಾರಣ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಅಷ್ಟೇನೂ ಮಳೆಯಾಗದಿರುವ ಕಾರಣ ಸ್ವರ್ಣ ನದಿಯಲ್ಲಿಯೂ ನೀರಿನ ಪ್ರಮಾಣ ಸಂಪೂರ್ಣ ಇಳಿಮುಖವಾಗಿದೆ. ಶಾಲಾ- ಕಾಲೇಜುಗಳು ಪ್ರಾರಂಭವಾಗಲು ಒಂದು ವಾರವಿದ್ದು, ಅಷ್ಟರೊಳಗೆ ಸ್ವಲ್ಪವಾದರೂ ಉತ್ತಮ ಮಳೆಯಾದರೆ ನೀರಿನ ಸಮಸ್ಯೆ ನಿವಾರಣೆಯಾಗಬಹುದು.
Advertisement
ಸಭೆಯಲ್ಲಿ ಚರ್ಚಿಸಲಾಗಿದೆಬಿ. ಇ. ಒ. ನೇತೃತ್ವದ ಸಭೆಯಲ್ಲಿ ನಗರದ ಶಾಲೆಗಳಿಗೆ ಉಂಟಾಗಲಿರುವ ನೀರಿನ ಸಮಸ್ಯೆ ಕುರಿತು ಚರ್ಚಿಸಿದ್ದೇವೆ. ಬಾವಿ, ಕೊಳವೆ ಬಾವಿಗಳಲ್ಲಿ ನೀರಿದ್ದರೆ ಅದನ್ನು ಶುದ್ಧೀಕರಿಸಿ ಬಳಸಲು ಸೂಚನೆ ನೀಡಲಾಗಿದೆ. ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
– ಮಂಗಳಾ, ಅಧ್ಯಕ್ಷೆ, ಉಡುಪಿ ವಲಯದ ಶಿಕ್ಷಕರ ಸಂಘ ಡಿಡಿಪಿಐ ಗಮನಕ್ಕೆ ತಂದಿದ್ದೇವೆ
ಇನ್ನೊಂದು ವಾರದೊಳಗೆ ಶಾಲೆಗಳು ಮತ್ತೆ ಆರಂಭಗೊಳ್ಳಲಿದ್ದು, ನಿತ್ಯ ಬಳಕೆಗೆ ಸಾಕಷ್ಟು ನೀರಿನ ಅಗತ್ಯವಿದೆ. ಕೆಲವು ಬಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಇದರಿಂದ ಕುಡಿಯಲು, ಬಿಸಿಯೂಟಕ್ಕೆಲ್ಲ ಸಮಸ್ಯೆಯಾಗಲಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಅವರು ಸ್ಥಳೀಯಾಡಳಿತಕ್ಕೆ ಮನವರಿಕೆ ಮಾಡಲು ತಿಳಿಸಿದ್ದಾರೆ. ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
– ಶಶಿಧರ ಶೆಟ್ಟಿ, ಜಿಲ್ಲಾಧ್ಯಕ್ಷರು, ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘ ಉಡುಪಿ – ಪ್ರಶಾಂತ್ ಪಾದೆ